ADVERTISEMENT

ಮಂಗಳೂರು | ಹಿಜಾಬ್ ವಿವಾದ: ನೋಟಿಸ್‌ಗೆ ಉತ್ತರಿಸಿದ ಇಬ್ಬರು ವಿದ್ಯಾರ್ಥಿನಿಯರು

ವಿಶ್ವವಿದ್ಯಾಲಯ ಕಾಲೇಜು: ಹಿಜಾಬ್ ವಿವಾದ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 5:17 IST
Last Updated 13 ಜೂನ್ 2022, 5:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಹಂಪನಹಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿನ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪಡೆದ ನೋಟಿಸ್‌ಗೆ ಉತ್ತರ ನೀಡಿದ್ದಾರೆ.

ಹಿಜಾಬ್‌ ಧರಿಸುವುದಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ವಿರೋಧಿಸಿ ಇತ್ತೀಚೆಗೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡುವ ಮೂಲಕ ಶಿಸ್ತನ್ನು ಉಲ್ಲಂಘಿಸಿದ್ದಕ್ಕೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಜೂನ್‌ 6ರಂದು ನೋಟಿಸ್‌ ನೀಡಲಾಗಿತ್ತು. ಮೂರು ದಿನಗಳ ಒಳಗೆ ಉತ್ತರ ನೀಡಬೇಕು ಎಂದು ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿತ್ತು.

ನೋಟಿಸ್‌ ಜಾರಿಗೊಳಿಸಿದ ಬಳಿಕ ಒಬ್ಬ ವಿದ್ಯಾರ್ಥಿನಿ ಕ್ಷಮೆ ಕೇಳಿದ್ದಲ್ಲದೇ, ಕಾಲೇಜಿನ ವಸ್ತ್ರಸಂಹಿತೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಪಾಲಿಸಿ ತರಗತಿಗೆ ಹಾಜರಾಗಿದ್ದಾರೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ADVERTISEMENT

ತರಗತಿಯಲ್ಲಿರುವ ಒಟ್ಟು 44 ವಿದ್ಯಾರ್ಥಿನಿಯರಲ್ಲಿ 15 ಮಂದಿ ಈಗಲೂ ತರಗತಿಗೆ ಹಾಜರಾಗುತ್ತಿಲ್ಲ.

ಕಾಲೇಜಿನಲ್ಲಿ ಬಿ.ಕಾಂ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿರುವುದರಿಂದ, ಅದು ಮುಕ್ತಾಯಗೊಳ್ಳುವವರೆಗೆ ಆನ್‌ಲೈನ್‌ ತರಗತಿ ಏರ್ಪಡಿಸಲು ಕಾಲೇಜಿನ ಆಡಳಿತ ಮಂಡಳಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.