ADVERTISEMENT

ಮಳಲಿ ಮಸೀದಿ ಪ್ರಕರಣ: ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 16:08 IST
Last Updated 31 ಮೇ 2022, 16:08 IST
ಮಳಲಿ ಮಸೀದಿ ಪ್ರಕರಣ: ವಿಚಾರಣೆ ಮುಂದೂಡಿಕೆ
ಮಳಲಿ ಮಸೀದಿ ಪ್ರಕರಣ: ವಿಚಾರಣೆ ಮುಂದೂಡಿಕೆ   

ಮಂಗಳೂರು: ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಎತ್ತಿಗೊಂಡ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿ,ವಿಚಾರಣೆಯನ್ನು ಮುಂದೂಡಿದೆ. ಎರಡೂ ಕಡೆಗಳ ವಾದ ಆಲಿಸಿದ ನ್ಯಾಯಾಧೀಶೆ ಸುಜಾತಾ ಅವರು ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

ಕಲಾಪ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಸರಳಾಯ, ವಿವಾದಿತ‌ ಜಾಗದಲ್ಲಿ ಇರುವ ಹಳೆಯ ಕಟ್ಟಡದಲ್ಲಿ ದೇವಸ್ಥಾನದಂತಹ ರಚನೆ ಮತ್ತು ಕೆತ್ತನೆಗಳಿವೆ ಎಂದರು.

ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಸೀದಿ ಪರ ವಕೀಲ ಎಂ.ಪಿ.ಶೆಣೈ, ‘ಇದು 700 ವರ್ಷಗಳ ಇತಿಹಾಸ ಇರುವ ಮಸೀದಿ. ಆ‌ ಸಮಯದಲ್ಲಿ ಇಂತಹ ವಾಸ್ತುಶಿಲ್ಪಗಳನ್ನೇ ಬಳಸಿ ಮಸೀದಿಗಳನ್ನು ಕಟ್ಟಲಾಗಿದೆ. ಇದಕ್ಕೆ ಕಾಸರಗೋಡು, ಬಂದರ್ ಮಸೀದಿ ಹಾಗೂ ಮಳಲಿ ಪೇಟೆ ಮಸೀದಿಯ ಸಮೀಪದಲ್ಲೇ ಇರುವ ಅಮ್ಮುಂಜೆ ಮಸೀದಿಗಳ ರಚನೆಯೂ ಈ ರಚನೆಗೆ ಹೋಲಿಕೆಯಾಗುತ್ತವೆ‌. ವಿವಾದಿತ ಮಸೀದಿ ಇದ್ದ ಸ್ಥಳದಲ್ಲಿ ದೇವಸ್ಥಾನ ಇತ್ತೆಂದರೆ ಸಾಲದು, ಅದಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸಬೇಕು’ ಎಂದು ವಾದಿಸಿದರು.

ಮಸೀದಿಗೆ ಸಂಬಂಧಿಸಿದ 91 ಸೆನ್ಟ್ ಜಾಗವಿದೆ.‌ ಇದನ್ನು ಸರಕಾರಿ ಅಧಿಕಾರಿಗಳೇ ಗುರುತಿಸಿದ್ದಾರೆ. ಅಲ್ಲದೆ, ಈ ಮಸೀದಿಯಲ್ಲಿ 500 ವರ್ಷಗಳ ಹಿಂದಿನ ಮುಸ್ಲಿಮರ ಗೋರಿಗಳಿವೆ. ಇದು ಕೇವಲ ರಾಜಕೀಯ ಕಾರಣಕ್ಕಾಗಿ ಪ್ರಕರಣವನ್ನು ಮುನ್ನೆಲೆಗೆ ತರಲಾಗಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.

ಈ ಪ್ರಕರಣ ಜ್ಞಾನವ್ಯಾಪಿ ಮಸೀದಿಯ ಪ್ರಕರಣದಂತೆ ಇದೆ. ಆದ್ದರಿಂದ‌ ನ್ಯಾಯಾಲಯ ಪ್ರತ್ಯೇಕ ಆಯೋಗವೊಂದನ್ನು ರಚಿಸಿ ಆ ಮೂಲಕ‌ ಮಸೀದಿಯ ಸರ್ವೆ ನಡೆಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ‌ ಬರಲು ವೈಜ್ಞಾನಿಕ ಸಂಶೋಧನೆಯ ವರದಿಯ ಅಗತ್ಯವಿದೆ ಎಂದ ವಿಶ್ವ ಹಿಂದೂ ಪರಿಷತ್ ಪರ ವಕೀಲರು, ರಾಮ‌ ಜನ್ಮಭೂಮಿ ಪ್ರಕರಣವನ್ನು ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.