ಮಂಗಳೂರು ವಿಶ್ವವಿದ್ಯಾಲಯ
ಮಂಗಳೂರು: ಆರ್ಥಿಕ ಸಂಕಷ್ಟದ ಕಾರಣಕ್ಕಾಗಿ ಸುದ್ದಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯವು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ತರಗತಿಗಳಿಗೆ ಶುಲ್ಕವನ್ನು ಹೆಚ್ಚಿಸಿದೆ. ವಿಶ್ವವಿದ್ಯಾನಿಲಯದ ಈ ಕ್ರಮಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2023-24ಕ್ಕೆ ಹೋಲಿಸಿದರೆ 2024–25ನೇ ಸಾಲಿನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಟ್ಯೂಷನ್ ಶುಲ್ಕದಲ್ಲಿ ಭಾರಿ ಏರಿಕೆ ಆಗಿದೆ. ವಿಜ್ಞಾನದ ಕೆಲ ವಿಭಾಗಗಳ ಟ್ಯೂಷನ್ ಶುಲ್ಕಗಳು ದುಪ್ಪಟ್ಟಾಗಿವೆ. ವಿವಿಧ ಕೋರ್ಸ್‌ಗಳ ಸಾಮಾನ್ಯ ಶುಲ್ಕ (ಕಾಮನ್ ಫೀ) ₹ 6,865 ಇದ್ದದ್ದು, ₹7,410ಕ್ಕೆ ಏರಿಕೆ ಆಗಿದೆ. ಪ್ರಯೋಗಾಲಯ ಶುಲ್ಕವನ್ನು ಸುಮಾರು ₹ 3000ದಷ್ಟು ಹೆಚ್ಚಳ ಮಾಡಲಾಗಿದೆ. ಪ್ರಾದೇಶಿಕ ಭಾಷೆಗಳಾದ ತುಳು ಮತ್ತು ಕೊಂಕಣಿ ವಿಷಯಗಳ ಟ್ಯೂಷನ್ ಶುಲ್ಕ ₹10,000 ದಷ್ಟು ಏರಿಕೆ ಆಗಿದೆ ಎಂದು ವಿಶ್ವವಿದ್ಯಾನಿಲಯದ ಮೂಲಗಳು ತಿಳಿಸಿವೆ.
‘ವಿಶ್ವವಿದ್ಯಾನಿಲಯ ಆರ್ಥಿಕ ಸಂಕಷ್ಟದಲ್ಲಿದೆ. ಕೆಲವು ವಿಭಾಗಗಳಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದರೆ. ಪರಿಸ್ಥಿತಿ ಹೀಗಿರುವಾಗ ಮತ್ತೆ ಶುಲ್ಕ ಹೆಚ್ಚಿಸಿರುವುದು ವಿಶ್ವವಿದ್ಯಾನಿಲಯಕ್ಕೆ ಅನುಕೂಲಕ್ಕಿಂತ ಹೆಚ್ಚು ಹಾನಿಯನ್ನು ಮಾಡುವ ಸಾಧ್ಯತೆ ಇದೆ’ ಎಂದು ವಿವಿಯ ಸಿಬ್ಬಂದಿಯೊಬ್ಬರು ಕಳವಳ ವ್ಯಕ್ತಪಡಿಸಿದರು.
‘ವಿಶ್ವವಿದ್ಯಾನಿಲಯವು ಈ ಪರಿಸ್ಥಿತಿಗೆ ತಲುಪಲು ಬೇರೆಯದೇ ಕಾರಣಗಳು ಇವೆ. ಶುಲ್ಕ ಹೆಚ್ಚಿಸುವುದು ಮತ್ತು ಇತರೆ ಸಣ್ಣ ಪುಟ್ಟ ಪರಿಹಾರಾತ್ಮಕ ಕ್ರಮಗಳಿಂದ ಈ ಅವ್ಯವಸ್ಥೆಯ ಕಂದಕವನ್ನು ಮುಚ್ಚಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
‘ಆರ್ಥಿಕವಾಗಿ ದುರ್ಬಲ ವಿದ್ಯಾ ರ್ಥಿಗಳು, ಉನ್ನತ ಶಿಕ್ಷಣ ಪಡೆಯುವ ಮಹತ್ವಾಕಾಂಕ್ಷೆಯಿಂದ ಸವಲತ್ತುಗಳು ಕಡಿಮೆ ಇದ್ದರೂ ತರಬೇತಿ ಶುಲ್ಕ ಕಡಿಮೆ ಎಂಬ ಕಾರಣಕ್ಕೆ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುತ್ತಾರೆ. ಆದರೆ ಈಗ ವಿವಿ ನಿಗದಿಪಡಿಸಿರುವ ಶುಲ್ಕಕ್ಕೂ ಖಾಸಗಿ ಕಾಲೇಜುಗಳ ಶುಲ್ಕಕ್ಕೂ ಬಹಳ ಅಂತರವೇನಿಲ್ಲ’ ಎಂದು ವಿದ್ಯಾರ್ಥಿನಿ ಶರಿಷ್ಮಾ ಹೇಳಿದರು.
‘ತಿಂಗಳುಗಟ್ಟಲೆ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಮತ್ತು ವಿಶ್ವವಿದ್ಯಾನಿಲಯದ ಬೊಕ್ಕಸ ಭರಿಸುವ ಸಲುವಾಗಿ ಶುಲ್ಕ ಹೆಚ್ಚಿಸುವ ಕಾರ್ಯತಂತ್ರ ವಿದ್ಯಾರ್ಥಿಗಳ ಮತ್ತು ಪೋಷಕರನ್ನು ಸಂಕಷ್ಟಕ್ಕೆ ತಳ್ಳಲಿದೆ. ಯಾವುದೇ ಸ್ನಾತಕೋತ್ತರ ಕೋರ್ಸ್ ಮುಂದುವರಿಸಲು ಕನಿಷ್ಠ 15 ವಿದ್ಯಾರ್ಥಿಗಳಾದರೂ ಪ್ರವೇಶ ಪಡೆಯಬೇಕು ಎಂದು ಸಿಂಡಿಕೇಟ್ ನಿರ್ಧಾರ ಕೈಗೊಂಡಿದೆ. ಶುಲ್ಕ ಹೆಚ್ಚಳದಿಂದ ವಿದ್ಯಾರ್ಥಿಗಳ ಪ್ರವೇಶಾತಿ 15ಕ್ಕಿಂತ ಕಡಿಮೆಯಾದರೆ, ನಮ್ಮ ವಿಭಾಗವನ್ನೂ ಮುಚ್ಚುವ ಸಾಧ್ಯತೆ ಇದೆ. ಇದರಿಂದ ನನ್ನ ಉದ್ಯೋಗಕ್ಕೂ ಕುತ್ತು ಬರುತ್ತದೆಯೇನೋ ಎಂಬ ಆತಂಕ ಕಾಡುತ್ತಿದೆ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ವಿಶ್ವವಿದ್ಯಾನಿಲಯದ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
‘ನಮ್ಮ ವಿಭಾಗದಲ್ಲಿ ಟ್ಯೂಷನ್ ಶುಲ್ಕವನ್ನು ಏಕಾಏಕಿ ₹ 9,410ನಷ್ಟು ಹೆಚ್ಚಳ ಮಾಡಿದ್ದನ್ನು ಕಂಡು ಆಶ್ಚರ್ಯ ವಾಯಿತು. ಭವಿಷ್ಯದ ಬಗ್ಗೆ ದೊಡ್ಡ ಕನಸು ಹೊತ್ತು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಬಯಸುವ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಮೊತ್ತ ಭರಿ ಸುವುದು ಕಷ್ಟವಾಗಬಹುದು’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.
ಶುಲ್ಕ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ವಿಶ್ವವಿದ್ಯಾನಿಲಯದ ಕುಲಸಚಿವ ರಾಜು ಮೊಗವೀರ, ‘ಬೆಲೆ ಏರಿಕೆ ಪ್ರಮಾಣವನ್ನು ಆಧರಿಸಿ ಪ್ರತಿವರ್ಷವೂ ವಿಶ್ವವಿದ್ಯಾನಿಲಯವು ಶುಲ್ಕವನ್ನು ಶೇ 8ರಿಂದ 10ರಷ್ಟು ಹೆಚ್ಚಳ ಮಾಡುತ್ತದೆ. ಇದು ಅನಿವಾರ್ಯ ಕೂಡ. ವಿದ್ಯಾರ್ಥಿಗಳಿಗೆ ಹೊರೆ ಆಗದಂತೆ ಶುಲ್ಕ ಹೆಚ್ಚಿಸಿದ್ದೇವೆ’ ಎಂದರು.
ತುಳು ಎಂ.ಎ ಶುಲ್ಕ ಕಡಿತಕ್ಕೆ ಮನವಿ
ಮಂಗಳೂರು: ತುಳು ಎಂ.ಎ ಪದವಿ ಪ್ರವೇಶ ಶುಲ್ಕವನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ತುಳು ಅಕಾಡೆಮಿ ವತಿಯಿಂದ ಮಂಗಳೂರು ವಿ.ವಿ. ಕುಲಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ₹12 ಸಾವಿರ ಇದ್ದ ಶುಲ್ಕವನ್ನು ಈ ಬಾರಿ ₹22,400ಗೆ ಹೆಚ್ಚಿಸಲಾಗಿದೆ ಎಂದು ತುಳು ಎಂ.ಎ. ವಿಭಾಗದ ಹಳೆ ವಿದ್ಯಾರ್ಥಿಗಳು ತುಳು ಅಕಾಡೆಮಿಗೆ ಮನವಿ ಸಲ್ಲಿಸಿ, ವಿಶ್ವವಿದ್ಯಾನಿಲಯದ ಜೊತೆಗೆ ಸಮಾಲೋಚನೆ ನಡೆಸುವಂತೆ ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತುಳು ಎಂ.ಎ.ಹಳೆ ವಿದ್ಯಾರ್ಥಿಗಳ ಜೊತೆಗೆ ಮಂಗಳೂರು ವಿ.ವಿ.ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಣಿ ಎಂ.ರೈ, ಶಿವರಾಮ ಶೆಟ್ಟಿ, ಭಾಗ್ಯಶ್ರೀ ಉಪಸ್ಥಿತರಿದ್ದರು. ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಿದ ಪ್ರೊ.ಪಿ.ಎಲ್.ಧರ್ಮ ಅವರು, ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಕಾಳಜಿ ಇದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಎಲ್ಲಾ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು ಎಂದು ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.