ADVERTISEMENT

ದಂತ ವೈದ್ಯ ಸೀಟ್ ಉಳಿಕೆ ಇಳಿಕೆ; ಸಚಿವ ಡಾ. ಎಂ.ಸಿ.ಸುಧಾಕರ

76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನದಲ್ಲಿ ಸಚಿವ ಡಾ. ಎಂ.ಸಿ.ಸುಧಾಕರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:19 IST
Last Updated 7 ಫೆಬ್ರುವರಿ 2026, 6:19 IST
ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನಲ್ಲಿ ದಂತ ವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿದ ವೈದ್ಯರು : ಪ್ರಜಾವಾಣಿ ಚಿತ್ರ
ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನಲ್ಲಿ ದಂತ ವೈದ್ಯರ ಸಮ್ಮೇಳನದಲ್ಲಿ ಭಾಗವಹಿಸಿದ ವೈದ್ಯರು : ಪ್ರಜಾವಾಣಿ ಚಿತ್ರ   

ಮಂಗಳೂರು: ದಂತ ವೈದ್ಯಕೀಯ (ಬಿಡಿಎಸ್) ಕೌನ್ಸೆಲಿಂಗ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ತಂದಿರುವ ಬದಲಾವಣೆಯಿಂದಾಗಿ ಖಾಲಿ ಸೀಟ್‌ಗಳ ಉಳಿಕೆಯ ಪ್ರಮಾಣ ಇಳಿಕೆಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು. 

ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ 76ನೇ ಭಾರತೀಯ ದಂತ ವೈದ್ಯಕೀಯ ಸಮ್ಮೇಳನ –2026 ಅನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 

‘ಹಿಂದೆ ದಂತ ವೈದ್ಯಕೀಯ ಸೀಟ್‌ಗಳ ಉಳಿಕೆ ಹೆಚ್ಚಿತ್ತು. ದಂತ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬಂದ ಮೇಲೆ ವಿದ್ಯಾರ್ಥಿಗಳಿಗೆ ಪೂರಕವಾಗಿ ಸಾಕಷ್ಟು ಬದಲಾವಣೆ ತರಲಾಗಿದ್ದು, ದಂತ ವೈದ್ಯಕೀಯ ಕ್ಷೇತ್ರಕ್ಕೆ ಮರುಜೀವ ಸಿಕ್ಕಂತಾಗಿದೆ’ ಎಂದರು. 

ADVERTISEMENT

‘ನಾವು ಶಿಕ್ಷಣ ಪಡೆಯುವ ವೇಳೆ ಶೇ 50ರಷ್ಟು ಹೆಣ್ಣು ಮಕ್ಕಳು ದಂತ ವೈದ್ಯಕೀಯ ಶಿಕ್ಷಣ ಕೋರ್ಸ್‌ ಅನ್ನು ಆಯ್ದುಕೊಳ್ಳುತ್ತಿದ್ದರು. ಈಗ ಈ ಕೋರ್ಸ್ ಆಯ್ದುಕೊಳ್ಳುವ ಸ್ತ್ರೀ– ಪುರುಷರ ಅನುಪಾತ 90:10 ಆಗಿದೆ. ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಾಧನೆ ಗಮನಾರ್ಹವಾಗಿದೆ. ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ 32 ವಿಶ್ವವಿದ್ಯಾಲಯಗಳು, 10ಕ್ಕೂ ಅಧಿಕ ಪರಿಗಣಿತ ವಿವಿಗಳು ಇವೆ. ಇವುಗಳ ಪದ ಪ್ರದಾನ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳ ಶೈಕ್ಷಣಿಕ ಸಾಧನೆ ಕಂಡು ನಿಬ್ಬೆರಗಾಗುತ್ತದೆ' ಎಂದರು. 

ಕೃತಕ ಬುದ್ಧಿಮತ್ತೆಯೂ ಎಲ್ಲ ಕ್ಷೇತ್ರಗಳಂತೆ ದಂತ ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲೂ ಸಾಕಷ್ಟು ಸುಧಾರಣೆ ತಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಸೆಂಟರ್‌ ಆಫ್ ಎಕ್ಸಲೆನ್ಸ್ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದರು. 

ಭಾರತೀಯ ದಂತ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ರ ನಂದಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಧೋಬ್ಲೆ, ಡಾ. ಸಚಿನ್ ಮೆಹತಾ, ಡಾ. ನಾಗೇಂದ್ರ ಕುಮಾರ್, ಡಾ. ಜಗದೀಶ್ಚಂದ್ರ, ಡಾ. ಸಂತಮಾರ್ ಕಣ್ಣನ್, ಡಾ. ಕೆ. ನಿಲ್ಲನ್ ಶೆಟ್ಟಿ ಉಪಸ್ಥಿತರಿದ್ದರು. ಡಾ. ಶಿವಶರಣ್ ಶೆಟ್ಟಿ ಸ್ವಾಗತಿಸಿದರು. 

ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ದೇಶದ ವಿವಿಧ ರಾಜ್ಯಗಳ ದಂತ ವೈದ್ಯರು, 30ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯ ತಜ್ಞರು ಭಾಗವಹಿಸಿದ್ದಾರೆ.  

ರಾಜಕೀಯಕ್ಕಿಂತ ವೈದ್ಯ ವೃತ್ತಿಯಲ್ಲೇ ತೃಪ್ತಿ’

‘ನನಗೆ ರಾಜಕೀಯಕ್ಕಿಂತ ದಂತ ವೈದ್ಯನಾಗಿ ರೋಗಿಗೆ ಚಿಕಿತ್ಸೆ ನೀಡುವುದರಲ್ಲೇ ಹೆಚ್ಚು ತೃಪ್ತಿಯಿದೆ. ಚಿಕಿ‌ತ್ಸೆಯಿಂದ ಗುಣಮುಖನಾಗಿ ತೆರಳುವ ರೋಗಿಯ ಮೊಗದಲ್ಲಿ ಅರಳುವ ಖುಷಿ ವೃತ್ತಿಯ ಸಾರ್ಥಕ ಭಾವ ಮೂಡಿಸುತ್ತದೆ.

ರಾಜಕೀಯ ಹಾಗಲ್ಲ ನಾವು ನಿತ್ಯ ಸಮಾಜದೊಂದಿಗೆ ವ್ಯವಹರಿಸಬೇಕಾಗುತ್ತದೆ. ಒಳ್ಳೆಯ ನಿರ್ಧಾರಗಳನ್ನೇ ಕೈಗೊಂಡರೂ ಅದರಿಂದ ಬಾಧಿತರಾಗುವ ಕೆಲವು ಮಂದಿ ನಮ್ಮನ್ನು ದೂಷಿಸಬಹುದು. ವೈದ್ಯರಿಗೆ ವೃತ್ತಿಯಲ್ಲಿ ಒತ್ತಡವಿದ್ದರೂ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ಮೇಲೆ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು.

ಆದರೆ ರಾಜಕೀಯ ಎಂದಿಗೂ ಅನಿಶ್ಚಿತ ನೆಮ್ಮದಿಯ ನಿದ್ದೆ ಮಾಡಲಾಗದು ಬೆಳಗಾಗುವುದರಲ್ಲಿ ತಲ್ಲಣವೂ ಸೃಷ್ಟಿಯಾಗಬಹುದು’ ಎಂದು ಡಾ. ಎಂ.ಸಿ. ಸುಧಾಕರ ತಮ್ಮ ಮನದ ಭಾವ ವ್ಯಕ್ತಪಡಿಸಿದಾಗ ಸಭಿಕ ದಂತ ವೈದ್ಯರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ನಂತರ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.