ADVERTISEMENT

ಮಂಗಳೂರು ದಸರಾ: ಶಾರದೆ, ನವದುರ್ಗೆಯರ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:33 IST
Last Updated 2 ಅಕ್ಟೋಬರ್ 2025, 23:33 IST
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಗೊಂಡ ಶಾರದಾದೇವಿಯ ಶೋಭಾಯಾತ್ರೆ ಗುರುವಾರ  ನೆರವೇರಿತು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಗೊಂಡ ಶಾರದಾದೇವಿಯ ಶೋಭಾಯಾತ್ರೆ ಗುರುವಾರ  ನೆರವೇರಿತು ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್.   

ಮಂಗಳೂರು: ಮುಡಿಯಲ್ಲಿ ಮಲ್ಲಿಗೆ ಮುಡಿದು, ಕತ್ತಿನಲ್ಲಿ ಬಗೆ ಬಗೆಯ ಚಿನ್ನಾಭರಣಗಳನ್ನು ಧರಿಸಿ, ಹಸಿರು–ನೀಲಿ ವರ್ಣದ ಝರಿ ಸೀರೆಯಲ್ಲಿ ಕಂಗೊಳಿಸುತ್ತಿದ್ದ ವೀಣಾಪಾಣಿ ಶಾರದೆಯ ಮೂರ್ತಿ ಕುದ್ರೋಳಿಯ ಶ್ರೀ ಗೋಕರ್ಣನಾಥ  ಕ್ಷೇತ್ರದ ಪ್ರಾಂಗಣದಿಂದ ಗುರುವಾರ ಮುಸ್ಸಂಜೆ ಹೊರಬರುತ್ತಿದ್ದಂತೆಯೇ ಮಳೆಯ ಸಿಂಚನವಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಹೊಳಪು ಕಂಗಳ ಶಾರದೆಯ ದರ್ಶನ ಪಡೆದ ಭಕ್ತರು ಭಾವಪರವಶರಾದರು. 

ನವರಾತ್ರಿಯುದ್ದಕ್ಕೂ ಪೂಜೆ ಗೊಂಡು ವಿಶೇಷ ಕಳೆ ಪಡೆದಿದ್ದ ಶಾರದೆಯ ಮೂರ್ತಿಯು ಮಂಗಳ ವಾದ್ಯಗಳೊಂದಿಗೆ ಶೋಭಾಯಾತ್ರೆಯಲ್ಲಿ ಸಾಗುವ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರು ಸರ್ವಾಲಂಕಾರ ಶೋಭಿತ ಮೂರ್ತಿಗೆ ಕೈ ಮುಗಿದರು. ಆರತಿ ಬೆಳಗಿ ಪುನೀತರಾದರು.

ಕುದ್ರೋಳಿ ಕ್ಷೇತ್ರದಲ್ಲಿ ಪೂಜೆಗೊಂಡ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ಮೂರ್ತಿಗಳು ನಗರದ ಬೀದಿಗಳಲ್ಲಿ ವಿದ್ಯುದ್ದೀಪಾಲಂಕೃತ ವಾಹನಗಳಲ್ಲಿ ಸಾಲಾಗಿ ಸಾಗಿಬರುತ್ತಿದ್ದಂತೆಯೇ ಭಕ್ತರು ದೈವಿಕ ಅನುಭೂತಿ ಪಡೆದರು. ವಿವಿಧ ಸ್ತಬ್ಧಚಿತ್ರಗಳು, ಹುಲಿವೇಷ ಕುಣಿತ ಟ್ರಕ್‌ಗಳು ಮೆರವಣಿಗೆಗೆ ಮೆರುಗು ತುಂಬಿದವು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.