ಅಮಾನತು
ಮಂಗಳೂರು: ಮಂಗಳೂರು: ಕುಡುಪುವಿನಲ್ಲಿ ಈಚೆಗೆ ಗುಂಪು ಹಲ್ಲೆಯಿಂದ ಕೇರಳದ ಯುವಕ ಮೊಹಮ್ಮದ್ ಅಶ್ರಫ್ ಮೃತಪಟ್ಟ ಪ್ರಕರಣ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಕೆ.ಆರ್., ಹೆಡ್ ಕಾನ್‌ಸ್ಟೆಬಲ್ ಚಂದ್ರ ಪಿ. ಹಾಗೂ ಕಾನ್‌ಸ್ಟೆಬಲ್ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ.
‘ಪ್ರಕರಣದ ತನಿಖೆ ಚುರುಕಿನಿಂದ ನಡೆಯುತ್ತಿದೆ. 20 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಈಗ ಇನ್ನೊಬ್ಬ ಆರೋಪಿ ಅನಿಲ್ ಎಂಬಾತನನ್ನು ಬಂಧಿಸಿದ್ದೇವೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದರು.
‘ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಷ್ಟು ಮಂದಿ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರ ತಂಡಗಳು ಹುಡುಕಾಟ ನಡೆಸುತ್ತಿವೆ. ಇನ್ನು ಕೆಲವರು ಈ ಕೃತ್ಯದಲ್ಲಿ ನಿಜವಾಗಿಯೂ ಶಾಮೀಲಾಗಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಸಂದೇಹಗಳಿವೆ. ಕೃತ್ಯ ನಡೆದಾಗ ಸ್ಥಳದಲ್ಲಿದ್ದ ಇನ್ನೂ 15 ಮಂದಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದೇವೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಈ ಪ್ರಕರಣದಲ್ಲಿ ಶಾಮೀಲಾಗಿರುವವರ ಪತ್ತೆಗೆ ಕ್ರಮವಹಿಸಿದ್ದೇವೆ’ ಎಂದರು.
‘ಏ. 27ರಂದು ಆರಂಭದಲ್ಲಿ ದೇವಸ್ಥಾನದ ಹತ್ತಿರ ಶವ ಬಿದ್ದ ಮಾಹಿತಿ ಮಾತ್ರ ಗ್ರಾಮಾಂತರ ಪೊಲೀಸ್ ಠಾಣೆಗೆ ಸಿಕ್ಕಿತ್ತು’ ಎಂದರು.
ನಂತರ ವಿಧಿವಿಜ್ಞಾನ ತಜ್ಞರು, ಅಪರಾಧ ಕೃತ್ಯ ನಡೆದ ಸ್ಥಳ ಪರಿಶೀಲನೆಗೆ ಅಧಿಕಾರಿಗಳು, ಡಿಸಿಪಿಯವರು ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ನಡೆದ ಸ್ಥಳದಲ್ಲಿ ಅದೇ ದಿನ ಕ್ರಿಕೆಟ್ ಟೂರ್ನಿ ನಡೆದ ಹಾಗೂ ಆ ಸಂದರ್ಭದಲ್ಲಿ ಜಗಳವಾಗಿ ಯುವಕನಿಗೆ ಹೊಡೆದ ಮಾಹಿತಿ ನಂತರ ಗೊತ್ತಾಯಿತು. ಕೆಲವರು ಫೋನ್ ಮಾಡಿ ಈ ಮಾಹಿತಿಯನ್ನು ಸ್ಥಳೀಯ ಠಾಣೆಯ ಗುಪ್ತವಾರ್ತೆ ವಿಭಾಗದವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅವರು ಅದನ್ನು ನಮ್ಮ ಗಮನಕ್ಕೆ ತಂದಿರಲಿಲ್ಲ. ಒಂದು ವೇಳೆ ಆಗಲೇ ಆ ಮಾಹಿತಿಯನ್ನು ಗಮನಕ್ಕೆ ತಂದಿರುತ್ತಿದ್ದರೆ, ‘ಅನುಮಾನಾಸ್ಪದ ಅಸಹಜ ಸಾವು’ ಎಂದು ಎಫ್‌ಐಆರ್ ದಾಖಲಿಸಿಕೊಳ್ಳುವ ಬದಲು ನೇರವಾಗಿ ‘ಹತ್ಯೆ’ ಪ್ರಕರಣ ದಾಖಲಿಸಿಕೊಳ್ಳ ಬಹುದಾಗಿತ್ತು. ಈ ಕರ್ತವ್ಯ
ಲೋಪವೆಸಗಿದ್ದಕ್ಕೆ ಠಾಣಾಧಿಕಾರಿ ಶಿವಕುಮಾರ್ ಕೆ.ಆರ್., ಆ ಪ್ರದೇಶದ ಗಸ್ತು ನಿರ್ವಹಣೆಯ ಹೊಣೆ ಹೊತ್ತಿದ್ದ ಕಾನ್‌ಸ್ಟೆಬಲ್ ಯಲ್ಲಾಲಿಂಗ ಹಾಗೂ ಗುಪ್ತವಾರ್ತೆ ವಿಭಾಗದ ಹೆಡ್ ಕಾನ್‌ಸ್ಟೆಬಲ್ ಚಂದ್ರ ಪಿ. ಅವರನ್ನು ಅಮಾನತು ಮಾಡಲಾಗಿದೆ’ ಎಂದರು.
ಈ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿತ್ತು ಎಂದು ಅನೇಕ ಸಂಘಟನೆಗಳು ಆರೋಪಿಸಿದ್ದವು. ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ಕೆಲ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಅಮಾಯಕರ ಬಂಧನ: ಭರತ್ ಶೆಟ್ಟಿ
‘ಈ ಗುಂಪು ಹಲ್ಲೆ ಮತ್ತು ಹತ್ಯೆಯ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಎಸ್‌ಡಿಪಿಐನವರು ಪ್ರಯತ್ನಿಸುತ್ತಿದ್ದು ತಮಗೆ ಆಗದವರನ್ನು ಬೊಟ್ಟು ಮಾಡಿ ಆರೋಪಿಗಳೆಂದು ಬಿಂಬಿಸುತ್ತಿದ್ದಾರೆ. ಇದಕ್ಕೆ ಮಣಿದು ಅಮಾಯಕರನ್ನು ಬಂಧಿಸುವುದನ್ನು ನಿಲ್ಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ, ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ‘ಪಹಲ್ಗಾಮ್ ಘಟನೆ ನಡೆದ ನಂತರ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ದೇಶವಿರೋಧಿ ಚಟುವಟಿಕೆ ಕಂಡುಬಂದರೆ ಜನರು ಆಕ್ರೋಶಗೊಳ್ಳುವ ಪರಿಸ್ಥಿತಿ ಇದೆ. ನನ್ನ ಕ್ಷೇತ್ರದಲ್ಲಿ ಆಗಿರುವ ಗುಂಪು ಹಲ್ಲೆ ಮತ್ತು ಕೊಲೆ ಕೂಡ ಇದೇ ರೀತಿ ಉದ್ವೇಗದಿಂದ ಆಗಿರುವ ಸಾಧ್ಯತೆ ಇದೆ. ಅದನ್ನು ಅಪರಾಧ ಪ್ರಕರಣವಾಗಿ ನೋಡಬೇಕೇ ಹೊರತು ಧರ್ಮ ಮತ್ತು ರಾಜಕೀಯ ಬಣ್ಣ ಕೊಡುವುದು ಸರಿಯಲ್ಲ’ ಎಂದರು.
‘ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕೆ ಆಕ್ರೋಶಗೊಂಡ ಗುಂಪು ಯುವಕನನ್ನು ಕೊಂದಿದೆ ಎಂದು ಎಫ್‌ಐಆರ್‌ನಲ್ಲೇ ದಾಖಲಾಗಿದೆ. ಆದರೆ ಘೋಷಣೆ ಕೂಗಿದವ ಮಾನಸಿಕ ಅಸ್ವಸ್ಥ ಎಂದು ಹೇಳುವುದು ನೆಪ. ದೇಶದ್ರೋಹದ ಕೃತ್ಯ ಎಸಗಿದವರನ್ನು ಮತ್ತು ವಿಕೃತಿ ಮೆರೆದವರನ್ನು ಈ ಹಿಂದೆಯೂ ಮಾನಸಿಕ ಅಸ್ವಸ್ಥರು ಎಂದು ಹೇಳಿದ ಉದಾಹರಣೆಗಳು ಇವೆ. ಬೆಂಗಳೂರಿನಲ್ಲಿ ದನದ ಕೆಚ್ಚಲು ಕೊಯ್ದವರು, ಮಂಗಳೂರು
ಉತ್ತರ ಕ್ಷೇತ್ರದಲ್ಲಿ ಯುವತಿಯರ ಮೇಲೆ ದೌರ್ಜನ್ಯ ಎಸಗಿದವರು ಎಲ್ಲರೂ ಮಾನಸಿಕ ಅಸ್ವಸ್ಥರು ಹೇಗಾಗುತ್ತಾರೆ’ ಎಂದು ಶಾಸಕರು ಪ್ರಶ್ನಿಸಿದರು.
ಪಾಕ್ ಪರ ಘೋಷಣೆ, ಸಾಕ್ಷ್ಯ ಸಿಕ್ಕಿಲ್ಲ: ಕಮಿಷನರ್
‘ಆರೋಪಿಗಳು ಹಾಗೂ ಪ್ರತ್ಯಕ್ಷದರ್ಶಿ ಸಾಕ್ಷಿಗಳು ನೀಡಿರುವ ಹೇಳಿಕೆಗಳ ಪ್ರಕಾರ, ಅಶ್ರಫ್‌ಗೆ ಸಚಿನ್ ಹೊಡೆಯುತ್ತಿದ್ದನ್ನು ಮಾತ್ರ ಅವರು ನೋಡಿದ್ದಾರೆ. ಗುಂಪುಗೂಡಿದ್ದ ಜನರು ಅದನ್ನು ನೋಡಿ, ಅವರೂ ಹಲ್ಲೆ ನಡೆಸಿದ್ದಾರೆ. ಸಚಿನ್ ಏಕೆ ಹೊಡೆಯುತ್ತಿದ್ದ ಎಂಬುದು ಅವರಿಗೆ ಗೊತ್ತಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದ ಎಂಬುದಕ್ಕೆ ಸಾಕ್ಷ್ಯ ಇನ್ನೂ ಸಿಕ್ಕಿಲ್ಲ’ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಪ್ರತಿಕ್ರಿಯಿಸಿದರು.
‘ಗುಂಪು ಹಲ್ಲೆಯಿಂದಾಗಿ ಅಶ್ರಫ್ ಪ್ರಾಣ ಕಳೆದುಕೊಂಡಿದ್ದಾನೆ. ಆದರೆ ಕ್ರಿಕೆಟ್ ಪಂದ್ಯ ವೇಳೆ ಯಾವ ಕಾರಣಕ್ಕೆ ಜಗಳ ಶುರುವಾಯಿತು. ಅಶ್ರಫ್ ಮೇಲೆ ಹಲ್ಲೆ ನಡೆಸುವುದಕ್ಕೆ ಏನು ಕಾರಣ ಎಂಬುದು ಸ್ಪಷ್ಟವಾಗಿಲ್ಲ‘ ಎಂದರು.
ಎಫ್‌ಐಆರ್‌ನಲ್ಲಿ ಉಲ್ಲೇಖ:
‘ಗುಂಪು ಹಲ್ಲೆಯಿಂದ ಸಾವಿಗೀಡಾದ ಅಪರಿಚಿತ ಯುವಕ ಕ್ರಿಕೆಟ್ ಮೈದಾನದ ಬಳಿ ಬಂದಿದ್ದ. ಆತ ‘ಪಾಕಿಸ್ತಾನ್, ಪಾಕಿಸ್ತಾನ್ ’ ಎಂದು ಅರಚುತ್ತಿದ್ದಾನೆ. ಆತನನ್ನು ಬಿಡಬಾರದು, ಹೊಡೆದು ಹಾಕಿ’ ಎಂದು ಆರೋಪಿಗಳು ಆತನನ್ನು ಹಿಡಿಯಲು ಧಾವಿಸಿದ್ದರು...’ ಎಂದು ಪ್ರಕರಣದಲ್ಲಿ ದೂರು ನೀಡಿರುವ ದೀಪಕ್ ಅವರು ತಿಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.