ADVERTISEMENT

ಮಂಗಳೂರು: ಸ್ವಚ್ಛತೆ ಸವಾಲು, ರೈಲ್ವೆ ಗೇಟ್ ಕಿರಿಕಿರಿ

ಪೋರ್ಟ್ ವಾರ್ಡ್‌ನಲ್ಲಿ ಸಂಚಾರ ದಟ್ಟಣೆ, ದೊಡ್ಡ ಲಾರಿಗಳ ಓಡಾಟ; ಶುಚಿತ್ವ, ಸೌಲಭ್ಯಗಳ ಕೊರತೆ

ಸಂಧ್ಯಾ ಹೆಗಡೆ
Published 15 ಅಕ್ಟೋಬರ್ 2025, 5:17 IST
Last Updated 15 ಅಕ್ಟೋಬರ್ 2025, 5:17 IST
ಹೂಳು ತುಂಬಿರುವ ಚರಂಡಿಯಲ್ಲಿ ಪೈಪ್‌ಗಳಿಗೆ ಕಸ ಸಿಲುಕಿ ನೀರಿನ ಹರಿವಿಗೆ ಅಡ್ಡಿಯಾಗಿದೆ
ಹೂಳು ತುಂಬಿರುವ ಚರಂಡಿಯಲ್ಲಿ ಪೈಪ್‌ಗಳಿಗೆ ಕಸ ಸಿಲುಕಿ ನೀರಿನ ಹರಿವಿಗೆ ಅಡ್ಡಿಯಾಗಿದೆ   

ಮಂಗಳೂರು: ನಗರದ ಪ್ರಮುಖ ಕಚೇರಿಗಳು, ಬ್ಯಾಂಕ್, ಮಾಲ್‌ ಹೊಂದಿರುವ ಪೋರ್ಟ್‌ ವಾರ್ಡ್‌ನಲ್ಲಿ ಸ್ವಚ್ಛತೆಯೇ ಸವಾಲಾಗಿದೆ.

ಕೋಟ್ಯಂತರ ರೂಪಾಯಿ ಆದಾಯ ಬರುವ ದಕ್ಕೆಯಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಇಲ್ಲಿ ಶುಚಿತ್ವ, ಸೌಲಭ್ಯಗಳ ಕೊರತೆಯೂ ಇದೆ. ವಾರ್ಡ್‌ನ ಶೇ 65 ಭಾಗ ಪಾಲಿಕೆ ವ್ಯಾಪ್ತಿಗೆ ಸೇರಿದರೆ, ಉಳಿದ ಭಾಗ ಶೇ 35ರಷ್ಟು ಪ್ರದೇಶ ಮೀನುಗಾರಿಕಾ, ಬಂದರು, ರೈಲ್ವೆ ಇಲಾಖೆ ಅಡಿಯಲ್ಲಿ ಬರುವುದರಿಂದ ಇವುಗಳಿಂದ ಅಭಿವೃದ್ಧಿ ಆಗಬೇಕಾಗಿದೆ.

ಕೆಲವು ಕಡೆಗಳಲ್ಲಿ ರಸ್ತೆಯ ಒಂದು ಬದಿಯಲ್ಲಿ ಚರಂಡಿ ಇಲ್ಲದ ಪರಿಣಾಮ ಮಳೆಗಾಲದಲ್ಲಿ ಕೆಲವು ಮನೆಗಳು, ನಮ್ಮ ಕ್ಲಿನಿಕ್‌ಗೆ ನೀರು ನುಗ್ಗಿತ್ತು. ಮಹಾನಗರ ಪಾಲಿಕೆಯವರು ಮಳೆಗಾಲದ ಪೂರ್ವದಲ್ಲಿ ಚರಂಡಿ ಸ್ವಚ್ಛಗೊಳಿಸುವುದಿಲ್ಲ. ಇದರಿಂದ ಚರಂಡಿಯಲ್ಲಿ ಹೂಳು ತುಂಬಿ, ನೀರು ಸರಾಗವಾಗಿ ಹರಿಯುವುದಿಲ್ಲ. ರಸ್ತೆ ಬದಿ ಬೆಳೆದಿರುವ ಗಿಡ–ಗಂಟಿಗಳು, ಕಸ ತೆರವುಗೊಳಿಸುವುದರ ಬಗ್ಗೆಯೂ ಪಾಲಿಕೆ ನಿರ್ಲಕ್ಷ್ಯ ತೋರುತ್ತದೆ ಎಂಬುದು ಸ್ಥಳೀಯರ ಆರೋಪ.

ADVERTISEMENT

‘ಹೊಯ್ಗೆಬಜಾರದ ರೈಲ್ವೆ ಗೇಟ್‌ನಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ. ಹಿಂದೆ ಗೂಡ್ಸ್ ಗಾಡಿಗಳು ಇಲ್ಲಿ ಬಂದು ನಿಲ್ಲುತ್ತಿದ್ದವು. ಗೂಡ್ಸ್ ಶೆಡ್ ಉಳ್ಳಾಲಕ್ಕೆ ವರ್ಗಾವಣೆಗೊಂಡ ಮೇಲೆ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ಈಗ, ಪ್ರಯಾಣಿಕರ ರೈಲುಗಳು ಸ್ವಚ್ಛತೆಗಾಗಿ ಬರುತ್ತವೆ. ದಿನಕ್ಕೆ ಆರೆಂಟು ಬಾರಿ ರೈಲ್ವೆ ಗೇಟ್ ಹಾಕಲಾಗುತ್ತದೆ. 10–15 ನಿಮಿಷ ಕಾಯಬೇಕಾಗುತ್ತದೆ. ತುರ್ತು ಕೆಲಸಕ್ಕೆ ಹೋಗುವವರು, ಶಾಲಾ ಮಕ್ಕಳಿಗೆ ತೀವ್ರ ತೊಂದರೆ. ಗೇಟ್ ತೆರೆದ ಮೇಲೆ ವಾಹನ ಸವಾರರು ಒಮ್ಮೆಲೇ ನುಗ್ಗುವದರಿಂದ ಸಂಚಾರ ದಟ್ಟಣೆಯಾಗುತ್ತದೆ. ರೈಲು ಬರುವ ವೇಳೆಗೆ ಟ್ರಾಫಿಕ್ ಪೊಲೀಸ್ ಇದ್ದರೆ ಉತ್ತಮ’ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ‌

ಕಾರ್ಮೆಲ್, ರೊಸಾರಿಯೊ ಶಿಕ್ಷಣ ಸಂಸ್ಥೆಗಳು ಇರುವ ರಸ್ತೆಯ ಮಾರ್ಗವಾಗಿ ಬಂದರಿಗೆ ಹೋಗುವ ದೊಡ್ಡ ಲಾರಿಗಳು ಸಾಗುತ್ತವೆ. ಶಾಲೆಗೆ ಬರುವ ವಾಹನಗಳು, ಲಾರಿ ಓಡಾಟದಿಂದ ಕೆಲವೊಮ್ಮೆ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೊರರಾಜ್ಯಗಳ ಲಾರಿಯವರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿಕೊಂಡು ಅಲ್ಲಿಯೇ ಅಡುಗೆ ಮಾಡಿ, ತ್ಯಾಜ್ಯವನ್ನು ಅಲ್ಲೇ ಎಸೆದು ಹೋಗುತ್ತಾರೆ. ದಾರಿದೀಪಗಳ ನಡುವಿನ ಅಂತರ ಹೆಚ್ಚಿರುವುದರಿಂದ ರಸ್ತೆಯ ಅಲ್ಲಲ್ಲಿ ಕತ್ತಲೆ ಇರುತ್ತದೆ. ಸಂಜೆ ಓಡಾಡುವವರಿಗೆ ತುಸು ಕಷ್ಟ ಎಂದು ಅಪಾರ್ಟ್‌ಮೆಂಟ್‌ ವೊಂದರ ವಾಚ್‌ಮನ್ ಮಹಿಳೆ ಆರೋಪಿಸಿದರು. 

ತಗ್ಗು ಪ್ರದೇಶದಲ್ಲಿರುವ ಸುಭಾಸ್‌ನಗರ ಮಳೆಗಾಲದಲ್ಲಿ ಹೊಳೆಯಾಗುತ್ತದೆ. ಹಿಂದೆ ಕೆರೆ ಇದ್ದಾಗ ಇಷ್ಟು ಸಮಸ್ಯೆ ಇರಲಿಲ್ಲ. ಈಗ ಅಲ್ಲಿ ಎಮ್ಮೆಕೆರೆ ಈಜುಕೊಳ ನಿರ್ಮಾಣವಾದ ಮೇಲೆ ಅದರ ಹಿಂಭಾಗದ ನೀರು ಕೂಡ ಇಲ್ಲಿಗೇ ಬರುತ್ತದೆ ಎಂದು ಹಿರಿಯರೊಬ್ಬರು ಹೇಳಿದರು.

ಹೊಯ್ಗೆಬಜಾರ್ ರೈಲ್ವೆ ಗೇಟ್‌ನ ಎರಡೂ ಕಡೆಗಳಲ್ಲಿ ವಾಹನಗಳು ನಿಂತಿರುವುದು
ರೈಲ್ವೆ ಇಲಾಖೆಯವರು ರೈಲು ಬರುವ ಪೂರ್ವದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ರೈಲ್ವೆ ಗೇಟ್ ಬಂದ್‌ ಆಗಿ ತೆರೆಯುವ ವೇಳೆ ಸಂಚಾರ ಪೊಲೀಸರು ಇದ್ದು ವಾಹನ ದಟ್ಟಣೆ ನಿಯಂತ್ರಿಸಿದರೆ ಸ್ಥಳೀಯರಿಗೆ ತುಂಬಾ ಅನುಕೂಲ.
ಕೆ.ಜೆ. ಪಿಂಟೊ ಸ್ಥಳೀಯ ನಿವಾಸಿ
ಕೆ.ಜೆ. ಪಿಂಟೊ

ವಾರ್ಡ್‌ನ ವಿಶೇಷ

ಹಳೆ ಜಿಲ್ಲಾಧಿಕಾರಿ ಕಚೇರಿ ಪೊಲೀಸ್ ಕಮಿಷನರ್ ಫೋರಂ ಬೈ ನೆಕ್ಸಸ್ ಮಾಲ್ ಬಂದರು ಬ್ಯಾಂಕ್ ಆಫ್ ಬರೋಡ ಸ್ಟೇಟ್‌ ಬ್ಯಾಂಕ್ ಸೈದಾನಿ ಬೀಬಿ ದರ್ಗಾ ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನ ರೊಸಾರಿಯೊ ಕೆಥೆಡ್ರಲ್ ಈ ವಾರ್ಡ್ ವ್ಯಾಪ್ತಿಯಲ್ಲಿವೆ.

‘ಕಾಲುದಾರಿಗಳಿಗೆ ಕಾಂಕ್ರೀಟ್’
ಪೋರ್ಟ್‌ ವಾರ್ಡ್‌ನಲ್ಲಿ ನಮ್ಮ ಕ್ಲಿನಿಕ್ ಅಂಗನವಾಡಿ ಪ್ರಾರಂಭಿಸಲಾಗಿದೆ. ಕಾಲು ದಾರಿಗಳಿಗೆ ಕಾಂಕ್ರೀಟ್ ಹಳೆಯದಾದ ವಿದ್ಯುತ್ ದೀಪದ ಕಂಬಗಳನ್ನು ಬದಲಿಸುವ ಜೊತೆಗೆ ಎಲ್‌ಇಡಿ ದೀಪ ಹಾಕಲಾಗಿದೆ. ಹಳೆಯದಾಗಿದ್ದ ಒಳಚರಂಡಿ ಪೈಪ್‌ಗಳನ್ನು ಕೆಲವು ಕಡೆಗಳಲ್ಲಿ ಬದಲಿಸಲಾಗಿದೆ. ಶೇ 98ರಷ್ಟು ರಸ್ತೆಗಳು ಕಾಂಕ್ರೀಟ್ ಅಥವಾ ಡಾಂಬರ್ ಹೊದ್ದುಕೊಂಡಿವೆ. ತಾಂತ್ರಿಕ ಕಾರಣದಿಂದ ಸುಭಾಸ್ ನಗರದ ಒಂದು ಕಡೆ ಮಾತ್ರ ರಸ್ತೆ ನಿರ್ಮಾಣ ವಿಳಂಬವಾಗಿದೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯ ಅಬ್ದುಲ್ ಲತೀಫ್ ಪ್ರತಿಕ್ರಿಯಿಸಿದರು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವಾರ್ಡ್‌ನಲ್ಲಿ ಸಭಾ ವೇದಿಕೆ ನಿರ್ಮಿಸಲಾಗಿದೆ. ಹಳೆಯದಾದ ಅಲ್ಬುಕರ್ಕ್ ಸೇತುವೆ ಮರು ನಿರ್ಮಾಣಕ್ಕೆ ಹಿಂದೆ ಮಾಡಿದ ಪ್ರಯತ್ನದ ಫಲವಾಗಿ ಈಗ ಟೆಂಡರ್ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದರು.