ಬಂಧನ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ವಾಸವಿಲ್ಲದ ಮನೆಯಲ್ಲಿ ಪೂಜಿಸುತ್ತಿದ್ದ ದೈವದ ಮೂರ್ತಿಗಳನ್ನು ಕದ್ದ ಇಬ್ಬರನ್ನು ಸುರತ್ಕಲ್ ಪೊಲೀಸರು ಮಂಗಳವಾರ ಬಂಧಿಸಿರುವುದಾಗಿ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಜಪೆ ಕೊಂಚಾರ್‌ನ ಬದ್ರಿಯಾ ನಗರ ಮುನಾಫ್ ಮಂಜಿಲ್ ನಿವಾಸಿ, ಸುರತ್ಕಲ್ ಚೊಕ್ಕಬೆಟ್ಟು ಝಿಹಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ವಾಜಿದ್ ಜೆ (27) ಮತ್ತು ಬೆಳ್ತಂಗಡಿ ತೆಂಕ ಕಾರಂದೂರು ಗ್ರಾಮದ ಮಸೀದಿ ಬಳಿ ನಿವಾಸಿ, ಸದ್ಯ ಜೋಕಟ್ಟೆಯ ಕೆಬಿಎಸ್ ರೈಲ್ವೆ ಗೇಟ್ ಬಳಿ ವಾಸವಾಗಿದ್ದ ಸೈಯದ್ ಅಲಿ (40) ಬಂಧಿತರು.
ಕುಳಾಯಿಯ ಯಶೋದ ಕ್ಲಿನಿಕ್ ಬಳಿಯ ಸುರೇಶ್ ಪತ್ನಿ ಅಮಿತಾ ನೀಡಿರುವ ದೂರಿನಲ್ಲಿ ತಾಯಿ ಮನೆಯಲ್ಲಿದ್ದ ದೈವದ ಮೂರ್ತಿಗಳು ಹಾಗೂ ಪೂಜಾ ಪರಿಕರಿಗೆ ಪೂಜೆ ಮಾಡಿ ದೀಪ ಹಚ್ಚಿ ಬರುತ್ತಿದ್ದು ಕಳೆದ ಡಿ.26ರಂದು ಹೆಂಚು ತೆಗೆದು ಒಳಗೆ ಹೋದ ಕಳ್ಳರು ಒಟ್ಟು ₹ 1 ಲಕ್ಷ ಮೌಲ್ಯದ ಪಸಪ್ಪ ದೈವದ ತಾಮ್ರದ ಮೂರ್ತಿ, ಮಂತ್ರದೇವತೆಯ ಬೆಳ್ಳಿ ಮೂರ್ತಿ, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ, ಬೆಳ್ಳಿ ಕಡಗ, 2 ತಾಮ್ರದ ಘಂಟೆ, 4 ತಾಮ್ರದ ಚೊಂಬು ಮತ್ತು ಎಲ್‌ಇಡಿ ಟಿವಿ ಕದ್ದಿರುವುದಾಗಿ ತಿಳಿಸಿದ್ದರು.
ಸುತ್ತಮುತ್ತಲ ಸಿಸಿಟಿರ್ವಿ ದೃಶ್ಯಾವಳಿ ಪರಿಶೀಲಿಸಿ ವಾಜಿದ್‌ನನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಯಂತೆ ಸಾಮಗ್ರಿಗಳನ್ನು ಖರೀದಿಸಿದ ಸೈಯದ್ ಅಲಿಯನ್ನು ಬಂಧಿಸಲಾಯಿತು. ಅವರಿಂದ ₹ 1ಲಕ್ಷ 95 ಸಾವಿರ ಮೊತ್ತದ ಮಂತ್ರ ದೇವತೆ ಮೂರ್ತಿ, ಕೊಡೆ, ಕಡಗ, ₹ 3050 ಮೊತ್ತದ ಪೂಜಾ ಸಾಮಗ್ರಿ, ಟಿವಿ, ಸೆಟ್‌ಟಾಪ್ ಬಾಕ್ಸ್, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಕಾವೂರು ಠಾಣೆ ವ್ಯಾಪ್ತಿಯಲ್ಲಿ ಕದ್ದಿದ್ದ ₹ 30 ಸಾವಿರ ಮೌಲ್ಯದ ಸ್ಕೂಟರ್ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ವಿವರಿಸಿದ್ದಾರೆ.
ವಾಜಿದ್ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ಇದ್ದು ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಕೊಲೆಯತ್ನ, ದರೋಡೆ, ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.