
ಮಂಗಳೂರು: ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ದೇವರ 14 ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ ಭಾನುವಾರ ನೆರವೇರಿತು.
ಈ ಪ್ರಯುಕ್ತ ಮುಂಜಾನೆ ಮಹಾಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿಗಳು ಪ್ರಾರಂಭಗೊಂಡವು. ಪ್ರಧಾನ ಶ್ರೀಭೂದೇವಿ ಶ್ರೀದೇವಿ ಸಹಿತ ವೀರ ವೆಂಕಟೇಶ ದೇವರ ಹಾಗೂ ಉತ್ಸವ ಶ್ರೀನಿವಾಸ ದೇವರ ವಿಗ್ರಹಗಳಿಗೆ ಪಂಚಾಮೃತ , ಗಂಗಾಭಿಷೇಕ , ಕನಕಾಭಿಷೇಕ ಶತಕಲಶಾಭಿಷೇಕಗಳನ್ನು ಕಾಶೀಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿ ನೆರವೇರಿಸಿದರು. ಮಧ್ಯಾಹ್ನದ ಪೂಜೆ ಬಳಿಕ ಸಮಾರಾಧನೆ, ಸಂಜೆ ಸ್ವರ್ಣ ಲಾಲಕಿಯಲ್ಲಿ ಒಂದು ಪೇಟೆ ಉತ್ಸವ, ಬಳಿಕ ದೇವಸ್ಥಾನದಲ್ಲಿ ಪ್ರಾಕಾರೋತ್ಸವ , ವಸಂತ ಪೂಜೆಗಳು ನಡೆದವು. ಈ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧೆಯಿಂದ ಭಾಗವಹಿಸಿದರು.
ಸಹಸ್ರ ಕುಂಭಾಭಿಷೇಕ: ಇದೇ19ರಂದು ವೀರ ವೆಂಕಟೇಶ್ ದೇವರ ಸಹಿತ ಪರಿವಾರ ದೇವರಿಗೆ ಸಹಸ್ರ ಕುಂಭಾಭಿಷೇಕ ನೆರವೇರಲಿದೆ. ಐದು ದಿನಗಳ ಪರ್ಯಂತ ಶಾಸ್ತ್ರೋಕ್ತವಾಗಿ ವೈದಿಕ ವಿಧಿವಿಧಾನಗಳನ್ನು ದೇವಸ್ಥಾನದ ತಂತ್ರಿಗಳಾದ ಪಂ. ನರಸಿಂಹ ಆಚಾರ್ಯ ಅವರ ನೇತೃತ್ವದಲ್ಲಿ ಸಂಯಮಿಂದ್ರ ತೀರ್ಥ ಸ್ವಾಮೀಜಿ ನೆರವೇರಿಸಲಿದ್ದಾರೆ. ಇದೇ 25ರಂದು ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.