ADVERTISEMENT

ಕನ್ಹಯ್ಯ ಕುಮಾರ್‌ ಭೇಟಿಗೆ ವಿರೋಧ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 14:19 IST
Last Updated 9 ಆಗಸ್ಟ್ 2019, 14:19 IST
 ಡಾ.ಕನ್ಹಯ್ಯ ಕುಮಾರ್‌
ಡಾ.ಕನ್ಹಯ್ಯ ಕುಮಾರ್‌    

ಮಂಗಳೂರು: ಸಿಪಿಐ ಯುವ ನಾಯಕ ಡಾ.ಕನ್ಹಯ್ಯ ಕುಮಾರ್‌ ಭೇಟಿಯನ್ನು ಹಿಂದುತ್ವಪರ ಸಂಘಟನೆಗಳ ಕಾರ್ಯಕರ್ತರು ವಿರೋಧಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹಗಳು ಮತ್ತು ಬೆದರಿಕೆ ಸಂದೇಶಗಳನ್ನು ಹಾಕುತ್ತಿದ್ದಾರೆ.

ಶನಿವಾರ ಆರಂಭವಾಗಲಿರುವ ಸಿಪಿಐ ನೇತಾರ ದಿವಂಗತ ಬಿ.ಬಿ.ಕಕ್ಕಿಲ್ಲಾಯ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕನ್ಹಯ್ಯ ಬರುತ್ತಿದ್ದಾರೆ. ಎರಡು ಗೋಷ್ಠಿಗಳಲ್ಲಿ ಅವರು ಮಾತನಾಡಲಿದ್ದಾರೆ. ನಡುವೆಯೇ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಸಂವಾದದಲ್ಲಿ ಭಾಗವಹಿಸಬೇಕಿತ್ತು.

‘ವಾಯ್ಸ್‌ ಆಫ್‌ ಮಂಗಳೂರು ಹಿಂದೂಸ್‌’ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ‘ಮಂಗಳೂರಿಗೆ ಬಂದು ನೋಡು ನಿನ್ನನ್ನು ತುಕ್ಡೆ ತುಕ್ಡೆ ಮಾಡುತ್ತೇವೆ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ ಹಾಕಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವವರು ಕನ್ಹಯ್ಯ ಅವರಿಗೆ ಬೆದರಿಕೆ ಒಡ್ಡುವ ಸಂದೇಶಗಳನ್ನೂ ಹಾಕಿದ್ದಾರೆ.

ADVERTISEMENT

ಅಲೋಶಿಯಸ್‌ ಕಾಲೇಜಿನಲ್ಲಿ ಸಂವಾದ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕಕ್ಕಿಲ್ಲಾಯ ಜನ್ಮ ಶತಾಬ್ಧಿ ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಕನ್ಹಯ್ಯ ಅವರಿಗೆ ಹೆಚ್ಚಿನ ಭದ್ರತೆ ಒದಗಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿ.ವಿ. ಕಕ್ಕಿಲ್ಲಾಯ ಅವರ ಪುತ್ರ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ‘ಕನ್ಹಯ್ಯ ಅವರ ಭೇಟಿಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಭದ್ರತೆಯ ವಿಷಯವನ್ನು ಪೊಲೀಸರು ನೋಡಿಕೊಳ್ಳಲಿದ್ದಾರೆ. ಕನ್ಹಯ್ಯ ಶನಿವಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.