ADVERTISEMENT

ಮಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ

ಬೇಂಗ್ರೆ, ಗಾಂಧಿನಗರ, ಮಲ್ಲಿಕಟ್ಟೆ, ಮಣ್ಣಗುಡ್ಡೆ ಶಾಲೆಯಲ್ಲಿ ಮೊದಲ ಹಂತ; ಜಿಲ್ಲೆಯಾದ್ಯಂತ ವಿಸ್ತರಣೆಗೆ ಚಿಂತನೆ

ವಿಕ್ರಂ ಕಾಂತಿಕೆರೆ
Published 29 ಜನವರಿ 2026, 7:51 IST
Last Updated 29 ಜನವರಿ 2026, 7:51 IST
ಸರ್ಕಾರಿ ಶಾಲೆಯಲ್ಲಿ ಚೆಸ್ ಪಾಠ ಮಾಡುತ್ತಿರುವ ತರಬೇತುದಾರರು 
ಸರ್ಕಾರಿ ಶಾಲೆಯಲ್ಲಿ ಚೆಸ್ ಪಾಠ ಮಾಡುತ್ತಿರುವ ತರಬೇತುದಾರರು    

ಮಂಗಳೂರು: ತರಬೇತಿ ದುಬಾರಿ ಎಂದೇ ಹೇಳಲಾಗುವ ಚೆಸ್‌ ಕ್ರೀಡೆಯನ್ನು ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಹೇಳಿಕೊಡಲು ದಕ್ಷಿಣ ಕನ್ನಡ ಚೆಸ್ ಸಂಸ್ಥೆ (ಡಿಕೆಸಿಎ) ಮುಂದಾಗಿದ್ದು, ಪ್ರಾಯೋಗಿವಾಗಿ ಗುರುತಿಸುವ ನಾಲ್ಕು ಶಾಲೆಗಳ ಪೈಕಿ ಒಂದರಲ್ಲಿ ‘ತರಗತಿ’ ಆಯೋಜಿಸಲಾಗಿದೆ.

ಶಾಲೆಯಲ್ಲಿ ಚೆಸ್‌ ಯೋಜನೆಗೆ ನಗರದ ಬೆಂಗ್ರೆಯ ಸ್ಯಾಂಡ್ಸ್‌ ಪಿಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾಗಿದ್ದು ಗಾಂಧಿನಗರ, ಕದ್ರಿ–ಮಲ್ಲಿಕಟ್ಟೆ ಮತ್ತು ಮಣ್ಣಗುಡ್ಡೆ ಶಾಲೆಗಳಲ್ಲಿ ಸದ್ಯದಲ್ಲೇ ತರಬೇತಿ ನಡೆಯಲಿದೆ. ನಂತರ ಜಿಲ್ಲೆಯಾದ್ಯಂತ ವಿಸ್ತರಿಸುವ ಚಿಂತನೆ ಚೆಸ್ ಸಂಸ್ಥೆಯದ್ದು. 

ಯೋಜನೆಗೆಂದೇ ಖರೀದಿಸಿರುವ ಅಯಸ್ಕಾಂತದ ಚೆಸ್‌ ಬೋರ್ಡ್‌ನೊಂದಿಗೆ ಪರಿಣತಿ ಪಡೆದಿರುವ ಇಬ್ಬರು ತರಬೇತುದಾರರನ್ನು ಶಾಲೆಗೆ ಕಳುಹಿಸಲಾಗುತ್ತದೆ. ಅವರು 2 ತಾಸುಗಳಿಗೂ ಹೆಚ್ಚು ಸಮಯ ತರಬೇತಿ ನೀಡುತ್ತಾರೆ. ಚೆಸ್ ಆಟ ಅಲ್ಪಸ್ವಲ್ಪ ತಿಳಿದಿರುವವರಿಗೆ ಪ್ರೇರಣೆ ತುಂಬಲಾಗುತ್ತದೆ. ಚೆಸ್ ಬಗ್ಗೆ ಏನೇನೂ ಗೊತ್ತಿಲ್ಲದವರಿಗೆ ಆರಂಭಿಕ ‘ನಡೆ’ಗಳನ್ನು ಹೇಳಿಕೊಡಲಾಗುತ್ತದೆ. ಬೆಂಗ್ರೆ ಶಾಲೆಯಲ್ಲಿ ಆರ್‌ಸಿಸಿಯ ತರಬೇತುದಾರ ರಾಹುಲ್ ಜೈನ್ ಮತ್ತು ಹೆಸರಾಂತ ಆಟಗಾರ ರವೀಶ್ ಕೋಟೆ ಅವರು ಕಿಂಗ್‌, ಕ್ವೀನ್‌, ರೂಕ್ಸ್, ಬಿಷಪ್‌, ನೈಟ್ಸ್‌, ಪಾನ್‌ಗಳೆಂದರೆ ಏನು, ಅವುಗಳ ಚಲನೆ ಹೇಗೆ, ಯಾವುದಕ್ಕೆ ಎಷ್ಟು ನಡೆಗಳು ಇರುತ್ತವೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರು.  

ADVERTISEMENT

‘ಸರ್ಕಾರಿ ಶಾಲೆಯ ಮಕ್ಕಳಿಗೂ ಚೆಸ್ ಆಟ ಕೈಗೆಟುಕಬೇಕು ಎಂಬ ಉದ್ದೇಶದಿಂದ, ಅವರನ್ನು ಚೆಸ್ ಲೋಕಕ್ಕೆ ಕರೆತರುವ ಗುರಿಯೊಂದಿಗೆ ಈ ಯೋಜನೆ ಆರಂಭಿಸಿದ್ದು ತರಬೇತುದಾರರ ಸಂಭಾವನೆ ಸೇರಿದಂತೆ ಎಲ್ಲ ವೆಚ್ಚವನ್ನು ಜಿಲ್ಲಾ ಚೆಸ್ ಸಂಸ್ಥೆ ಭರಿಸುತ್ತದೆ. ಆಡಬಲ್ಲವರನ್ನು ಮತ್ತು ಆಸಕ್ತಿ ಇರುವವರನ್ನು ಗುರುತಿಸಲು ಸಾಧ್ಯವಾದರೆ ಸಂಸ್ಥೆಯ ಶ್ರಮ ಸಾರ್ಥಕ’ ಎಂದು ಡಿಕೆಸಿಎ ಸಲಹಾ ಸಮಿತಿ ಸದಸ್ಯ ಮತ್ತು ರಾಜ್ಯ ಚೆಸ್ ಸಂಸ್ಥೆಯ ಉಪಾಧ್ಯಕ್ಷ ರಮೇಶ್ ಕೋಟೆ ತಿಳಿಸಿದರು.

ಮೊಬೈಲ್ ಗೀಳು ಬಿಡಿಸಲು ಅನುಕೂಲ

‘ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳು ಇದ್ದಾರೆ. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಅವರಿಗೆ ತರಬೇತಿ ಪಡೆಯಲು ಕಷ್ಟವಾಗುತ್ತದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಚೆಸ್ ತರಬೇತಿ ನೀಡಬೇಕು ಎಂಬ ಯೋಚನೆ ವರ್ಷದ ಹಿಂದೆಯೇ ಹೊಳೆದಿತ್ತು. ತಾರ್ಕಿಕ ಮತ್ತು ಸೈದ್ಧಾಂತಿಕ ಸಾಮರ್ಥ್ಯಕ್ಕೆ ಸಾಣೆ ಹಿಡಿಯಲು ಚೆಸ್ ನೆರವಾಗುತ್ತದೆ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟವೂ ಹೆಚ್ಚಾಗಲಿದೆ ಎಂಬ ವಿಶ್ವಾಸದಿಂದ ಇದನ್ನು ಆರಂಭಿಸಲಾಗಿದೆ. ಆನ್‌ಲೈನ್‌ನಲ್ಲೂ ಚೆಸ್ ಕಲಿಯಬಹುದು. ಆದರೆ ತರಬೇತುದಾರರ ಬಳಿ ಸಿಗುವ ತರಬೇತಿಗೆ ಅದು ಸಮಾನವಾಗುವುದಿಲ್ಲ’ ಎಂದು ಡಿಕೆಸಿಎ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ಶಾಲೆಗಳಲ್ಲಿ ಆರಂಭಿಸಿ ಜಿಲ್ಲೆಯಾದ್ಯಂತೆ ವಿಸ್ತರಿಸುವುದು ಸಂಸ್ಥೆಯ ಉದ್ದೇಶ. ತಮಿಳುನಾಡಿನಲ್ಲಿ ಇಂಥ ಪ್ರಯೋಗ ಕ್ರಾಂತಿಯನ್ನೇ ಮಾಡಿದೆ. ಬುದ್ದಿವಂತರ ಜಿಲ್ಲೆ ಎಂದು ಹೇಳಲಾಗುವ ದಕ್ಷಿಣ ಕನ್ನಡದಲ್ಲೂ ಪ್ರತಿಭೆಗಳು ಬೆಳಕಿಗೆ ಬರಲಿ ಎಂಬುದು ನಮ್ಮ ಆಶಯ’ ಎಂದು ಅವರು ತಿಳಿಸಿದರು.   

ಮೊಬೈಲ್ ಗೀಳಿನಿಂದಾಗಿ ಈಚೆಗೆ ಆಟಿಸಂ ಸಮಸ್ಯೆ ಎಲ್ಲೆಡೆ ಕಾಡಲು ಆರಂಭವಾಗಿದೆ. ಇಂಥ ಸಂದರ್ಭಕ್ಕೆ ಚೆಸ್‌ ಪರಿಣಾಮಕಾರಿ ಮದ್ದು. ಆಟದಲ್ಲಿ ತೊಡಗುವುದರಿಂದ ಕ್ರೀಡಾ ಮನೋಭಾವವೂ ಬೆಳೆಯುತ್ತದೆ.
–ಡಾ. ಅಮರಶ್ರೀ ಅಮರನಾಥ್‌, ಡಿಕೆಸಿಎ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.