ಬಂಧನ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ಅಕ್ರಮವಾಗಿ ಮರಳು ಸಾಗಿಸಿದ ನಾಲ್ವರು ಆರೋಪಿಗಳನ್ನು ಹಾಗೂ ಮರಳು ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನವನ್ನು ಬಜಪೆ ಠಾಣೆಯ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
‘ಬಜಪೆ ಠಾಣೆಯ ಪಿಎಸ್‌ಐ ಅಶೋಕ್ ಸಿಬ್ಬಂದಿ ಜೊತೆ ಗಸ್ತು ತಿರುಗುವಾಗ ಆದ್ಯಪಾಡಿ ಗ್ರಾಮದ ಬಳಿ ರಸ್ತೆಗೆ ಪಿಕಪ್ ವಾಹನವನ್ನು ಅಡ್ಡವಾಗಿ ನಿಲ್ಲಿಸಿ ಅದರಿಂದ ಮರಳನ್ನು ನಾಲ್ವರು ಕೆಳಗಿಳಿಸುತ್ತಿದ್ದರು. ಪೊಲೀಸ್ ವಾಹನವನ್ನು ಕಂಡೊಡನೆ ಅವರು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಪೊಲೀಸ್ ಸಿಬ್ಬಂದಿ ಆ ನಾಲ್ವರನ್ನೂ ವಶಕ್ಕೆ ಪಡೆದಿದ್ದರು. ಆದ್ಯಪಾಡಿಯ ವ್ಯಕ್ತಿಯೊಬ್ಬರ ಕೋರಿಕೆ ಮೇರೆಗೆ ಕಂದಾವರ ಗ್ರಾಮದ ಕಲ್ಲಾಪುವಿನಲ್ಲಿ ಫಲ್ಗುಣಿ ನದಿಯಿಂದ ಮರಳನ್ನು ತಂದಿರುವುದಾಗಿ ಅವರು ತಿಳಿಸಿದ್ದರು. ಇದಕ್ಕಾಗಿ ಯಾವುದೇ ರಾಯಧನ ಪಾವತಿಸಿಲ್ಲ, ಪರವಾನಗಿ ಪಡೆದಿಲ್ಲ ಎಂದು ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಒಂದೂವರೆ ಯೂನಿಟ್‌ನಷ್ಟು ಮರಳು, ಪಿಕಪ್ ವಾಹನ, ಎರಡು ಕಬ್ಬಿಣದ ಸಲಿಕೆಗಳು ಹಾಗೂ ಟರ್ಪಾಲ್ ವಶಕ್ಕೆ ಪಡೆಯಲಾಗಿದೆ. ವಾಹನದ ಬೆಲೆ ₹ 4 ಲಕ್ಷ ಹಾಗೂ ಮರಳಿದ ಬೆಲೆ ₹ 7 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.