ADVERTISEMENT

ಮಂಗಳೂರು| ಶ್ವಾನಗಳ ವೈಯ್ಯಾರಕ್ಕೆ ಮುದಗೊಂಡ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:57 IST
Last Updated 26 ಜನವರಿ 2026, 7:57 IST
ವೇದಿಕೆ ಮೇಲೆ ಶ್ವಾನಗಳನ್ನು ಪ್ರದರ್ಶಿಸಿದ ಮಾಲೀಕರು ಪ್ರಜಾವಾಣಿ ಚಿತ್ರ 
ವೇದಿಕೆ ಮೇಲೆ ಶ್ವಾನಗಳನ್ನು ಪ್ರದರ್ಶಿಸಿದ ಮಾಲೀಕರು ಪ್ರಜಾವಾಣಿ ಚಿತ್ರ    

ಮಂಗಳೂರು: ಮೂರು ಮೀಟರ್ ಎತ್ತರದ ವೇದಿಕೆಯ ರಿಂಗ್‌ನಲ್ಲಿ ಬಾಲ ಆಡಿಸುತ್ತ, ನಾಲಿಗೆ ಚಾಚುತ್ತ ಓಲಾಡುತ್ತ ಮಾಲೀಕನ ಆದೇಶಕ್ಕೆ ತಕ್ಕಂತೆ ಭಾವ–ಭಂಗಿ ಪ್ರದರ್ಶಿಸಿದ ವಿವಿಧ ತಳಿಯ, ಹಲವು ಬಗೆಯ ಶ್ವಾನಗಳು ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ಶ್ವಾನಪ್ರಿಯರ ಮನಗೆದ್ದವು. 

ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿ ಮತ್ತು ಪಶುಸಂಗೋಪನೆ ಇಲಾಖೆ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ 29 ಪ್ರಾಥಮಿಕ ಸುತ್ತಿನ ಸ್ಪರ್ಧೆ ಮೊದಲು ನಡೆಯಿತು. ಪ್ರತಿ ಸುತ್ತಿನಲ್ಲಿ ವಿಜೇತವಾದ ಶ್ವಾನ ಚಾಂಪಿಯನ್‌ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿತ್ತು. ಸಾಮರ್ಥ್ಯ, ವಿದೇಯತೆ ಮತ್ತು ಒಲವನ್ನು ಪ್ರದರ್ಶಿಸುವುದರ ಆಧಾರದಲ್ಲಿ ಗಮನಿಸಿ ಅಂಕಗಳನ್ನು ನೀಡಲಾಯಿತು. ಗಾತ್ರ, ನಿಲುವು ಇತ್ಯಾದಿ ಹಲವರನ್ನು ಆಕರ್ಷಿಸಿದರೆ ಅಲಂಕಾರ ಮಾಡಿಸಿಕೊಂಡು ತಂದಿದ್ದ ಶ್ವಾನಗಳು ಮಕ್ಕಳಿಗೆ ಮುದ ನೀಡಿದವು. 

ಖ್ಯಾತ ಮುಧೋಳ ತಳಿ, ತಂಪು ವಾತಾವರಣದಲ್ಲಿ ಬದುಕುವ ಸೈಬೀರಿಯನ್ ಹಸ್ಕಿ, ರೋಮಗಳು ಹೆಚ್ಚು ಇರುವ, ಯುಕೆಯ ಗೋಲ್ಡನ್ ಪೂಡಲ್‌,  ಅಮೆರಿಕನ್ ಬುಲ್ಲಿ, ಗೋಲ್ಡನ್ ರಿಟ್ರೀವರ್‌, ಸಾಮಾನ್ಯವಾಗಿ ಕಾಣಸಿಗುವ ಲ್ಯಾಬ್ರಡರ್, ಜರ್ಮನ್ ಶೆಫರ್ಡ್‌ ಮುಂತಾದವುಗಳ ಜೊತೆ ಹಂಟರ್‌, ಗ್ರೇಟ್ ಡೇನ್‌, ಪೊಮೆರೇನಿಯನ್‌, ಶಿ ತ್ಸು, ಶಿ ಆಪ್ಸೊ, ಚೌಚೌ ಮುಂತಾದವುಗಳ ಜೊತೆಯಲ್ಲಿ ಸ್ಥಳೀಯ ತಳಿಗಳೂ ಗಮನ ಸೆಳೆದವು. 

ADVERTISEMENT

‘33 ತಳಿಯ 217 ಶ್ವಾನಗಳನ್ನು ಈ ಬಾರಿ ಮಾಲೀಕರು ತೆಗೆದುಕೊಂಡು ಬಂದಿದ್ದಾರೆ. ಈ ಬಾರಿ ಎತ್ತರದ ವೇದಿಕೆಯಲ್ಲಿ ಪ್ರದರ್ಶನ ಆಯೋಜಿಸಿದ್ದರಿಂದ ನೋಡುಗರಿಗೆ ಅನುಕೂಲವಾಯಿತು’ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಮಾಧ್ಯಮದವರಿಗೆ ತಿಳಿಸಿದರು.

ಪ್ರಾಥಮಿಕ ಸುತ್ತಿನಲ್ಲಿ ವಿಜೇತರಾದವುಗಳ ಮಾಲೀಕರಿಗೆ ಪ್ರಥಮ ₹ 3 ಸಾವಿರ, ದ್ವಿತೀಯ ₹ 2 ಸಾವಿರ ಮತ್ತು ತೃತೀಯ ₹ 1 ಸಾವಿರ ನಗದು ನೀಡಲಾಯಿತು. ಚಾಂಪಿಯನ್‌ ಆದ ಶ್ವಾನದ ಮಾಲೀಕ ₹ 25 ಸಾವಿರ ನಗದು ಪಡೆದುಕೊಂಡರು. ದ್ವಿತೀಯ ₹ 20 ಸಾವಿರ, ತೃತೀಯ ₹ 15 ಸಾವಿರ ನೀಡಲಾಯಿತು. 

ಶ್ವಾನದೊಂದಿಗೆ ನಗೆಸೂಸಿದ ಮಾಲೀಕರು ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.