ADVERTISEMENT

ರಾಷ್ಟ್ರದ ಹಿತ ಚಿಂತನೆಗೆ ಸಾಹಿತ್ಯ ಉತ್ಸವ ಪ್ರೇರಣೆಯಾಗಲಿ: ಎಸ್.ಎಲ್.‌ಭೈರಪ್ಪ

ಮಂಗಳೂರು ಸಾಹಿತ್ಯ ಉತ್ಸವ ಉದ್ಘಾಟಿಸಿ ಎಸ್.ಎಲ್.‌ಭೈರಪ್ಪ ಹಾರೈಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 8:11 IST
Last Updated 11 ಜನವರಿ 2025, 8:11 IST
   

ಮಂಗಳೂರು: ಭಾರತ್ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ಮಂಗಳೂರು ಸಾಹಿತ್ಯ ಉತ್ಸವದ ಏಳನೇ ಆವೃತ್ತಿಯನ್ನು ಸಾಹಿತಿ ಎಸ್.ಎಲ್.ಭೈರಪ್ಪ ಇಲ್ಲಿ ಶನಿವಾರ ಉದ್ಘಾಟಿಸಿದರು.

'ಹೊಸ ತಿಳಿವುಗಳನ್ನು ನೀಡುವ ಈ ಉತ್ಸವ ಯುವ ಮನಸುಗಳನ್ನು ರಾಷ್ಟ್ರದ ಹಿತ ಚಿಂತನೆಗೆ ಒರೆ ಹಚ್ಚಲು ಈ ಉತ್ಸವ ಪರೇಣೆಯಾಗಲಿ' ಎಂದು ಅವರು ಹಾರೈಸಿದರು.

'ಮಂಗಳೂರು ಸಾಹಿತ್ಯ ಉತ್ಸವದಲ್ಲಿ 2017ರಲ್ಲಿ ಭಾಗವಹಿಸಿದ್ದೆ.‌ ಮಂಗಳೂರಿನವರು ಏನನ್ನು ಮಾಡಿದರೂ ಅಚ್ಚುಕಟ್ಟು ಹಾಗೂ ದೂರದೃಷ್ಟಿ ಇದ್ದೇ ಇರುತ್ತದೆ. ಹೋಟೆಲ್ ಉದ್ಯಮದಲ್ಲಿ, ಶೈಕ್ಷಣಿಕ ಸಂಸ್ಥೆ ಕಟ್ಟಿ ಬೆಳೆಸುವುದರಲ್ಲಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲಿನವರು ದೇಶಕ್ಕೆ ಮಾದರಿ. ನಾಡಿಗೆ ಅನೇಕ ವೈದ್ಯರು, ಶಿಕ್ಷಕರ ಜೊತೆ ಶಿವರಾಮ‌ ಕಾರಂತ, ಪಂಜೆ ಮಂಗೇಶರಾಯರು, ಗೋವಿಂದ ಪೈ, ವ್ಯಾಸರಾಯ ಬಲ್ಲಾಳ, ಸೇಡಿಯಾಪು ಕೃಷ್ಞ ಭಟ್, ಯಶವಂತ ಚಿತ್ತಾಲರಂತಹ ಖ್ಯಾತ ಸಾಹಿತಿಗಳನ್ನೂ ನಾಡಿಗೆ ನೀಡಿದ ನೆಲವಿದು. ಶಿವರಾಮ ಕಾರಂತರಂತೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೇ ಹಿಂತಿರುಗಿಸಿದ್ದನ್ನು ಮರೆಯಲಾದೀತೇ. ಸಾಹಿತ್ಯ‌ ರಚನೆಯಲ್ಲಿ ತೊಡಗಿಕೊಂಡಿದ್ದ ಕಾರಂತರು ರಾಷ್ಟ್ರದ ಹಿತ ಮತ್ತು ಐಕ್ಯತೆಗೆ ಪ್ರಾಧಾನ್ಯತೆ ನೀಡಿದ್ದರು’ ಎಂದರು.

ADVERTISEMENT

‘ಸಾಹಿತ್ಯ ಉತ್ಸವಕ್ಕೆ ಗುರಿಯನ್ನು ಇಟ್ಟುಕೊಂಡು ಸಾಗುತ್ತಿದ್ದೀರಿ. ವರ್ಷಕ್ಕೊಮ್ಮೆ ದೇಶದ ಮೂಲೆ ಮೂಲೆಗಳಿಂದ ಸಾಧಕರನ್ನು ಕರೆಸಿ, ಅವರಿಗೆ ವೇದಿಕೆ ಒದಗಿಸಿ, ವಿಚಾರಸಂಕಿರಣಗಳನ್ನು ಏರ್ಪಡಿಸುವುದು ಸಾಹಸವೇ. ಇಲ್ಲಿ ಚರ್ಚಿಸಲಾಗುವ ವಿಚಾರಗಳು ತಲುಪಬೇಕಾದವರನ್ನು ತಲುಪುತ್ತಿದೆಯೇ, ನಿರೀಕ್ಷಿತ ಪರಿಣಾಮ ಆಗುತ್ತಿದೆಯೇ ಎಂಬುದೂ ಮುಖ್ಯ. ಅದಿಲ್ಲವಾದರೆ ವರ್ಷಕ್ಕೊಮ್ಮೆ ನಡೆಸಬೇಕಾದ ಯಾಂತ್ರಿಕ ಕಾರ್ಯಕ್ರಮವಾಗುತ್ತದೆಯಷ್ಟೆ. ಯಾವುದೇ ಕಾರ್ಯ ಯಾಂತ್ರಿಕವಾದರೆ ಅಲ್ಲಿ ಹೊಸ ವಿಚಾರಗಳಿಗೆ ಆಸ್ಪದವಿರುವುದಿಲ್ಲ. ಅದರಿಂದ ಸಮಾಜಕ್ಕೆ ಹೊಸತೇನನ್ನೂ ನೀಡಲಾಗುವುದಿಲ್ಲ. ಸಾಹಿತ್ಯ ಉತ್ಸವವನ್ನು ವರ್ಷ ವರ್ಷವೂ ನಡೆಸಿಕೊಂಡು ಸಮಾಜಕ್ಕೆ ಹೊಸತಾದುದನ್ನು ನೀಡುವ ಗುರಿಯನ್ನು ತಲುಪುವ ಹೊಣೆ ಆಯೋಜಕರ ಮೇಲಿದೆ. ಅದನ್ನು ಸಾಧಿಸುವಿರಿ ಎಂಬ ಭರವಸೆ ನನಗಿದೆ. ಆದ ಕಾರಣವೇ ನಾನು ಈ ವಯಸ್ಸಿನಲ್ಲೂ ನಿಮ್ಮನ್ನೆಲ್ಲ ನೋಡಲು ಬಂದಿದ್ದೇನೆ’ ಎಂದರು.

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ರವಿ, 'ದೇಶದ ಬೇರೆ ಬೇರೆ ಸಾಹಿತ್ಯ ಉತ್ಸವ ವಿಭಿನ್ನ. ಮಕ್ಕಳನ್ನು, ಯುವ ಪೀಳಿಗೆಯನ್ನು ಗಮನದಟ್ಟಿಕೊಂಡು ಇಲ್ಲಿನ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಸಾಹಿತ್ಯ ಕಲೆ, ಸಿನಿಮಾ ಲೋಕಕ್ಕೆ ಸಂಬಂಧಿಸಿದ ಭಾರತೀಯ ವಿಚಾರಗಳ ಚಿಂತನ-ಮಂಥನದ ವೇದಿಕೆ ಇದಾಗಿದೆ. ಇಲ್ಲಿ ಮಂಡಿಸುವ ವಿಚಾರಗಳು ಗಹನವಾದವು’ ಎಂದರು.

ಭಾರತ್ ಫೌಂಡೇಷನ್‌ನ ಟ್ರಸ್ಟಿ ‌ಸುನಿಲ್ ಕುಲಕರ್ಣಿ ಸ್ವಾಗತಿಸಿದರು.

ಈಚೆಗೆ ನಿಧನರಾದ ಸಾಹಿತಿ ನಾ.ಡಿಸೋಜ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.