ಮಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಸಮೀಪಿಸುತ್ತಿದ್ದಂತೆ ನವರಾತ್ರಿಯ ಸಂಭ್ರಮ ಕಳೆಗಟ್ಟಿದ್ದು ಶಾರದಾ ಮಾತೆಯ ಪ್ರತಿಷ್ಠಾಪನೆ ಮತ್ತು ಆರಾಧನೆಯ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ನಗರವನ್ನು ಸೋಮವಾರ ಸಂಭ್ರಮದಲ್ಲಿ ತೇಲಿಸಿತು.
ದಸರೆಯ ಆರಂಭದಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ ಮಾಡಿದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿತು. ಕೆಲವು ದೇವಸ್ಥಾನಗಳಲ್ಲೂ ಮನೆಗಳಲ್ಲೂ ಶಾರದೆಯ ಪ್ರತಿಷ್ಠಾಪನೆ ಮತ್ತು ಪೂಜೆ ನಡೆಯಿತು. ಸಂಜೆ ವೈಭವದ ಮೆರವಣಿಗೆ ಮತ್ತು ಜಲಸ್ತಂಭನ ನಡೆಯಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳಾದೇವಿಯ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಅಶೋಕ ನಗರದ ಶ್ರೀ ಮಾತೆ ಚಂಡಚಂಡೇಶ್ವರಿ ಕ್ಷೇತ್ರ, ಉರ್ವ ಮಾರಿಗುಡಿ, ಬೋಳೂರಿನ ಕೋಟೆ ಮಾರಿಯಮ್ಮ ದೇವಸ್ಥಾನ ಮುಂತಾದ ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ಸಾಲು ಕಂಡು ಬಂದಿತು.
ಮಂಗಳಾದೇವಿ ದೇವಳದ ಮುಖಮಂಟಪದ ಚಾಂದ್ರಶಾಲೆಯಲ್ಲಿ ಕ್ಷೇತ್ರದ ಪ್ರಾಚೀನ ಸರಸ್ವತಿ ಗ್ರಂಥವನ್ನು ಸ್ಥಾಪಿಸಿ ಶಾರದ ಪೂಜೆ ನೆರವೇರಿಸಲಾಯಿತು. ಸಪ್ತಮಿಯಂದು ಚಂಡಿಕೆಯಾಗಿ ಮೆರೆದ ಮಂಗಳಾಂಬಿಕೆಗೆ ಮಹಾಪೂಜೆ ನೆರವೇರಿತು. ಸರಸ್ವತಿ ಗ್ರಂಥದಲ್ಲಿ ಬ್ರಹ್ಮಜ್ಞಾನದ ಸಾರ ಸತ್ವ ಅಡಗಿದೆ ಎಂಬ ನಂಬಿಕೆಯೊಂದಿಗೆ ಭಕ್ತರು ಸರಸ್ವತಿ ದೇವಿಯನ್ನೇ ಪೂಜಿಸಿದ ಕೃತಾರ್ಥವನ್ನು ಉಂಡರು. ಸಂಜೆ ಭಜನೆ, ಪ್ರವಚನ, ಭರತನಾಟ್ಯ ಹಾಗೂ ನೃತ್ಯ ವೈವಿಧ್ಯ ದೇವಾಲಯದ ಆವರಣಕ್ಕೆ ಸಾಂಸ್ಕೃತಿಕ ರಂಗು ತುಂಬಿತು.
ಕುದ್ರೋಳಿಯಲ್ಲಿ ಬೆಳಿಗ್ಗೆ ಮಹಿಷಮರ್ದಿನಿ ದುರ್ಗಾ ಹೋಮದ ಮೂಲಕ ದಿನದ ಕಾರ್ಯಕ್ರಮಗಳು ಆರಂಭಗೊಂಡವು. ಪುಷ್ಪಾಲಂಕಾರ ಮಹಾಪೂಜೆಯಲ್ಲಿ ಪಾಲ್ಗೊಂಡು ಭಕ್ತರು ಧನ್ಯರಾದರು. ಸಂಜೆ ವಿದುಷಿ ಮಂಜುಳಾ ಜಿ.ರಾವ್ ಪ್ರಸ್ತುತಪಡಿಸಿದ ಸಪ್ತಶತಿ ಶ್ರೀದೇವಿ ಮಹಾತ್ಮೆ ಹರಿಕಥಾ ಕೀರ್ತನೆ ಒಂದು ತಾಸಿಗೂ ಹೆಚ್ಚು ಕಾಲ ಭಕ್ತಿ ಭಾವದ ಅಲೆಗಳನ್ನೆಬ್ಬಿಸಿತು. ವಿದ್ವಾನ್ ಸತ್ಯನಾರಾಯಣ ಐಡ್ಲ ಮತ್ತು ಪ್ರಕಾಶ್ ಬೆಂಗಳೂರು ವಾದ್ಯ ಸಹಕಾರ ನೀಡಿದರು.
ಮೈಸೂರಿನ ಕಲಾನಿಧಿ ಸ್ಕೂಲ್ ಆಫ್ ಡ್ಯಾನ್ಸ್‌ನ ‘ನಾಟ್ಯ ತರಂಗ’ ಮುದ ನೀಡಿತು. ಉಡುಪಿಯ ಕಲಾಮಯಂ ಸಂಸ್ಥೆಯ ಜಾನಪದ ವೈಭವದಲ್ಲಿ ಜಾನಪದ ನೃತ್ಯ, ಹಾಡು ಮತ್ತು ವಾದ್ಯಗಳ ಸಮ್ಮಿಲನ ಹೃದಯ ತಣಿಸಿತು.
ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಆಚಾರ್ಯ ಮಠದ ಆವರಣದಲ್ಲಿ ಮಂಗಳೂರು ಶಾರದಾ ಮಹೋತ್ಸವದ 103ನೇ ವರ್ಷದ ಪ್ರಯುಕ್ತ ಬೆಳಿಗ್ಗೆ ಶಾರದಾ ಮಾತೆಯ ಮೃತ್ತಿಕಾ ವಿಗ್ರಹದ ಪ್ರತಿಷ್ಠಾಪನೆ ನೆರವೇರಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಮಣ್ಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಲಿವೇಷ ಕಲಾವಿದ ಬಜಲಕೇರಿ ಕಮಲಾಕ್ಷ ಅವರಿಗೆ ‘ಚಾವಡಿ ತಮ್ಮನ’ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಮಲಾಕ್ಷರು ಹುಲಿವೇಷ ಈಗ ದುಬಾರಿಯಾಗಿದೆ. ಕೆಲವು ವಿಚಾರಗಳೂ ಬದಲಾಗಿವೆ. ಊದು ಪೂಜೆ ಸಂಪ್ರದಾಯ ಇರಲಿಲ್ಲ. ಹುಲಿವೇಷಧಾರಿ ಮೈಮೇಲೆ ದೈವ ಅಥವಾ ಇತರ ಶಕ್ತಿಗಳು ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಎಚ್‌ಎಂಎಸ್ ಮುಖಂಡ ಸುರೇಶ್ ಚಂದ್ರ ಶೆಟ್ಟಿ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ, ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಖಂಡ ಎ.ಸಿ ಭಂಡಾರಿ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ ಬರ್ಕೆ ಪಾಲ್ಗೊಂಡಿದ್ದರು. ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ನಿರೂಪಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.
‘ಪಿಲಿ ನಲಿಕೆ’
ಅ.1ರಂದು ಪಿಲಿ ನಲಿಕೆ ಪ್ರತಿಷ್ಠಾನದ 10ನೇ ವರ್ಷದ ‘ಪಿಲಿ ನಲಿಕೆ’ ಅ.1ರಂದು ನಡೆಯಲಿದ್ದು 10 ತಂಡಗಳು ಸ್ಪರ್ಧಿಸಲಿವೆ. ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಸ್ಥಾಪಕ ಮಿಥುನ್ ರೈ ತಿಳಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರ ತಾರೆಯರಾದ ಸುನಿಲ್ ಶೆಟ್ಟಿ ಸುದೀಪ್ ಪೂಜಾ ಹೆಗ್ಡೆ ರಾಜ್ ಬಿ.ಶೆಟ್ಟಿ ಕ್ರಿಕೆಟ್ ಆಟಗಾರ ಅಜಿಂಕ್ಯ ರಹಾನೆ ಜಿತೇಶ್ ಶರ್ಮ ಮುಂತಾದವರು ಭಾಗವಹಿಸುವರು. 10ನೇ ವರ್ಷದ ನೆನಪಿಗಾಗಿ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು. ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಅಗಸ್ತ್ಯ ಮಂಗಳೂರು ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್ಸ್ ಮುಳಿಹಿತ್ಲು ಗೇಮ್ಸ್ ಟೀಂ ಅನಿಲ್ ಕಡಂಬೆಟ್ಟು ಜೂನಿಯರ್ ಬಾಯ್ಸ್ ಚಿಲಿಂಬಿ ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ಟ್ಯಾಲೆಂಟ್ ಟೈಗರ್ಸ್ ತುಳುನಾಡು ಸೋಮೇಶ್ವರ ಫ್ರೆಂಡ್ಸ್ ಪೊಳಲಿ ಟೈಗರ್ಸ್ ಮತ್ತು ಗೋಕರ್ಣನಾಥ ಹುಲಿ ತಂಡಗಳು ಪಾಲ್ಗೊಳ್ಳಲಿವೆ. ವಿಜೇತ ತಂಡ ₹ 10 ಲಕ್ಷ ಗಳಿಸಲಿದ್ದು ಎರಡನೇ ಸ್ಥಾನ ಗಳಿಸಿದ ತಂಡಕ್ಕೆ ₹ 5 ಲಕ್ಷ 3ನೇ ಸ್ಥಾನ ಗಳಿಸಿದ ತಂಡ ₹ 3 ಲಕ್ಷ ಗಳಿಸಲಿದೆ. ವೈಯಕ್ತಿಕ ಬಹುಮಾನಗಳೂ ಇವೆ. ಜಾತಿ ಮತ್ತು ಧರ್ಮದ ನಿರ್ಬಂಧ ಇಲ್ಲ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.