ಮಂಗಳೂರು: ರಾಷ್ಟ್ರೀಯ ಹೆದ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಮಹಿಳೆಯೊಬ್ಬರ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕಾರಣವಾಗಿದೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಕೇಂದ್ರ ಸರ್ಕಾರ ಮತ್ತು ಸಂಸದ ಬ್ರಿಜೇಶ್ ಚೌಟ ಅವರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕಲ್ಲುಗಳಿಂದ ಬೀಳುವ ಹೈವೆ, ಕೆಸರಿನಿಂದ ಬೀಳುವ ಹೈವೆ, ಗುಂಡಿಗಳಿಂದ ಸಾಯಿಸುವ ಹೈವೆ ಎಂದು ಘೋಷಣೆ ಕೂಗಿದರು. ರಸ್ತೆಗಳನ್ನು ಸರಿಪಡಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಶವ ಎಂದು ಬಿಳಿ ಬಟ್ಟೆಯಲ್ಲಿ ಸುತ್ತಿದ ವಸ್ತುವನ್ನು ಹೊತ್ತುಕೊಂಡು ನಂತೂರು ವೃತ್ತದಿಂದ ಹೊರಟ ಪ್ರತಿಭಟನಾಕಾರರು, ಪಂಪ್‌ವೆಲ್ ವೃತ್ತದ ಸಮೀಪ ಇರುವ ಹೆದ್ದಾರಿ ಪ್ರಾಧಿಕಾರದ ಕಚೇರಿಯ ಮುಂದೆ ಜಮಾಯಿಸಿದರು. ಕಚೇರಿ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಬಲ ಪ್ರಯೋಗಿಸಿದಾಗ ಅವರನ್ನು ವಶಕ್ಕೆ ಪಡೆದುಕೊಂಡು ವ್ಯಾನ್‌ನಲ್ಲಿ ಕರೆದುಕೊಂಡು ಹೋಗಲಾಯಿತು. ನಂತರ ಬಿಡುಗಡೆ ಮಾಡಲಾಯಿತು.
ಪ್ರತಿಭಟನೆ ಆರಂಭಗೊಂಡಾಗ ನಂತೂರು ವೃತ್ತದಲ್ಲಿ ಮಾತನಾಡಿದ ಶಾಸಕ ಐವನ್ ಡಿಸೋಜ ನಗರದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವರೆಗೆ ಒಟ್ಟು 120 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗರಿಷ್ಠ ಮಟ್ಟದ ತೆರಿಗೆ ವಸೂಲಿ ಮಾಡುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಈಚೆಗೆ ಕೂಳೂರು ಸಮೀಪದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ನರೇಂದ್ರ ಮೋದಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಜನರು ಧ್ವನಿ ಎತ್ತತೊಡಗಿದ ನಂತರ ಹೆದ್ದಾರಿಗೆ ತೇಪೆ ಹಾಕುವ ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿಯ ಕೆಲಸಗಳೆಲ್ಲವೂ ಹೀಗೆ ತೇಪೆ ಹಾಕುವುದರಲ್ಲೇ ಮುಗಿದು ಹೋಗುತ್ತವೆ. ಇಲ್ಲಿನ ರಾಷ್ಟೀಯ ಹೆದ್ದಾರಿ ವಾಹನಗಳ ಓಡಾಟಕ್ಕೆ ಸೂಕ್ತವಾಗಿಲ್ಲ. ಸ್ಥಳೀಯ ಶಾಸಕರು ಬೇರೆಯವರ ಮೇಲೆ ಗೂಬೆ ಕೂರಿಸುವುದಕ್ಕಿಂತ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಸಂಸದರು ಕೂಡ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ ಅವರು ಹೊಂಡಕ್ಕೆ ಬಿದ್ದು ಸಾವಿಗೀಡಾದ ಮಾಧವಿ ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಎನ್‌ಎಚ್‌ಎಐ ಕಚೇರಿ ಮುಂದೆ ಮಾಧ್ಯಮದವರ ಜೊತೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ‘ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ದುರಸ್ತಿಗೆ ಕಾಳಜಿ ವಹಿಸಲಿಲ್ಲ. ಶಾಸಕರು ಮತ್ತು ಸಂಸದರಿಗೆ ಇಂಥ ವಿಷಯಗಳಲ್ಲಿ ಮಾತು ಬರುವುದಿಲ್ಲ. ಮಾತೆತ್ತಿದರೆ ಹಿಂದು ಮುಸ್ಲಿಂ, ಪಾಕಿಸ್ತಾನ ಇತ್ಯಾದಿ ವಿಷಯಗಳೇ ಅವರ ಬಾಯಲ್ಲಿ ಬರುತ್ತವೆ. ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬದ ಶಾಪ ಹೆದ್ದಾರಿಯ ಕಳಪೆ ನಿರ್ವಹಣೆಗೆ ಕಾರಣರಾದವರಿಗೆ ತಟ್ಟಲಿದೆ’ ಎಂದರು.
‘ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿರುವುದರ ಬಗ್ಗೆ ಮೂರು ತಿಂಗಳಿಂದ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳು ಬರುತ್ತಿವೆ. ಅದನ್ನು ಕಂಡೂ ಕಾಣದಂತೆ ಕುಳಿತಿರುವುದು ಬೇಸರದ ವಿಷಯ’ ಎಂದ ಅವರು ‘ಮಾಧವಿ ಅವರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮುಖಂಡರಾದ ಜೆ.ಆರ್ ಲೋಬೊ, ಮಿಥುನ್ ರೈ, ಶಾಹುಲ್ ಹಮೀದ್, ಎಂ.ಎಸ್ ಮಹಮ್ಮದ್, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಅನಿಲ್ ಕುಮಾರ್, ಶಶಧರ್ ಹೆಗ್ಡೆ, ಮಮತಾ ಗಟ್ಟಿ, ಅಪ್ಪಿಲತಾ ಮುಂತಾದವರು ಪಾಲ್ಗೊಂಡಿದ್ದರು.
ನಂತೂರು ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸಲಿಲ್ಲ ಎಂದು ದೂರು ಸಾವಿಗೀಡಾದ ಮಾಧವಿ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ಹೆದ್ದಾರಿಗಳಲ್ಲಿ ಒಂದು ಸುತ್ತು ಹೋಗಿ ಬಂದರೆ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಅಷ್ಟು ಮಾಡದೆ ಕಚೇರಿಯ ಒಳಗೆ ಕುಳಿತಿರುವುದುರಿಂದ ಸಮಸ್ಯೆಗಳು ಆಗುತ್ತಿವೆ. ಇನ್ನೆಷ್ಟು ಜೀವಗಳು ಹೋಗಬೇಕು?
-ಪದ್ಮರಾಜ್ ಆರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
- ಗೆಲುವು ನಮ್ಮದೇ... ಕೇಂದ್ರ ಸರ್ಕಾರದ ಶವ ಎಂದು ಹೇಳುತ್ತ ‘ಚಟ್ಟ’ದಲ್ಲಿ ಹೊತ್ತುತಂದ ಬಿಳಿ ಬಟ್ಟೆಯಿಂದ ಸುತ್ತಿದ ವಸ್ತುವನ್ನು ಪ್ರತಿಭಟನಾಕಾರರು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯುವಾಗಲೂ ಅದನ್ನು ಭದ್ರವಾಗಿ ಇರಿಸಿಕೊಂಡಿದ್ದರು. ಪೊಲೀಸ್ ವ್ಯಾನ್ ಕದ್ರಿಯ ಠಾಣೆಯ ಕಡೆಗೆ ಸಾಗಿದ ನಂತರ ಆ ವಸ್ತುವನ್ನು ಗೇಟ್ ಮೇಲಿಂದ ಕಚೇರಿಯ ಆವರಣಕ್ಕೆ ಎಸೆದರು. ನಂತರ ಗೆಲುವು ನಮ್ಮದೇ ಎಂದು ಕೂಗುತ್ತ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.