ADVERTISEMENT

ಉಳ್ಳಾಲದಲ್ಲಿ ಯಾವುದೇ ದಾಳಿ ನಡೆದಿಲ್ಲ: ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 8:23 IST
Last Updated 3 ಆಗಸ್ಟ್ 2022, 8:23 IST
ಮಂಗಳುರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್
ಮಂಗಳುರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್   

ಮಂಗಳೂರು: ಉಳ್ಳಾಲದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಯತ್ನ ಎಂಬುದು ಸುಳ್ಳು ಸುದ್ದಿ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಉಳ್ಳಾಲದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಯಲು ಪ್ರಯತ್ನ ನಡೆದಿದ್ದು, ಆ ವ್ಯಕ್ತಿ ತಪ್ಪಿಸಿಕೊಂಡು ಅಪಾಯದಿಂದ ಪಾರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಇದರಿಂದ ಜನರು ಕೂಡ ಗಲಿಬಿಲಿಗೊಂಡಿದ್ದರು. ವಿಷಯ ತಿಳಿದ ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಆ ವ್ಯಕ್ತಿಯಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜುಲೈ 30ರಂದು ಎಂಆರ್‌ಪಿಎಲ್‌ ನಲ್ಲಿ ಯುವಕನೊಬ್ಬನ ಮೇಲೆ ದಾಳಿ ನಡೆದಿತ್ತು ಎಂಬ ಸುದ್ದಿ ಹರಡಿತ್ತು. ಬುಧವಾರ ಬೆಳಿಗ್ಗೆ ಉಳ್ಳಾಲದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಚ್ಚು, ಲಾಂಗು ಬಳಸಿ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತು. ಎರಡೂ ಸ್ಥಳಗಳಿಗೆ ಭೇಟಿ ನೀಡಿದ್ದು, ಎರಡೂ ಕೂಡ ಸುಳ್ಳು ಸುದ್ದಿ. ಉಳ್ಳಾಲ ವ್ಯಕ್ತಿಯನ್ನು ಕರೆಯಿಸಿ ಪರಿಶೀಲನೆ ಮಾಡಲಾಗುತ್ತಿದೆ. ಆತಂಕದಿಂದ ತಾನು ಹಾಗೆ ಹೇಳಿರುವುದಾಗಿ ಆ ವ್ಯಕ್ತಿ ಹೇಳಿಕೆ ನೀಡಿದ್ದಾನೆ. ಸ್ಥಳೀಯರೊಂದಿಗೂ ಚರ್ಚಿಸಲಾಗಿದೆ‘ ಎಂದರು.

ADVERTISEMENT

‘ಸುಳ್ಯದಲ್ಲಿ ನಡೆದ ಎರಡು ಕೊಲೆ ಪ್ರಕರಣ ಹಾಗೂ ಸುರತ್ಕಲ್‌ ನಲ್ಲಿ ನಡೆದ ಒಂದು ಕೊಲೆ ಪ್ರಕರಣದಿಂದ ಈ ಪ್ರದೇಶ ಸ್ವಲ್ಪ ಸೂಕ್ಷ್ಮವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡದ ರೀತಿಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೂರು ಶಿಫ್ಟ್‌ಗಳಲ್ಲಿ ನಮ್ಮ ಸಿಬ್ಬಂದಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು, ಕೆಎಸ್‌ಆರ್‌ಪಿ ಸಿಬ್ಬಂದಿ ಉತ್ತಮ ಬಂದೋಬಸ್ತ್ ಮಾಡುತ್ತಿದ್ದಾರೆ‘ ಎಂದರು.

‘144 ಸೆಕ್ಷನ್ ಜಾರಿಯಲ್ಲಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿ, ಪರಿಸ್ಥಿತಿ ಸಹಜ ಸ್ಥಿತಿಗೆ ತರಲು ಶ್ರಮಿಸಲಾಗುತ್ತಿದೆ. ಈ ನಡುವೆ ಕೆಲವು ವದಂತಿಗಳನ್ನು ಸಾಮಾಜಿಕ ತಾಣಗಳನ್ನು ‍ಪಸರಿಸಲಾಗುತ್ತಿದೆ. ಇದನ್ನು ಜನರು ನಂಬಬಾರದು. ಜನರು ಧೈರ್ಯದಿಂದ ಓಡಾಡಬಹುದು‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.