ADVERTISEMENT

ಮಂಗಳೂರು: ಕಸ ಸಂಗ್ರಹಕ್ಕೆ ಬಾರದ ‘ಇ–ಆಟೊ’

ಇ–ವಾಹನಗಳಿಗೆ ಚಾಲಕರೇ ಇಲ್ಲ; ಹುಲ್ಲು ಕತ್ತರಿಸುವ ಸಲಕರಣೆ ಸಾಗಿಸಲಷ್ಟೇ ಬಳಕೆ

ಪ್ರವೀಣ್‌ ಕುಮಾರ್‌ ಪಿ.ವಿ
Published 11 ಮಾರ್ಚ್ 2025, 7:03 IST
Last Updated 11 ಮಾರ್ಚ್ 2025, 7:03 IST
ಕದ್ರಿ ಶಿವಭಾಗ್‌ನಲ್ಲಿರುವ ಪಾಲಿಕೆ ಕಚೇರಿ ಬಳಿ ನಿಂತಿರುವ ಇ ಆಟೊ
ಕದ್ರಿ ಶಿವಭಾಗ್‌ನಲ್ಲಿರುವ ಪಾಲಿಕೆ ಕಚೇರಿ ಬಳಿ ನಿಂತಿರುವ ಇ ಆಟೊ   

ಮಂಗಳೂರು: ಸಣ್ಣ ಪುಟ್ಟ ಓಣಿಗಳಿರುವ ಕಡೆಯೂ ಮನೆ ಮನೆಯಿಂದ ಕಸ ಸಂಗ್ರಹಣೆ ಕಾರ್ಯ ಯಾವುದೇ ಅಡ್ಡಿ ಇಲ್ಲದೇ ನಡೆಯಬೇಕೆಂಬ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಖರೀದಿಸಿದ್ದ ವಿದ್ಯುತ್‌ಚಾಲಿತ ಆಟೊ‌ಗಳಲ್ಲಿ (ಇ–ಆಟೊ) ಬಹುತೇಕವು ಈ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಕೆಲವು ವಾರ್ಡ್‌ಗಳಲ್ಲಿ ರಸ್ತೆ ಬದಿಯ ಪೊದೆ, ಹುಲ್ಲು ಕತ್ತರಿಸುವ ಸಲಕರಣೆ ಸಾಗಿಸಲಷ್ಟೇ ಇವುಗಳನ್ನು ಬಳಸಲಾಗುತ್ತಿದೆ.

ಪಾಲಿಕೆ ತಲಾ ₹ 2 ಲಕ್ಷದಂತೆ ಹಣ ನೀಡಿ ಒಟ್ಟು 24 ಇ– ಆಟೊಗಳನ್ನು ಖರೀದಿಸಿತ್ತು. ಬೆಂಗಳೂರಿನ ಪ್ರಗ್ಯಾ ಆಟೊಮೊಬೈಲ್ಸ್ ಸಂಸ್ಥೆಯು ಪೂರೈಸಿತ್ತು. ಇವುಗಳ ಖರೀದಿಗೆ ಸ್ವಚ್ಛ ಭಾರತ್‌ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಹಾಗೂ ಪಾಲಿಕೆ ಸ್ವಂತ ನಿಧಿಯನ್ನು ಬಳಸಲಾಗಿತ್ತು.

2024ರ ಜೂನ್‌ 19ರಂದು ಇ–ಆಟೊಗಳ ಬಳಕೆಗೆ ಚಾಲನೆ ನೀಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಡಿ.ವೇದವ್ಯಾಸ ಕಾಮತ್‌, ‘ಒಮ್ಮೆ ಚಾರ್ಚ್‌ ಮಾಡಿದ ಬಳಿಕ ಈ ವಾಹನವು 90 ಕಿ.ಮೀ ದೂರದವರೆಗೆ ಚಲಿಸಬಲ್ಲುದು. ಓಣಿಗಳಲ್ಲಿರುವ ಮನೆಗಳಿಂದ ಪೌರಕಾರ್ಮಿಕರೇ ಕಸವನ್ನು ಹೊತ್ತೊಯ್ಯುವ ಶ್ರಮ ಇನ್ನು ತಪ್ಪಲಿದೆ. 5 ಅಡಿ ಅಗಲದ ಓಣಿಗಳಲ್ಲೂ ಈ ಆಟೊ ಚಲಿಸಬಲ್ಲುದು’ ಎಂದು ಹೇಳಿದ್ದರು.

ADVERTISEMENT

‘ಹಸಿ ಮತ್ತು ಒಣ ಕಸ ಸಂಗ್ರಹಕ್ಕೆ ಸದ್ಯಕ್ಕೆ ಮೂರು ವಾರ್ಡ್‌ಗಳಿಗೆ ತಲಾ ಒಂದು ಆಟೊವನ್ನು ಬಳಸಲಿದ್ದೇವೆ’ ಎಂದು ಆಗಿನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದರು. 

ಕದ್ರಿ ಶಿವಬಾಗ್‌ನ ವಲಯ ಕಚೇರಿ ಬಳಿ ಯಾವಾಗಲೂ ‘ಇ–ಆಟೊ’ ನಿಂತಿರುತ್ತದೆ. ಅದರ ಮೀಟರ್ ಗಮನಿಸಿದಾಗ ಅದು ಇದುವರೆಗೆ 176 ಕಿ.ಮೀ ಮಾತ್ರ ಸಂಚರಿಸಿದೆ. ಪುರಭವನದ ಬಳಿಯೂ ಒಂದು ಇ–ಆಟೊ 374 ಕಿ.ಮೀ ದೂರವನ್ನು ಮಾತ್ರ ಕ್ರಮಿಸಿದೆ. ಸುರತ್ಕಲ್‌ ವಲಯದಲ್ಲೂ ಕೆಲ ಇ–ಆಟೊಗಳು ಬಳಕೆಯಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಮನೆ ಮನೆಯಿಂದ ಕಸ ಸಂಗ್ರಹಿಸಲು ದಿನದಲ್ಲಿ ಕನಿಷ್ಠ 10 ಕಿ.ಮೀ ಸಂಚರಿಸಿದರೂ ಈ ವಾಹನಗಳು 10 ತಿಂಗಳಲ್ಲಿ ಕನಿಷ್ಠ 2500 ಕಿ.ಮೀ ದೂರವನ್ನಾದರೂ ಇವು ಕ್ರಮಿಸಬೇಕಿತ್ತು. ಈ ಬಗ್ಗೆ ಪಾಲಿಕೆ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ಬಹುತೇಕ ಕಡೆ ಇ–ಆಟೊಗಳು ಮನೆ ಮನೆಯಿಂದ ಕಸ ಸಂಗ್ರಹಕ್ಕೆ ಬಳಕೆಯಾಗುತ್ತಿಲ್ಲ ಎಂಬುದು ಗೊತ್ತಾಗಿದೆ.

‘ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರೇ ಇ–ಆಟೊಗಳನ್ನು ಚಲಾಯಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಪೌರಕಾರ್ಮಿಕರಿಗೆ ಈ ಬಗ್ಗೆ ತರಬೇತಿಯನ್ನೂ ನೀಡಿದ್ದೇವೆ. ಬಹುತೇಕ ಕಡೆ ಇವುಗಳು ಬಳಕೆಯಾಗುತ್ತಿವೆ. ಕೆಲವೆಡೆ ಮಾತ್ರ ಬಳಕೆಯಾಗುತ್ತಿಲ್ಲ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  

‘ಈ ವಿದ್ಯುತ್ ಚಾಲಿತ ಆಟೊವನ್ನು ದ್ವಿಚಕ್ರ ವಾಹನದಂತೆ ಸುಲಭವಾಗಿ ಚಲಾಯಿಸಿಕೊಂಡು ಹೋಗಬಹುದು ಎಂದು ಕಂಪನಿಯವರು ತಿಳಿಸಿದ್ದರು. ಪಾಲಿಕೆಯಲ್ಲಿ ಬಹುತೇಕ ಪೌರಕಾರ್ಮಿಕರು ಮಹಿಳೆಯರು. ಅವರಿಗೆ ಇ– ಆಟೊ ಚಲಾಯಿಸುವ ತರಬೇತಿ ನೀಡಿದ್ದೇವೆ. ಆದರೂ ಅವರಿಂದ ಇವುಗಳನ್ನು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಕೆಲವು ವಾರ್ಡ್‌ಗಳಲ್ಲಿ ಮಾತ್ರ ಇ–ಆಟೊಗಳು ಮನೆ ಮನೆಯಿಂದ ಕಸ ಸಂಗ್ರಹಿಸಲು ಬಳಕೆಯಾಗುತ್ತಿವೆ. ಬಹುತೇಕ ವಾರ್ಡ್‌ಗಳಲ್ಲಿ ಇವುಗಳನ್ನು ಹುಲ್ಲು ಕತ್ತರಿಸುವ ಸಲಕರಣೆ ಸಾಗಿಸಲು, ಹಾಗೂ ಕತ್ತರಿಸಿದ ಹುಲ್ಲು ಸಾಗಿಸಲಷ್ಟೇ ಬಳಸಲಾಗುತ್ತಿದೆ’ ಎಂದು  ಪಾಲಿಕೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಪ್ರತಿ ಸಲ ಚಾರ್ಜ್‌ ಮಾಡಿದ ಬಳಿಕ ಇ ಆಟೊ 90 ಕಿ.ಮೀ ದೂರ ಚಲಿಸುತ್ತದೆ ಎಂದು ಕಂಪನಿಯವರು ಹೇಳಿದ್ದರು. ಆದರೆ 45 ರಿಂದ 50 ಕಿ.ಮೀ ಚಲಿಸುವಷ್ಟರಲ್ಲಿ ಇದರ ಚಾರ್ಜ್‌ ಖಾಲಿಯಾಗುತ್ತಿದೆ. ಇವುಗಳನ್ನು ಪೂರ್ತಿ ಚಾರ್ಜ್ ಮಾಡಲು ನಾಲ್ಕರಿಂದ ಐದು ಗಂಟೆ ಬೇಕು. ಉಬ್ಬು ಹತ್ತಬೇಕಾದ ಕಡೆ ಇವುಗಳನ್ನು ಕೊಂಡೊಯ್ಯುವುದು ಕಷ್ಟ’ ಎಂದು ಪೌರಕಾರ್ಮಿಕರೊಬ್ಬರು ತಿಳಿಸಿದರು.

ಕದ್ರಿ ಶಿವಭಾಗ್‌ ಕಚೇರಿಯಲ್ಲಿ ಬಳಿ ನಿಂತಿರುವ ಇ–ಆಟೊದ ಮೀಟರ್‌ನ ರೀಡಿಂಗ್‌ ಪ್ರಕಾರ ಈ ವಾಹನ ಕೇವಲ 176 ಕಿ.ಮೀ ಸಂಚರಿಸಿದೆ
ಪಾಲಿಕೆಯಲ್ಲಿ ಎಲ್ಲೂ ಕಸ ವಿಲೇವಾರಿ ಸಮಸ್ಯೆ ಇಲ್ಲ. ಇ– ಆಟೊಗಳು ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯಕ್ಕೆ ಬಳಕೆಯಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ
ರವಿಚಂದ್ರ ನಾಯಕ್‌ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ
ಪಾಲಿಕೆಯಲ್ಲಿ ಆಡಳಿತ ನಡೆಸಿದವರು ಯಾರದೋ ಒತ್ತಾಸೆಗೆ ಬಲಿಯಾಗಿ ಇವುಗಳನ್ನು ಖರೀದಿಸಿದ್ದಾರೆಯೇ ಹೊರತು ಜನರಿಗೆ ಉಪಯೋಗವಾಗಲಿ ಎಂದಲ್ಲ. ಹಾಗಾಗಿ ಇವು ಬಳಕೆಯಾಗದೇ ವ್ಯರ್ಥವಾಗುತ್ತಿವೆ
ಎಸ್.ಎಲ್‌.ಪಿಂಟೊ ಸಾಮಾಜಿಕ ಕಾರ್ಯಕರ್ತ

‘ಮೊದಲೇ ಸಮೀಕ್ಷೆ ನಡೆಸಿಲ್ಲ ಏಕೆ’

‘ಇ–ಆಟೊಗಳನ್ನು ಖರೀದಿ ಮಾಡುವ ಮುನ್ನವೇ ಯಾವೆಲ್ಲ ವಾರ್ಡ್‌ಗಳಲ್ಲಿ ಓಣಿ ರಸ್ತೆಗಳು ಹೆಚ್ಚು ಇವೆ. ಎಲ್ಲೆಲ್ಲ ಈ ವಾಹನವು ಉಪಯೋಗಕ್ಕೆ ಬರಲಿದೆ ಎಂದು ಸಮೀಕ್ಷೆ ನಡೆಸಬೇಕಿತ್ತು. ಇದನ್ನು ಪೂರೈಸಿದ ಸಂಸ್ಥೆಗೆ ಈ ಕ್ಷೇತ್ರದಲ್ಲಿ ಒಂದೆರಡು ವರ್ಷಗಳ ಅನುಭವವೂ ಇರಲಿಲ್ಲ. ಈಗ ಈ ವಾಹನಗಳು ವ್ಯರ್ಥವಾಗಿ ನಿಂತಿರುವುದರಿಂದ ಜನರ ತೆರಿಗೆ ಹಣ ಪೋಲಾದಂತಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಎಸ್‌.ಎಲ್.ಪಿಂಟೊ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.