ADVERTISEMENT

ಮಂಗಳೂರು ದಸರಾಕ್ಕೆ ಭರದ ಸಿದ್ಧತೆ

ಕುದ್ರೋಳಿ ಗೋರ್ಣನಾಥ ಕ್ಷೇತ್ರದಲ್ಲಿ ನಾಳೆಯಿಂದ ನವರಾತ್ರಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:15 IST
Last Updated 21 ಸೆಪ್ಟೆಂಬರ್ 2025, 6:15 IST
ಮಂಗಳೂರು ದಸರಾ
ಮಂಗಳೂರು ದಸರಾ   

ಮಂಗಳೂರು: ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಿಂದ ಅ.3ರವರೆಗೆ ನಡೆಯಲಿರುವ  ‘ಮಂಗಳೂರು ದಸರಾ’ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ. ಮಹಾನವಮಿಯಿಂದ ಆರಂಭವಾಗಿ ವಿಜಯದಶಮಿವರೆಗೆ ಧಾರ್ಮಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ ಕಾರ್ಯಕ್ರಮಗಳ ಸಂಗಮವು ಕ್ಷೇತ್ರದಲ್ಲಿ ಕಳೆಗಟ್ಟಲಿದೆ.

ಸೆ.22ರಂದು ಬೆಳಿಗ್ಗೆ 8.30ಕ್ಕೆ ಗುರುಪ್ರಾರ್ಥನೆ, ನವಕಲಶಾಭಿಷೇಕ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ 11.30ಕ್ಕೆ ರಾಮಕೃಷ್ಣ ಮಿಷನ್ ಅಧ್ಯಕ್ಷ ಜಿತಕಾಮಾನಂದಜಿ, ಬ್ರಹ್ಮಕುಮಾರೀಸ್ ಮುಖ್ಯಸ್ಥೆ ವಿಶ್ವೇಶ್ವರಿ ಅವರು ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಮಧ್ಯಾಹ್ನ 12 ಗಂಟೆಗೆ ನವದುರ್ಗೆಯರು, ಮಹಾಗಣಪತಿ, ಶಾರದಾ ಮಾತೆಯ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

22ರಂದು ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಮಾಜಮುಖಿ ಕೆಲಸ ಮಾಡುವ ಸಾನಿಧ್ಯ ಶಿಕ್ಷಣ ಸಂಸ್ಥೆ, ಎಂ ಫ್ರೆಂಡ್ಸ್‌ ಚಾರಿಟಬಲ್ ಟ್ರಸ್ಟ್, ವೈಟ್‌ಡೌಸ್ ಸಂಸ್ಥೆಯ ಪ್ರಮುಖರನ್ನು ಗೌರವಿಸಲಾಗುವುದು. ಗೋಲ್ಡನ್ ಬುಕ್ ಆಫ್ ವರ್ಡ್‌ ರೆಕಾರ್ಡ್ ಮಾಡಿದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಸನ್ಮಾನಿಸಲಾಗುವುದು. ಸೆ.25ರಂದು ಸಂಜೆ 6 ಗಂಟೆಗೆ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಜನಾರ್ದನ ಪೂಜಾರಿ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದರು ಹೇಳಿದರು.

ADVERTISEMENT

ಸೆ.23ರಂದು ಸಂಜೆ 4 ಗಂಟೆಯಿಂದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಸೆ.24ರಂದು ಮಕ್ಕಳಿಗೆ ಮುದ್ದು ಶಾರದೆ, ನವದುರ್ಗೆ ಸ್ಪರ್ಧೆ ಬೆಳಿಗ್ಗೆ 9ರಿಂದ ನಡೆಯಲಿದೆ. ಸೆ.26ರಂದು ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ. ಸೆ.28ರಂದು ಬೆಳಿಗ್ಗೆ 4 ಗಂಟೆಗೆ ದಸರಾ ಮ್ಯಾರಥಾನ್, 9ಕ್ಕೆ ವಿಶ್ವ ಬಿಲ್ಲವ ಮಹಿಳಾ ಸಂಘದ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ, ಮಕ್ಕಳ ದಸರಾ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ಒಬ್ಬರು ಸಾಧಕಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ವಿಶೇಷ ಸಾಧನೆ ಮಾಡಿದ ಡಾ. ಮೋಹನ ಆಳ್ವ, ತುಕಾರಾಂ ಪೂಜಾರಿ, ಜಿ. ಶಂಕರ್ ಅವರನ್ನು ಸನ್ಮಾನಿಸಲಾಗುವುದು. ಧಾರ್ಮಿಕ ಕಾರ್ಯಕ್ರಮದಲ್ಲಿ ದುರ್ಗಾ ಹೋಮ, ಪಂಚದುರ್ಗಾ ಹೋಮ, ಆರ್ಯ ದುರ್ಗಾ ಹೋಮ, ಅಂಬಿಕಾ ದುರ್ಗ ಹೋಮ, ಭಗವತಿ ದುರ್ಗಾ ಹೋಮ, ಚಂಡಿಕಾ ಹೋಮ, ಮಹಿಷಮರ್ದಿನಿ ದುರ್ಗಾ ಹೋಮ ಮೊದಲಾದ ಧಾರ್ಮಿಕ ಕಾರ್ಯಗಳು ನಡೆಯತ್ತವೆ ಎಂದು ಪದ್ಮರಾಜ್ ಹೇಳಿದರು.

ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಸಮಿತಿಯ ದೇವೇಂದ್ರ ಪೂಜಾರಿ, ಶೈಲೇಂದ್ರ ಸುವರ್ಣ, ಹರೀಶ್ ಕುಮಾರ್, ರಾಧಾಕೃಷ್ಣ, ಲತೀಶ್ ಸುವರ್ಣ, ಚಂದನ್ ಮತ್ತಿತರರು ಇದ್ದರು.

ಡಿಜೆ ಕಡ್ಡಾಯ ನಿಷೇಧ

ವಿಜಯದಶಮಿಯ ದಿನ ಸಂಜೆ 4 ಗಂಟೆಗೆ ಶಾರದಾ ದೇವಿಯ ಶೋಭಾಯಾತ್ರೆ ನಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಲ್ಲ ಮನೆಯವರು ವಿದ್ಯುದ್ದೀಪಗಳಿಂದ ಅಲಂಕರಿಸಿ ಶೋಭಾಯಾತ್ರೆಗೆ ಮೆರುಗು ತುಂಬಬೇಕು. ಈ ಬಾರಿ ಕಡ್ಡಾಯವಾಗಿ ಡಿಜೆ ನಿಷೇಧಿಸಲಾಗಿದೆ. ಸ್ತಬ್ದಚಿತ್ರಗಳ ಬಗ್ಗೆ ಮುಂಚಿತವಾಗಿ ಸಮಿತಿಗೆ ಮಾಹಿತಿ ನೀಡಬೇಕು. ಶಿಸ್ತುಬದ್ಧವಾಗಿ ಶೋಭಾಯಾತ್ರೆ ನಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೆರವಣಿಗೆ ಸಮಿತಿ ಮುಖ್ಯಸ್ಥ ಹರಿಕೃಷ್ಣ ಬಂಟ್ವಾಳ ಹೇಳಿದರು.

ಚಾವಣಿ ಉದ್ಘಾಟನೆ

ಗೋಕರ್ಣನಾಥ ದೇವಸ್ಥಾನದ ಒಳ ಆವರಣದಲ್ಲಿ ಚಾವಣಿ ನಿರ್ಮಿಸಲಾಗಿದೆ. ಉಡುಪಿಯ ಶಂಕರ ರೂಫಿಂಗ್ ಕಂಪನಿ ಇದರ ನಿರ್ಮಾಣ ಮಾಡಿದೆ. ನೂತನ ವ್ಯವಸ್ಥೆಯ ಉದ್ಘಾಟನೆಯು ಸೆ.21ರ ಸಂಜೆ 6.30 ಗಂಟೆಗೆ ಜನಾರ್ದನ ಪೂಜಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದರು.

ದಸರಾ ವಿಶೇಷ

ಮಕ್ಕಳ ದಸರಾ ಮುದ್ದು ಶಾರದೆ ಸ್ಪರ್ಧೆ

ಭಕ್ತಿಗೀತೆ

ಚಿತ್ರಕಲೆ ಸ್ಪರ್ಧೆ

ಅಸಾಮಾನ್ಯ ಸ್ತ್ರೀ ಪುರಸ್ಕಾರ

ದಸರಾ ಮ್ಯಾರಥಾನ್

ರುದ್ರ ತಾಂಡವಂ ನೃತ್ಯ ಸ್ಪರ್ಧೆ

ದೇಹದಾರ್ಢ್ಯ ಸ್ಪರ್ಧೆ

ಕಿನ್ನಿಪಿಲಿ ಕವನ ಸ್ಪರ್ಧೆ

ಮ್ಯಾರಥಾನ್ ಫನ್‌ರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.