ADVERTISEMENT

ಮಂಗಳೂರು: ಗುಡ್ಡ–ಇಳಿಜಾರು ಪ್ರದೇಶ; ರಾತ್ರಿ ಓಡಾಟದ ತ್ರಾಸ

ನಗರ ಮಧ್ಯದ ಪ್ರಮುಖ ಕೇಂದ್ರಗಳ ನಡುವೆ ಹಸಿರು–ಕುರುಚಲು ಕಾಡಿನಿಂದ ಕೂಡಿರುವ ವಸತಿ ಪ್ರದೇಶ

ವಿಕ್ರಂ ಕಾಂತಿಕೆರೆ
Published 11 ನವೆಂಬರ್ 2025, 4:30 IST
Last Updated 11 ನವೆಂಬರ್ 2025, 4:30 IST
22ನೇ ವಾರ್ಡ್‌ನ ಬಾರೆಬೈಲ್ ಪ್ರದೇಶದ ಒಂದು ಬೀದಿ
22ನೇ ವಾರ್ಡ್‌ನ ಬಾರೆಬೈಲ್ ಪ್ರದೇಶದ ಒಂದು ಬೀದಿ   

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಮತ್ತು ವಿಮಾನ ನಿಲ್ದಾಣ ರಸ್ತೆಯ ಮಗ್ಗುಲಲ್ಲಿ ಹಸಿರು ತುಂಬಿದ, ಕುರುಚಲು ಕಾಡು, ಗುಡ್ಡ–ಮರಗಳಿಂದ ಸುತ್ತುವರಿದಿರುವ ಅಪರೂಪದ ವಾರ್ಡ್‌ ಕದ್ರಿ ಪದವು. ನಗರದ ಅತಿದೊಡ್ಡ ವಾರ್ಡ್‌ಗಳಲ್ಲಿ ಒಂದಾಗಿರುವ ಇಲ್ಲಿ ದೊಡ್ಡ ಸಮಸ್ಯೆಗಳೇನೂ ಇಲ್ಲವಾದರೂ ರಾತ್ರಿ ಓಡಾಟ ತ್ರಾಸದಾಯಕ ಎಂಬುದು ನಾಗರಿಕರ ಅಭಿಪ್ರಾಯ. 

ಕುಂಟಿಕಾನದಿಂದ ಕೆಪಿಟಿ ವರೆಗೆ, ಕೆಪಿಟಿಯಿಂದ ಬೋಂದೆಲ್ ವರೆಗಿನ ರಸ್ತೆ ಬದಿಯಲ್ಲಿ ಸಿಗುವ ಯಾವ ಗಲ್ಲಿಯಲ್ಲಿ ಕೆಳಗೆ ಇಳಿದರೂ 22 ಸಂಖ್ಯೆಯ ಈ ವಾರ್ಡ್‌ನ ಯಾವುದಾದರೂ ಒಂದು ಪಾರ್ಶ್ವ ಸಿಕ್ಕಿಯೇ ಸಿಗುತ್ತದೆ. ಪದವಿನಂಗಡಿ, ಗುರು ನಗರದ, ಕೊಪ್ಪಲಕಾಡು, ಮುಗುರೋಡಿ, ಬಾರೆಬೈಲ್‌ ಮುಂತಾದ ಮಂಗಳೂರಿನ ಪ್ರಮುಖ ಪ್ರದೇಶಗಳೆಲ್ಲ ಈ ವಾರ್ಡ್‌ನ ಒಳಗೆ ಸೇರಿಕೊಂಡಿವೆ. ದೇರೆಬೈಲ್‌ ಕೊಂಚಾಡಿ ಕಡೆಯಿಂದ ಹೋದರೆ ಸಮತಟ್ಟಾದ ರಸ್ತೆ ಸಿಗುತ್ತದೆ. ಉಳಿದ ಮೂರು ಭಾಗಗಳಿಂದ ಹೋದರೂ ಇಳಿಜಾರು ರಸ್ತೆಗಳ ಮೂಲಕವೇ ಸಾಗಬೇಕು. ಈಚೆಗೆ ಬಹುತೇಕ ಎಲ್ಲ ರಸ್ತೆಗಳಿಗೂ ಡಾಂಬರ್ ಅಥವಾ ಕಾಂಕ್ರಿಟ್ ಹಾಕಿರುವುದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. 

ಎಜೆ ಆಸ್ಪತ್ರೆಯ ಸಮೀಪದಿಂದ ಈ ವಾರ್ಡ್‌ನ ಒಳಗೆ ನುಗ್ಗಿದರೆ ಮೊದಲು ಸಿಗುವುದೇ ಕಾಡಿನಂಥ ಪ್ರದೇಶ. ನಗರದ ಒಳಗೆಯೇ ಅಪ್ಪಟ ಹಳ್ಳಿಯ ವಾತಾವರಣವಿರುವ ಇಲ್ಲಿ ಮರಗಿಡಗಳ ನಡುವೆಯೇ ನಿರ್ಮಿಸುವ ಮನೆಗಳು ಹಳೆಯ ಕಾಲದತ್ತ ನೆನಪನ್ನು ಕೊಂಡೊಯ್ಯುತ್ತದೆ. ಹೆಚ್ಚು ಅಗಲವಿಲ್ಲದ ರಸ್ತೆಗಳಿಗೆ ಅಲ್ಲಲ್ಲಿ ಕವಲುಗಳು. ತೀರಾ ಹತ್ತಿರವೂ, ತುಂಬ ದೂರವೂ ಅಲ್ಲದ ಅಂತರದಲ್ಲಿ ಮನೆಗಳು. ಹೀಗಾಗಿ ನಗರದೊಳಗೆ ಇದ್ದರೂ ಗ್ರಾಮೀಣ ಸೊಗಡಿನ ಅನುಭವವಾಗುತ್ತದೆ ಎಂಬುದು ನಿವಾಸಿಗಳ ಅಂಬೋಣ.

ADVERTISEMENT

ಆದರೆ ಈ ಸೌಂದರ್ಯವೇ ರಾತ್ರಿ ವೇಳೆ ಸ್ವಲ್ಪ ತೊಂದರೆ ಮಾಡುತ್ತದೆ ಎಂದು ಹೇಳುವವರೂ ಇದ್ದಾರೆ. ‘ಸಂಜೆಯಾದ ನಂತರ ವಾಹನ ಓಡಿಸಲು ಅಥವಾ ನಡೆದುಕೊಂಡು ಹೋಗಲು ಹೆಣ್ಮಕ್ಕಳು ಹೆದರುತ್ತಾರೆ. ರಸ್ತೆಗಳನ್ನು ಅಗಲ ಮಾಡಿ ಅಥವಾ ರಸ್ತೆಗೇ ಚಾಚಿಕೊಂಡಿರುವ ಮರ–ಕೊಂಬೆಗಳನ್ನು ಕತ್ತರಿಸಿದರೆ ಸ್ವಲ್ಪ ನಿರಾಳವಾಗಿ ಓಡಾಡಬಹುದು’ ಎಂದು ಅಂಬರೀಷ್ ಡಿ.ಎಚ್‌ ಹೇಳಿದರು.

ವಾರ್ಡ್‌ನ ಮತ್ತೊಂದು ಭಾಗದಲ್ಲಿ ಗುಡ್ಡಗಳು ಮತ್ತು ಇಳಿಜಾರು ಪ್ರದೇಶ. ಗುಡ್ಡಗಳ ಮೇಲೆ ರಿಯಲ್‌ ಎಸ್ಟೇಟ್‌ನವರ ಕಣ್ಣು ಬಿದ್ದಿರುವುದು ಕೆಲವರಲ್ಲಿ ಬೇಸರ ಉಂಟುಮಾಡಿದೆ. ವ್ಯಾಸನಗರದಂಥ ತೆರೆದ ಪ್ರದೇಶದಲ್ಲಿ ರೆಸಾರ್ಟ್‌ ಮತ್ತಿತರ ವ್ಯಾವಹಾರಿಕ ತಾಣಗಳು ತಲೆ ಎತ್ತುತ್ತಿರುವ ಬಗ್ಗೆಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. 

ನಗರ ಮಧ್ಯದಲ್ಲೆ ಇದ್ದರೂ ಕೆಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ವ್ಯಾಸನಗರ–ಕೆಪಿಟಿ ರಸ್ತೆಯಲ್ಲಿ 10 ದಿನಗಳಿಂದ ಮ್ಯಾನ್‌ಹೋಲ್‌ ಉಕ್ಕಿ ಹರಿದು ದುರ್ನಾತ ಬೀರುತ್ತ ನೀರು ಹರಿಯುತ್ತಿದ್ದ ಪ್ರದೇಶದ ನಿವಾಸಿಗಳು ದೂರಿದರು. 

ವಾರ್ಡ್‌ನಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಾಕಷ್ಟು ನಡೆದಿವೆ. ಕೊಪ್ಪಲಕಾಡು–ಗುರುನಗರ ರಸ್ತೆಯ ಅಗಲೀಕರಣಕ್ಕೆ ಪ್ರಸ್ತಾಪ ಸಲ್ಲಿಸಿದ್ದೆ. ಅಲ್ಲಿ ಸಮೀಪದ ನಿವಾಸಿಗಳ ಮನೆಯ ಸನಿಹ ಮಣ್ಣ ಕುಸಿಯದಂತೆ ತಡೆಗೋಡೆ ನಿರ್ಮಿಸುವುದು ಸವಾಲಿನ ಮತ್ತು ಅಧಿಕ ವೆಚ್ಚದ ಕೆಲಸ ಆಗಿತ್ತು. ಆದ್ದರಿಂದ ಪ್ರಸ್ತಾಪ ಹಾಗೆಯೇ ಉಳಿದಿದೆ ಎಂದು ಮೇಯರ್ ಕೂಡ ಆಗಿದ್ದ ಪಾಲಿಕೆಯ ನಿಕಟಪೂರ್ವ ಸದಸ್ಯ ಜಯಾನಂದ ಅಂಚನ್‌ ಹೇಳಿದರು. 

ವಾರ್ಡ್‌ನಲ್ಲಿ ಇಂಥ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುವುದಿದೆ 

ರಸ್ತೆ ವಿಸ್ತರಣೆಗೆ ಪ್ರಸ್ತಾವ

ವಾರ್ಡ್‌ನಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಾಕಷ್ಟು ನಡೆದಿವೆ. ಕೊಪ್ಪಲಕಾಡು–ಗುರುನಗರ ರಸ್ತೆಯ ವಿಸ್ತರಣೆಗೆ ಪ್ರಸ್ತಾಪ ಸಲ್ಲಿಸಿದ್ದೆ. ಅಲ್ಲಿ ಸಮೀಪದ ನಿವಾಸಿಗಳ ಮನೆಯ ಸನಿಹ ಮಣ್ಣ ಕುಸಿಯದಂತೆ ತಡೆಗೋಡೆ ನಿರ್ಮಿಸುವುದು ಸವಾಲಿನ ಮತ್ತು ಅಧಿಕ ವೆಚ್ಚದ ಕೆಲಸ ಆಗಿತ್ತು. ಆದ್ದರಿಂದ ಪ್ರಸ್ತಾಪ ಹಾಗೆಯೇ ಉಳಿದಿದೆ ಎಂದು ಮೇಯರ್ ಕೂಡ ಆಗಿದ್ದ ಪಾಲಿಕೆಯ ನಿಕಟಪೂರ್ವ ಸದಸ್ಯ ಜಯಾನಂದ ಅಂಚನ್‌ ಹೇಳಿದರು. 

ಜಯಾನಂದ ಅಂಚನ್
ಇದು ದೊಡ್ಡ ವಾರ್ಡ್‌. ಇದನ್ನು ವಿಂಗಡಣೆ ಮಾಡಿದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸುಲಭವಾಗಲಿದೆ. ವಿಂಗಡಣೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರರು ಇಲ್ಲಿಯ ವರೆಗೆ ಮನಸ್ಸು ಮಾಡಲೇ ಇಲ್ಲ.
ಜಯಾನಂದ ಅಂಚನ್‌ ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯ
ಮಂಗಳೂರಿನ ಬಹುತೇಕ ಬಡಾವಣೆಗಳು ಹಸಿರು ಪರಿಸರ ಕಳೆದುಕೊಂಡಿವೆ. ವಾಹನಗಳ ಓಡಾಟ ಮತ್ತು ಇತರ ಶಬ್ದಗಳು ಕೂಡ ಕಿರಿಕಿರಿ ಉಂಟುಮಾಡುತ್ತವೆ. ಇಲ್ಲಿ ಹಾಗಿಲ್ಲ. ಇದು ಪ್ರಶಾಂತ ವಾತಾವರಣದ ಪ್ರದೇಶ.
ವಿಜಯ ಮಂಗಳೂರು ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.