ADVERTISEMENT

ಮಂಗಳೂರು ರನ್ನರ್ಸ್ ಕ್ಲಬ್‌ ಮ್ಯಾರಥಾನ್‌: ಚುಮುಚುಮು ಚಳಿಯಲ್ಲಿ ಓಟದ ‘ಗಮ್ಮತ್ತ್‌’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 5:12 IST
Last Updated 10 ನವೆಂಬರ್ 2025, 5:12 IST
5ಕೆ ಓಟಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಚಾಲನೆ ನೀಡಿದರು
5ಕೆ ಓಟಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಚಾಲನೆ ನೀಡಿದರು   

ಮಂಗಳೂರು: ಸೂರ್ಯ ಇನ್ನೂ ಉದಯಿಸಿರಲಿಲ್ಲ. ನಗರವಿನ್ನೂ ರಜಾ ದಿನದ ನಿದ್ದೆಯನ್ನು ಬಿಟ್ಟು ಎದ್ದಿರಲಿಲ್ಲ. ಆದರೆ ಟ್ರ್ಯಾಕ್ ಸೂಟ್ ತೊಟ್ಟು ಮಂಗಳ ಕ್ರೀಡಾಂಗಣಕ್ಕೆ ಬಂದಿದ್ದವರು ಉತ್ಸಾಹದ ಚಿಲುಮೆಯಾಗಿದ್ದರು. 

ಮಂಗಳೂರು ರನ್ನರ್ಸ್ ಕ್ಲಬ್ ಭಾನುವಾರ ಆಯೋಜಿಸಿದ್ದ  ಮಂಗಳೂರು ಮ್ಯಾರಥಾನ್‌ನ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದ ದೇಶ ವಿದೇಶಗಳ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರು ಮಂಜಿನ ಹನಿ ಬಿದ್ದ ಮೈದಾನದಲ್ಲಿ ಓಟಕ್ಕೆ ಸಿದ್ಧರಾಗಿದ್ದರು. ಒಂದೊಂದೇ ವಿಭಾಗದ ಓಟಕ್ಕೆ ಚಾಲನೆ ಸಿಗುತ್ತಿದ್ದಂತೆ ಚುಮುಚುಮು ಚಳಿಯಲ್ಲಿ ಓಡಿ ಮೈಗೆ ಬಿಸುಪು ತುಂಬಿದರು.  

ಪುರುಷರ ಮತ್ತು ಮಹಿಳೆಯರ ಫುಲ್‌ ಮ್ಯಾರಥಾನ್‌ನೊಂದಿಗೆ ಸ್ಪರ್ಧೆ ಗಳು ಆರಂಭಗೊಂಡವು. ಗ‌ಮ್ಮತ್ತ್ ಓಟ ಕೊನೆಯದಾಗಿತ್ತು. ಎಲ್ಲ ವಿಭಾಗಗಳಲ್ಲೂ ವಿವಿಧ ವಯೋಮಾನದವರಿಗೆ ಪ್ರತ್ಯೇಕ ಬಹುಮಾನವಿತ್ತು. ಆಸ್ಟ್ರೇಲಿಯಾ, ಜಪಾನ್‌, ಡೆನ್ಮಾರ್ಕ್‌, ನೈಜೀರಿಯಾ ಮತ್ತು ಭಾರತದ ವಿವಿಧ ರಾಜ್ಯಗಳ ಓಟಗಾರರು ಪಾಲ್ಗೊಂಡಿದ್ದರು.

ADVERTISEMENT

32 ಕಿಲೊಮೀಟರ್, ಹಾಫ್‌ ಮ್ಯಾರಥಾನ್‌ (21.1 ಕಿಮೀ), 10ಕೆ, 5ಕೆ ಓಟದ ಜೊತೆಯಲ್ಲಿ ಗಮ್ಮತ್ ಓಟಕ್ಕೆ ‘2ಕೆ’ ನಿಗದಿ ಮಾಡಲಾಗಿತ್ತು. ಫುಲ್‌ ಮ್ಯಾರಥಾನ್‌ಗೆ ಮುಂಜಾನೆ 4.15ರ ವೇಳೆ ಚಾಲನೆ ನೀಡಲಾಯಿತು. ಕೊಚ್ಚಿಯ 76ರ ಹರೆಯದ ಜಾನ್ಸನ್ ಪಾಲ್‌ ಮೊಯಲನ್‌ ಓಟಗಾರರಿಗೆ ಹುಮ್ಮಸ್ಸು ತುಂಬಿದರು. 32 ಕಿಲೊಮೀಟರ್ ಓಟಕ್ಕೆ ಉದ್ಯಮಿ ಅಭಿಷೇಕ್ ಹೆಗ್ಡೆ, ಹಾಫ್ ಮ್ಯಾರಥಾನ್‌ಗೆ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, 10ಕೆ ಓಟಕ್ಕೆ ಸಿಂಗಪುರದ ಉದ್ಯಮಿ ಬೆನ್ ಟುಲೊಚ್‌, 5ಕೆ ಓಟಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಚಾಲನೆ ನೀಡಿದರು. ಗಮ್ಮತ್ ರನ್‌ ಎಸಿಪಿ ನಜ್ಮಾ ಫಾರೂಖಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಜೇಶ್ ಚೌಟ ‘ಜಗತ್ತಿನ ಜೊತೆ ಓಡಲು ಮಂಗಳೂರಿನಲ್ಲಿ ಸಾಕಷ್ಟು ಅವಕಾಶಗಳು ಇವೆ. ಇಂಥ ಕ್ರೀಡಾ ಕಾರ್ಯಕ್ರಮಗಳು ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು. ಮಂಗಳೂರು ರನ್ನರ್ಸ್ ಕ್ಲಬ್‌ನ ಅಧ್ಯಕ್ಷ ಜೋಯಲ್ ಡಿಸೋಜ, ಉದ್ಯಮಿಗಳಾದ ಸಯೋಗ್ ಶೆಟ್ಟಿ, ಲವ್ಲಿನ್ ಡಿಸೋಜ, ಆಸ್ಟ್ರೇಲಿಯಾದ ಎನ್‌ಟಿಟಿ ಡಾಟಾ ಕಂಪನಿಯ ಗ್ಲೆನ್ ಹಾನಿಗನ್‌, ಯೆನೆಪೋಯ ಶಾಲೆಯ ನಿರ್ದೇಶಕರಾದ ಜಾವೀದ್ ಮತ್ತು ಮಿಶ್ರಿಯಾ, ಯೆನೆಪೋಯ ಶಾಲೆಯ ಪ್ರಾಚಾರ್ಯ ಉಜ್ವಲ್ ಮೆನೇಜಸ್‌,  ಪಾಲ್ಗೊಂಡಿದ್ದರು. 

32 ಕಿಮೀ ಓಟ 4.45ಕ್ಕೆ ಆರಂಭಗೊಂಡಿತು. ಹಾಫ್‌ ಮ್ಯಾರಥಾನ್‌ ಶುರುವಾದದ್ದು 5.15ಕ್ಕೆ. 10ಕೆ ಓಟ 6 ಗಂಟೆಗೆ ಮತ್ತು 5ಕೆ ಓಟ 7.15ಕ್ಕೆ ಮತ್ತು ಗಮ್ಮತ್ ಓಟ 8 ಗಂಟೆಗೆ ಆರಂಭವಾಯಿತು. ಫಿನಿಷಿಂಗ್ ಲೈನ್‌ನಲ್ಲಿ ಮುದ ನೀಡಲು ಪಿಲಿ ನಲಿಕೆಯ ರಂಗು ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.