ADVERTISEMENT

ಮಂಗಳೂರು | ಚೂರಿ ಇರಿತ, ಹಲ್ಲೆ ಪ್ರಕರಣ: ಏಳು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:48 IST
Last Updated 3 ಮೇ 2025, 14:48 IST
ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಕುಮಾರ್ ಕೊಲೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಕುಮಾರ್ ಕೊಲೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ   

ಮಂಗಳೂರು: ನಗರದಲ್ಲಿ ಮೂರು ಕಡೆ ಗುರುವಾರ ತಡರಾತ್ರಿ ಮತ್ತು ಶುಕ್ರವಾರ ನಸುಕಿನಲ್ಲಿ ನಡೆದ ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಗಳ ಸಂಬಂಧ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ ತಿಳಿಸಿದ್ದಾರೆ.

ನಗರದ ಹೊರವಲಯದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಕಣ್ಣೂರಿನಲ್ಲಿ ಶುಕ್ರವಾರ ನಸುಕಿನಲ್ಲಿ ನೌಷಾದ್‌ ಅಹ್ಮದ್‌ (39) ಎಂಬುವರಿಗೆ ಚೂರಿ ಇರಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಡಿಪುವಿನ ಲೋಹಿತಾಶ್ವ (32), ವೀರನಗರದ ಪುನೀತ್‌ (28), ಕುತ್ತಾರಿನ ಗಣೇಶ ಪ್ರಸಾದ (23) ಬಂಧಿತರು ಎಂದು ಅವರು ತಿಳಿಸಿದ್ದಾರೆ.

ಕಣ್ಣೂರು ಬಸ್‌ ನಿಲ್ದಾಣದ ಬಳಿ ನಿಂತಿದ್ದ ನೌಷಾದ್‌ ಅಹ್ಮದ್‌ ಅವರ ಬಳಿ ‘ಮಂಗಳೂರಿಗೆ ಬಸ್‌ ಇದೆಯಾ’ ಎಂದು ವಿಚಾರಿಸುವ ನೆಪದಲ್ಲಿ ಆರೋಪಿಗಳು ಬೆನ್ನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು.

ADVERTISEMENT

‘ಈ ಪ್ರಕರಣ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್‌ 126 (2) (ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳುವುದು), ಸೆಕ್ಷನ್‌ 118 (1)(ಸ್ವಯಂಪ್ರೇರಿತವಾಗಿ ಮಾರಕಾಯುಧಗಳಿಂದ ಹಲ್ಲೆ ನಡೆಸುವುದು) ಹಾಗೂ ಸೆಕ್ಷನ್ 109 (ಕೊಲೆ ಯತ್ನ), ಮತ್ತು ಸೆಕ್ಷನ್ 3 (5)ರ (ಅಪರಾಧ ಕೃತ್ಯ ನಡೆಸಲು ಇಬ್ಬರಿಗಿಂತ ಹೆಚ್ಚು ಮಂದಿ ಅಕ್ರಮ ಕೂಟ ರಚಿಸಿಕೊಳ್ಳುವುದು) ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಅಲೇಕಳ ನಿವಾಸಿ ಫೈಝಲ್ (40) ಎಂಬುವರಿಗೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಗುರುವಾರ ತಡರಾತ್ರಿ ಚೂರಿ ಇರಿದದ್ದು ನಾವೇ ಎಂದು ಮೇಲಿನ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 189 (2) (ಕಾನೂನುಬಾಹಿರ ಕೃತ್ಯ ನಡೆಸಲು ಐವರಿಗಿಂತ ಹೆಚ್ಚು ಮಂದಿ ರಚಿಸಿಕೊಳ್ಳುವುದು), ಸೆಕ್ಷನ್‌ 189 (4) (ಅಕ್ರಮ ಕೂಟ ರಚಿಸಿಕೊಂಡು ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು), ಸೆಕ್ಷನ್‌ 191 (2) (ಗಲಭೆ ನಡೆಸುವುದು), ಸೆಕ್ಷನ್‌ 109 ಮತ್ತು ಸೆಕ್ಷನ್ 3 (5) ಅಡಿ ಎಫ್‌ಐಆರ್ ದಾಖಲಾಗಿದೆ ಎಂದರು.

ಕಾವೂರು ಠಾಣಾ ವ್ಯಾಪ್ತಿಯ ದೇರೇಬೈಲ್ ಕೊಂಚಾಡಿ ಬಳಿ ಮೀನುಮಾರುವ ಮಹಮ್ಮದ್ ಲುಕ್ಮಾನ್‌ ಅವರ ಮೇಲೆ ಶುಕ್ರವಾರ ನಸುಕಿನಲ್ಲಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಜಪೆ ಬಳಿಯ ಕಳವಾರು ಕುರ್ಸುಗುಡ್ಡೆಯ ಲಿಖಿತ್‌ ಪೂಜಾರಿ (29), ಕುತ್ತಾರು ಸುಭಾಷ್ ನಗರದ ರಾಕೇಶ್‌ (34), ಸುರತ್ಕಲ್‌ ಎಂಎಸ್ಇಜೆಡ್ ನವಗ್ರಾಮ ಆಶ್ರಯ ಕಾಲೊನಿಯ ಧನರಾಜ್ ಅಲಿಯಾಸ್‌ ಧನು (24) ಹಾಗೂ ಪ್ರಸ್ತುತ ಮೂಡುಬಿದಿರೆ ಬನ್ನಡ್ಕದಲ್ಲಿ ವಾಸವಿರುವ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿ ಗ್ರಾಮದ ಅಂಗರಕೆರೆ ನಿವಾಸಿ ಪ್ರಶಾಂತ್ ಶೆಟ್ಟಿ (26) ಬಂಧಿತ ಆರೋಪಿಗಳು ಎಂದು ಕಮಿಷನರ್‌ ತಿಳಿಸಿದರು. ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 189 (2), 191 (2), 115 (2) (ಸ್ವಯಂಪ್ರೇರಿತ ಹಲ್ಲೆ), 118 (1), 352 (ಉದ್ದೇಶಪೂರ್ವಕ ಅವಹೇಳನದ ಮೂಲಕ ಶಾಂತಿಭಂಗವನ್ನುಂಟುಮಾಡುವುದು) ಮತ್ತು 351 (2) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಕಮಿಷನರ್‌ ತಿಳಿಸಿದರು.

5 ಬಸ್‌ಗಳಿಗೆ ಕಲ್ಲೆಸೆತೆ: ನಾಲ್ವರ ಬಂಧನ

ಮಂಗಳೂರಿನ ನಗರ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯ ಪಂಪ್‌ವೆಲ್‌ನಲ್ಲಿ ಕೆಎಸ್‌ಆರ್‌ಟಿಸಿಯ ಐದು ಬಸ್‌ಗಳಿಗೆ ಕಲ್ಲೆಸೆದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಬಾಬುಗುಡ್ಡೆಯ ಬಾಲಚಂದ್ರ (31), ಅಕ್ಷಯ್ (21), ಜಪ್ಪಿನಮೊಗರಿನ ಶಬೀನ್ ಪಡಿಕ್ಕಲ್‌ (38), ಮಂಜನಾಡಿಯ ರಾಕೇಶ್ ಎಂ (26) ಬಂಧಿತರು. ಆರೋಪಿಗಳ ವಿರುದ್ಧ ಬಿಎನ್ಎಸ್‌ ಸೆಕ್ಷನ್‌ 324 (ಕಿಡಿಗೇಡಿ ಕೃತ್ಯದಿಂದ ಆಸ್ತಿಗೆ ಹಾನಿಗೊಳಿಸುವುದು)(4), 3 (5), ಮತ್ತು ಕರ್ನಾಟಕ ಸ್ವತ್ತು ಹಾನಿ ತಡೆ (ಕೆಪಿಡಿಎಲ್‌ಪಿ) ಕಾಯ್ದೆಯ ಸೆಕ್ಷನ್ 2 (ಎ) ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ೆಂದು ಪೊಲೀಸ್‌ ಕಮಿಷನರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.