
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ವಿಚಾರಕ್ಕೆ ಸಂಬಂಧಿಸಿ ಸರ್ಕಾರ ರಾಜಧನ ಇಳಿಕೆ ಮಾಡಿರುವುದನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ವಿನಂತಿಸಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಮನವಿ ಸಲ್ಲಿಸಲಾಯಿತು.
ಕೆಂಪುಕಲ್ಲು ಗಣಿ ಮಾಡುವವರು, ಉದ್ಯಮಿಗಳು, ಗುತ್ತಿಗೆದಾರರ ಸಭೆ ನಡೆಸಿ ಚರ್ಚಿಸಲಾಯಿತು. ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸುವ ಕೆಂಪುಕಲ್ಲಿನ ಗಣಿಗಾರಿಕೆಗೆ ಸಂಬಂಧಿಸಿ ರಾಜಧನವನ್ನು ಶೇ 58.82ರಷ್ಟು ಇಳಿಕೆ ಮಾಡಿದರೂ ಕೆಂಪುಕಲ್ಲು ದರ ಮಾತ್ರ ದುಬಾರಿಯಾಗಿ ಉಳಿದಿದೆ. ಈ ಮೊದಲು ₹30 ಇದ್ದ ಕಲ್ಲಿನ ದರಕ್ಕೆ ಈಗ ರಾಜಸ್ವ ಹೆಸರಿನಲ್ಲಿ ₹50ರಿಂದ ₹55 ವಸೂಲಿ ಮಾಡುತ್ತಿದ್ದು, ಇದು ಬಡವರು, ಮಧ್ಯಮ ವರ್ಗದವರಿಗೆ ದುಬಾರಿಯಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರದ ರಾಜಧನ ಇಳಿಕೆ ಮಾಡಿದರೂ ಉದ್ಯಮಿಗಳು ಇದನ್ನು ಇಳಿಸದೆ ಹಿಂದಿನ ದರ ವಸೂಲಿ ಮಾಡುತ್ತಿದ್ದಾರೆ. 10 ಟನ್ ಕೆಂಪುಕಲ್ಲಿಗೆ ₹18ರಿಂದ 20 ಸಾವಿರ ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಕ್ಕೆ ಸಂದಾಯವಾಗುತ್ತಿರುವುದು ₹920 ಮಾತ್ರ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲೆ ಹಿರಿಯ ಭೂ ವಿಜ್ಞಾನಿ ಹಾಗೂ ಗಣಿ ಇಲಾಖೆ ಅಧಿಕಾರಿ ಹೇಳುತ್ತಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಇರುವ ಕೆಂಪುಕಲ್ಲಿನ ದರದಲ್ಲಿ 1,200 ಚದರಡಿ ವಿಸ್ತೀರ್ಣದ ಮನೆಗೆ ಅಂದಾಜು ಸುಮಾರು ₹3 ಲಕ್ಷದವರೆಗೆ ಹೆಚ್ಚಳವಾಗುತ್ತದೆ. ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗುತ್ತದೆ ಎಂದು ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಧನದ ಹೆಸರಲ್ಲಿ ಕೆಂಪುಕಲ್ಲು ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದರ ಬಗ್ಗೆ ಪರಿಶೀಲನೆ ನಡೆಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಲಾಯಿತು.
ಕಾಂಗ್ರೆಸ್ ಪ್ರಮುಖರಾದ ಪದ್ಮರಾಜ್ ಪೂಜಾರಿ, ರಾಜು ಪೂಜಾರಿ, ಕಿರಣ್ ಬಡ್ಲೆಗುತ್ತು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.