ADVERTISEMENT

ಮಂಗಳೂರು | ಆರೋಪಿಗಳಿಬ್ಬರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:31 IST
Last Updated 29 ಡಿಸೆಂಬರ್ 2025, 6:31 IST
ಸುಮಿತ್‌
ಸುಮಿತ್‌   

ಮಂಗಳೂರು: ತಾಲ್ಲೂಕಿನ ಮಳಲಿ ನಾರ್ಲಪದವು ಬಳಿ ವ್ಯಕ್ತಿಯೊಬ್ಬರು ಮಗಳ (11) ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಆರೋಪಿಗಳಿಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿಯೂ ಬಜಪೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಹಲ್ಲೆಗೊಳಗಾದ ಬಳಿಕ ತಲೆಮರೆಸಿಕೊಂಡಿದ್ದ ಮೂಲರಪಟ್ಣದ ಅಬ್ದುಲ್ ಸತ್ತಾರ್‌ ಎಂಬಾತನನ್ನು ದಾಖಲೆಗಳಿಲ್ಲದೇ ಗೋಮಾಂಸ ಸಾಗಿಸಿದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಎಡ‍ಪದವಿನ ಸುಮಿತ್ ಭಂಡಾರಿ (21), ರಜತ್ ನಾಯ್ಕ್‌ (30) ಹಲ್ಲೆ ನಡೆಸಿದ ಆರೋಪಿಗಳು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ADVERTISEMENT

‘ಬೈಕನ್ನು ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿದ್ದ ಆರೋಪಿಗಳು ನಾರ್ಲಪದವು ಬಳಿ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿ, ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ನನ್ನ ಬಟ್ಟೆಯನ್ನು ಜಗ್ಗಿ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಅದರ ಆಧಾರದಲ್ಲಿ ಆರೋಪಿಗಳಾದ ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್ ವಿರುದ್ಧ ಪೊಕ್ಸೊ ಕಾಯ್ದೆಯ ಸೆಕ್ಷನ್ 12 (ಲೈಂಗಿಕ ಕಿರುಕುಳ),   ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್ 126 (2) (ತಡೆದು ನಿಲ್ಲಿಸಿದ್ದು), ಸೆಕ್ಷನ್‌ 115 (2) (ಹಲ್ಲೆ ನಡೆಸಿದ್ದು), ಸೆಕ್ಷನ್ 74 (ಬಾಲಕಿ ಮೇಲೆ ಹಲ್ಲೆ, ಮಾನಭಂಗ ಯತ್ನ), ಸೆಕ್ಷನ್ 75 (1) (ಲೈಂಗಿಕ ಕಿರುಕುಳ), ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ) ಹಾಗೂ ಸೆಕ್ಷನ್ 352 (ಶಾಂತಿ ಭಂಗ) ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಬ್ದುಲ್ ಸತ್ತಾರ್‌ ಬೈಕಿನಲ್ಲಿ 35 ಪೊಟ್ಟಣಗಳಲ್ಲಿ ತುಂಬಿದ್ದ 19 ಕೆ.ಜಿ. ಗೋಮಾಂಸ  ಪತ್ತೆಯಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಆರೋಪಿ ಯಾವುದೇ ಬಿಲ್‌ ಅಥವಾ ದಾಖಲೆಗಳನ್ನು ಒದಗಿಸಿಲ್ಲ. ಅದನ್ನು ಆತ ಎಲ್ಲಿಂದ ತಂದಿದ್ದ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಘಟನೆ ವೇಳೆ ಬಾಲಕಿಯ ಕಾಲಿಗೆ ಬೈಕಿನ ಸೈಲೆನ್ಸರ್ ತಾಗಿ ಗಾಯವಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. 

ರಜತ್‌
ತಪ್ಪು ಮಾಹಿತಿ ಆರೋಪ
ವೆಬ್‌ಸೈಟ್‌ ವಿರುದ್ಧ ಪ್ರಕರಣ  ಈ ಪ್ರಕರಣಕ್ಕೆ ಸಂಬಂಧಿಸಿದ  ತಪ್ಪು ಮಾಹಿತಿ ಪ್ರಕಟಿಸಿದ ಆರೋಪದ ಮೇಲೆ ವೆಬ್‌ಸೈಟ್‌ ಒಂದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಪೊಲೀಸರ ವಿರುದ್ಧ ತಪ್ಪುಭಾವನೆ ಬರುವಂತೆ ಸುದ್ದಿ ಪ್ರಕಟಿಸಿದ ಕಾರಣಕ್ಕೆ ಆ ವೆಬ್‌ ಸೈಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ ರೆಡ್ಡಿ ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.