
ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ವತಿಯಿಂದ ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಮೀನುಗಾರಿಕಾ ಬಂದರಿನ ಕಾಮಗಾರಿ ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತ ಗೊಂಡಿದ್ದು, ಈಚೆಗೆ ಪುನಾರಂಭಗೊಂಡಿದೆ. ಇಲ್ಲಿನ ಬ್ರೇಕ್ ವಾಟರ್‌ಗೆ ಟೆಟ್ರಪಾಡ್ ಅಳವಡಿಸಲಾಗುತ್ತಿದೆ. ತಮ್ಮ ಬೇಡಿಕೆಯಂತೆ ಈ ಬಂದರಿನ ಬ್ರೇಕ್ ವಾಟರ್ ಉದ್ದವನ್ನು ಹೆಚ್ಚಿಸುವ ಪ್ರಸ್ತಾಪ ಈಡೇರಿದಿರುವುದು ಸ್ಥಳೀಯ ಮೀನುಗಾರರಲ್ಲಿ ಅಸಮಾಧಾನ ಮೂಡಿಸಿದೆ.
ನವ ಮಂಗಳೂರು ಬಂದರಿಗೆ ಭೂಸ್ವಾಧೀನ ನಡೆಸಿದಾಗ ಅನೇಕ ನಾಡದೋಣಿ ಮೀನುಗಾರರು ನೆಲೆ ಕಳೆದುಕೊಂಡಿದ್ದರು. ಸಂತ್ರಸ್ತ ನಾಡದೋಣಿ ಮೀನುಗಾರರಿಗೆ ಕುಳಾಯಿಯಲ್ಲಿ ಸರ್ವಋತು ಬಂದರು ನಿರ್ಮಿಸಿಕೊಡಬೇಕು ಎಂಬುದು ಮೀನುಗಾರರ ಬೇಡಿಕೆಯಾಗಿತ್ತು. 50 ವರ್ಷ ಪೂರೈಸಿರುವ ನವಮಂಗಳೂರು ಬಂದರು ಪ್ರಾಧಿಕಾರವು ₹196.51 ಕೋಟಿಯ ಈ ಬಂದರು ಯೋಜನೆ ಕೈಗೆತ್ತಿಕೊಂಡಾಗ ಮೀನುಗಾರರ ಮೊಗದಲ್ಲಿ ಸಂತಸ ಮೂಡಿಸಿತ್ತು. ಆದರೆ ಬಂದರಿನ ವಿನ್ಯಾಸ ಕಂಡು ಮೀನುಗಾರರ ಖುಷಿ ಕರಗಿತ್ತು.
ಕುಳಾಯಿ ಪರಿಸರದಲ್ಲಿ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೆ ದಡದಿಂದ ಸುಮಾರು 800 ಮೀ ದೂರದವರೆಗೂ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುತ್ತದೆ. ಬಂದರಿನ ಬ್ರೇಕ್ ವಾಟರ್ ಈ ಅಲೆಗಳ ಅಬ್ಬರ ತಡೆಯಲು ಸಾಲದು. ಉತ್ತರದ ಬ್ರೇಕ್ ವಾಟರ್ ಉದ್ದವನ್ನು 831 ಮೀಟರ್‌ನಿಂದ 1,081 ಮೀಟರ್‌ಗೆ ಹಾಗೂ ದಕ್ಷಿಣದ ಬ್ರೇಕ್ ವಾಟರ್‌ನ ಉದ್ದವನ್ನು 262 ಮೀಟರ್‌ನಿಂದ 981 ಮೀಟರ್‌ಗೆ ಹೆಚ್ಚಿಸಬೇಕು ಎಂಬುದು ಮೀನುಗಾರರ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಮೀನುಗಾರರ ಪ್ರತಿರೋಧಕ್ಕೆ ಮಣಿದು ಎನ್‌ಎಂಪಿಎ ಕಾಮಗಾರಿಯನ್ನು ನಿಲ್ಲಿಸಿತ್ತು. ಆ ಬಳಿಕ ಮೀನುಗಾರಿಕಾ ಸಚಿವರು, ಸಂಸದರು, ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಮೀನುಗಾರರ ಜೊತೆ ಸಭೆಗಳು ನಡೆದಿದ್ದವು.
‘ಸ್ಥಗಿತಗೊಂಡಿದ್ದ ಕಾಮಗಾರಿ ಒಂದು ತಿಂಗಳಿನಿಂದ ಈಚೆಗೆ ಪುನರಾರಂಭವಾಗಿದೆ. ಆದರೆ ನಮ್ಮ ಬೇಡಿಕೆಗೆ ಸರ್ಕಾರವಾಗಲಿ, ಎನ್‌ಎಂಪಿಎ ಆಗಲೀ ಸೊಪ್ಪು ಹಾಕಿಲ್ಲ. ಸುದೀರ್ಘ ಹೋರಾಟ ಮಾಡಿ ನಾವೂ ಸೋತು ಹೋಗಿದ್ದೇವೆ. ಅವರು ಏನಾದರೂ ಮಾಡಿಕೊಳ್ಳಲಿ ಎಂದು ಕೈಚೆಲ್ಲಿದ್ದೇವೆ’ ಎಂದು ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ್ ಕಾಂಚನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನವಮಂಗಳೂರು ಬಂದರಿಗೆ ಜಾಗ ತ್ಯಾಗ ಮಾಡಿದ್ದು ನಾಡದೋಣಿ ಮೀನುಗಾರರು. ಪರ್ಸೀನ್ ಬೋಟ್, ಟ್ರಾಲ್ ಬೋಟ್‌ಗಳ ಅಬ್ಬರದಿಂದಾಗಿ ನಾಡದೋಣಿ ಮೀನುಗಾರಿಕೆ ಈಚೆಗೆ ಸೊರಗಿದೆ. ನಾಡದೋಣಿಯವರಿಗೆ ಅನುಕೂಲವಾಗುವಂತೆ ಸರ್ವಋತು ಬಂದರನ್ನು ನಿರ್ಮಿಸಬೇಕು ಎಂಬ ನಮ್ಮ ಕನಸು ಕೊನೆಗೂ ಈಡೇರುತ್ತಿಲ್ಲ’ ಎಂದು ಬೇಸರ ತೋಡಿಕೊಂಡರು.
ಸ್ಥಳೀಯ ಮೀನುಗಾರ ಶರತ್ ಬಂಗೇರ, ‘ನಮ್ಮ ಸಲಹೆಗಳನ್ನು ಕಡೆಗಣಿಸಿ, ಮೂಲ ವಿನ್ಯಾಸದ ಪ್ರಕಾರವೇ ಬಂದರು ನಿರ್ಮಿಸಲಾಗುತ್ತಿದೆ. ಹಾಗಾಗಿ ಇದು ಖಂಡಿತಾ ಸರ್ವಋತು ಬಂದರು ಆಗಲು ಸಾಧ್ಯವಿಲ್ಲ’ ಎಂದರು.
ಬ್ರೇಕ್ ವಾಟರ್ ಕಾಮಗಾರಿಯನ್ನು ಸ್ಥಗಿತಗೊಳಿಸಿ, ದೀರ್ಘ ಕಾಲ ಹಾಗೆಯೇ ಬಿಟ್ಟರೆ ಅದರ ಮುಖ್ಯ ಪದರ (ಕೋರ್ ಲೇಯರ್) ಸ್ಥಳಾಂತರಗೊಳ್ಳಬಹುದು. ನೀರಿನ ಪ್ರವಾಹದ ಒತ್ತಡ ಹಾಗೂ ಅಲೆಗಳ ಅಬ್ಬರವನ್ನು ತಾಳಿಕೊಳ್ಳುವಷ್ಟು ಸಾಮರ್ಥ್ಯ ಅದಕ್ಕಿಲ್ಲ. ಉತ್ತರದ ಬ್ರೇಕ್ ವಾಟರ್‌ನಲ್ಲಿ 560 ಮೀ ಉದ್ದದಷ್ಟು ಕಾಮಗಾರಿ ಈಗಾಗಲೇ ನಡೆದಿದೆ. ಅದರಲ್ಲಿ 300 ಮೀಟರ್‌ನಷ್ಟು ದೂರಕ್ಕೆ ಟೆಟ್ರಾಪಾಡ್ ಅಳವಡಿಸಲಾಗಿದೆ. ದಕ್ಷಿಣದ 262 ಮೀ ಉದ್ದದ ಬ್ರೇಕ್ ವಾಟರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ಹಂತದಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದು ಸರಿಯಲ್ಲ. ಮೀನುಗಾರರ ಬೇಡಿಕೆ ಈಡೇರಿಸುವುದಕ್ಕೆ ದೊಟ್ಟ ಮೊತ್ತದ ಬಜೆಟ್ನ ಅಗತ್ಯವಿದೆ ಎನ್ನುವುದು ಎನ್‌ಎಂಪಿಎ ವಾದ.
ಕಾಮಗಾರಿ ಮತ್ತೆ ಶುರುವಾದ ಬಳಿಕ ಬಂದರಿನ ಮೂಲ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಈ ಯೋಜನೆಗೆ ಸಂಬಂಧಿಸಿದ ಎನ್ಎಂಪಿಎ ಅಧಿಕಾರಿ ನಿರಾಕರಿಸಿದರು.
ಸುರತ್ಕಲ್‌ನ ಎನ್‌ಐಟಿಕೆ ತಟಸ್ಥ ಸಂಸ್ಥೆಯಾಗಿ ಈ ಯೋಜನೆಗೆ ಅಗತ್ಯ ತಾಂತ್ರಿಕ ಸಲಹೆಯನ್ನು ಒದಗಿಸುತ್ತಿದೆ. ಮೆ| ಎಸ್‌ಎಪಿಎಲ್ ಜಿಸಿಸಿ ಜಾಯಿಂಟ್ ವೆಂಚರ್ ಸಂಸ್ಥೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.
ಸ್ಥಳೀಯ ಮೀನುಗಾರರನ್ನು ವಿಶ್ವಾಸಕ್ಕೆ ಪಡೆದೇ ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿ ನಡೆಸಲು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಸೂಚಿಸಿದ್ದರು. ಕಾಮಗಾರಿ ಪುನರಾರಂಭಿಸುವ ವಿಚಾರದಲ್ಲಿ ಮೀನುಗಾರರನ್ನು ಕತ್ತಲಿನಲ್ಲಿಡಲಾಗಿದೆಅಶ್ವತ್ಥ್ ಕಾಂಚನ್ ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.