
ರೈತ ಮುಖಂಡರ ಸಭೆಯಲ್ಲಿ ಸ್ಟೀವನ್ ಡಿಸೋಜ ಮಾತನಾಡಿದರು
ಪ್ರಜಾವಾಣಿ ಚಿತ್ರ
ಮಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತರು ಮತ್ತು ಬಡವರಿಗೆ ಒಂದೇ ನಿಯಮವಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ರೀತಿಯೇ ಬೇರೆ. ಇಲ್ಲಿ ಪ್ರತಿಭಟನೆಯ ಹಕ್ಕು ಮೊಟಕುಗೊಳಿಸಲಾಗಿದೆ, ಖಾಸಗಿ ಹಣಕಾಸು ಸಂಸ್ಥೆಗಳ ಲಾಬಿ ಹೆಚ್ಚಾಗಿದ್ದು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸಿಗುವುದಿಲ್ಲ. ರೈತರ ಕೃಷಿಭೂಮಿಯನ್ನು ಪುಡಿಗಟ್ಟಿದರೂ ಮಾತನಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ...
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲೆಯ ರೈತ ಮುಖಂಡರು ಆಕ್ರೋಶದ ಧ್ವನಿಯಲ್ಲಿ ಮಾಡಿದ ಆರೋಪಗಳು ಇವು.
ಮೂಡುಬಿದಿರೆ ತಾಲ್ಲೂಕಿನ ನಿಡ್ಡೋಡಿಯಲ್ಲಿ ಕೃಷಿಕರ ವಿರೋಧದ ನಡುವೆಯೂ ಕಂಪನಿಯವರು 440 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ಕೈಗೊಂಡು ಫಸಲು ನಾಶ ಮಾಡಿದ್ದಾರೆ ಎಂದು ದೂರಿದ ಮುಖಂಡರು ಯಾವ ಮುನ್ಸೂಚನೆಯೂ ಇಲ್ಲದೆ ಟವರ್ ಅಳವಡಿಸಲು ಕಂಪನಿ ಮುಂದಾಗುತ್ತಿದೆ. ಇದನ್ನು ಪ್ರತಿಭಟಿಸಿದ ರೈತರ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ದೂರಿದರು.
ಇದಕ್ಕೆ ಸಮಜಾಯಿಷಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ, ನಿಡ್ಡೋಡಿಯಲ್ಲಿ ಆಲ್ಫೋನ್ಸ್ ಡಿಸೋಜ ಆತ್ಮಹತ್ಯೆಗೆ ಮುಂದಾಗಿದ್ದರು. ಕಾನೂನಿನ ಪ್ರಕಾರ ಇದು ಅಪರಾಧ. ಆದ್ದರಿಂದ ಅವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದರು. 440 ಕೆವಿ ಮಾರ್ಗದ ಡಿಪಿಆರ್ ಆಗಿ 9 ವರ್ಷಗಳು ಕಳೆದಿವೆ. ಶೇ 90ರಷ್ಟು ಕಾಮಗಾರಿ ಆಗಿದೆ. ಇಂಥ ಸಂದರ್ಭದಲ್ಲಿ ಆಕ್ಷೇಪ ಎತ್ತುವುದು ಸರಿಯಲ್ಲ. ಪರಿಹಾರಕ್ಕೆ ಸಂಬಂಧಿಸಿ ಲೋಪಗಳಿದ್ದರೆ ತಕ್ಷಣ ಸರಿಮಾಡಿಕೊಡಲಾಗುವುದು. ಪರಿಹಾರದ ಮೊತ್ತ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಅಧಿಕಾರವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಇಬ್ಬರ ಮಾತು ಕೇಳಿ ಕೆರಳಿದ ಮುಖಂಡರು ಬೆಳೆದು ನಿಂತ ಫಸಲಿನ ಮೇಲೆ ಕಂಬಿಗಳನ್ನು ಎಳೆದು ನಾಶ ಮಾಡಿದರೆ ಯಾರಿಗೆ ತಾನೇ ಹೊಟ್ಟೆ ಉರಿಯುವುದಿಲ್ಲ. 21 ಗ್ರಾಮದ ರೈತರ ಪ್ರತಿಭಟನೆಯ ನಡುವೆಯೂ ದಬ್ಬಾಳಿಕೆ ಮಾಡಲು ಕಂಪನಿಯವರಿಗೆ ಧೈರ್ಯ ಎಲ್ಲಿಂದ ಬಂತು ಎಂದು ಕೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಹಕ್ಕಿಗೆ ಧಕ್ಕೆ ತರಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಶ್ರೀಮಂತರಿಗೆ ಮಾತ್ರ ಸಾಲ ನೀಡುತ್ತಿವೆ. ಈ ಬಗ್ಗೆ ಸರ್ವೆ ಆಗಬೇಕು ಎಂದು ಒತ್ತಾಯಿಸಿದರು.
ಬೆಳೆ ಸಾಲಮನ್ನಾ ಯೋಜನೆಯಡಿ 1750 ರೈತರಿಗೆ ₹ 14 ಕೋಟಿ ವಿತರಣೆ ಆಗಿದ್ದು 540 ರೈತರಿಗೆ ₹ 5.60 ಕೋಟಿ ಕೊಡುವುದು ಉಳಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ಸಾಲಮನ್ನಾದ ಸಬ್ಸಿಡಿಗೆ ಸಂಬಂಧಿಸಿದ ರಾಜ್ಯದ ಪಾಲು ಸಮರ್ಪಕವಾಗಿ ಬರುತ್ತಿದ್ದು ನಬಾರ್ಡ್ ಮೂಲಕ ಬರಬೇಕಾದ ಮೊತ್ತ ಸಿಗುತ್ತಿಲ್ಲ ಎಂದು ಮುಖಂಡರು ದೂರಿದರು. ಆದಾಯ ತೆರಿಗೆ ಕಟ್ಟುತ್ತಾರೆ ಎಂಬ ಕಾರಣಕ್ಕೆ ಪಿಎಂ ರೈತ ಯೋಜನೆಯಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು.
ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಪ್ರಮುಖರಾದ ಆಲ್ವಿನ್ ಮೆನೇಜಸ್, ರೂಪೇಶ್ ರೈ, ಸುರೇಶ್ ಭಟ್ ಕೊಳಂಬೆ, ಸ್ಟೀವನ್ ಡಿಸೋಜ, ಶಾಹುಲ್ ಹಮೀದ್ ಉಪ್ಪಿನಂಗಡಿ ಪಾಲ್ಗೊಂಡಿದ್ದರು.
ಆರೋಪ ಮಾಡುವುದು ಸುಲಭ. ಆದರೆ ವಾಸ್ತವ ತಿಳಿದುಕೊಳ್ಳಬೇಕು. ಪ್ರತಿಭಟನೆ ಮಾಡಲು ನಗರದಲ್ಲಿ ಜಾಗ ನಿಗದಿ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಮಾಡಬೇಕು ಎಂದು ಕೇಳುವುದು ಸರಿಯಲ್ಲ.ದರ್ಶನ್ ಎಚ್.ವಿ ಜಿಲ್ಲಾಧಿಕಾರಿ
ಕೋವಿ ಪರವಾನಗಿಗೆ ಆನ್‌ಲೈನ್ ವ್ಯವಸ್ಥೆ
ಬೆಳೆ ರಕ್ಷಣೆಗಾಗಿ ರೈತರು ಬಳಸುವ ಕೋವಿಯ ಪರವಾನಗಿ ಪಡೆಯಲು ಆನ್‌ಲೈನ್ ವ್ಯವಸ್ಥೆಯನ್ನು 2 ವಾರಗಳ ಒಳಗೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪರವಾನಗಿ ಹೊಂದಿದವರು ಸಾವಿಗೀಡಾದರೆ ಬದಲಿಸಲು ಸಮಸ್ಯೆ ಆಗುತ್ತಿದೆ. ಎಲ್ಲ ಹಂತದಲ್ಲೂ ಹಲವು ಅಡ್ಡಿಗಳಿವೆ ಎಂದು ಆರೋಪಿಸಿದ ರೈತ ಮುಖಂಡರಿಗೆ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಇನ್ನು ಮುಂದೆ ಅರ್ಜಿಗಳ ವಿಲೇವಾರಿಗೆ ಮೂರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ‘ಪೊಲೀಸರು ನಾನಾ ಬಗೆಯಲ್ಲಿ ಪರಿಶೀಲನೆ ಮಾಡುವಂಥಾದ್ದು ಏನಿದೆ’ ಎಂಬ ರೈತರ ಆಕ್ಷೇಪಕ್ಕೆ ಉತ್ತರಿಸಿದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ‘ಪರವಾನಗಿ ಪಡೆದಿರುವ ಕೋವಿಯಿಂದಲೇ ಜಿಲ್ಲೆಯಲ್ಲಿ ಈಚೆಗೆ ಎರಡು ಕೊಲೆಗಳು ಆಗಿವೆ. ಬೆದರಿಕೆ ಮತ್ತು ಕಾಡುಕೋಣಕ್ಕೆ ಗುಂಡು ಹೊಡೆದ ಪ್ರಕರಣಗಳೂ ಇವೆ’ ಎಂದರು.
ಕೆಲಸ ಮಾಡದ ಮಳೆ ಮಾಪಕಗಳು
ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯ ಮೊತ್ತ ಸರಿಯಾಗಿ ಸಿಗುತ್ತಿಲ್ಲ. ಮಳೆ ಪಾಮಕಗಳು ಸರಿ ಇಲ್ಲದ ಕಾರಣ ನಾಶದ ಪ್ರಮಾಣ ನಿಗದಿ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮುಖಂಡರೊಬ್ಬರು ದೂರಿದರು. ‘ ಉತ್ತರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ರಾಜು ಜಿಲ್ಲೆಯಲ್ಲಿ ಒಟ್ಟು 277 ಮಳೆಮಾಪನಗಳನ್ನು ಅಳವಡಿಸಿದ್ದು ಈಚೆಗೆ ಪರಿಶೀಲಿಸಿದಾಗ 116 ಮಾತ್ರ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಸಮರ್ಪಕವಾಗಿ ಅಳವಡಿಸದೇ ಇರುವುದರಿಂದ ಹೀಗಾಗಿದ್ದು ಜವಾಬ್ದಾರಿ ಹೊತ್ತವರಿಗೆ ನೋಟಿಸ್ ನೀಡಲಾಗಿದೆ ಎಂದರು.
‘ನಿಯಮಾವಳಿ ಪಾಲಿಸಲಾಗಿದೆ’
ಅನ್ವಯವಾಗುವ ಕಾನೂನುಗಳು ನಿಯಮಾವಳಿಗಳು ಸರ್ಕಾರಿ ಅಧಿಸೂಚನೆಗಳು ಮತ್ತು ಕಾಲಕಾಲಕ್ಕೆ ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡೇ 440 ಕೆವಿ ಯೋಜನೆಯ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಉಡುಪಿ-ಕಾಸರಗೋಡು ಟ್ರಾನ್ಸ್‌ಮಿಷನ್ ಲಿಮಿಟೆಡ್ (ಯುಕೆಟಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ. ಮಾತುಕತೆಯ ಮೂಲಕ ಭೂಮಾಲೀಕರನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದು ರೈಟ್ ಆಫ್ ವೇ ಮತ್ತು ಪರಿಹಾರದ ಪ್ರಕ್ರಿಯೆಗಳು ಪಾರದರ್ಶಕವಾಗಿವೆ. ಆಡಳಿತಾತ್ಮಕ ಮಾರ್ಗಗಳ ಮೂಲಕ ಶಾಂತಿಯುತ ಮತ್ತು ಅರ್ಥಪೂರ್ಣ ಮಾತುಕತೆಗೆ ಸದಾ ಸಿದ್ಧ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.