ADVERTISEMENT

ಮಂಗಳೂರು: ಕೊಡಿಯಾಲ್‌ಬೈಲ್‌ಗೆ ‘ಬ್ಲ್ಯಾಕ್ ಸ್ಪಾಟ್’ ಕಪ್ಪುಚುಕ್ಕೆ

ಅಕ್ರಮವಾಗಿ ಕಸ ಎಸೆದು ಹೋಗುವವರ ವಿರುದ್ಧ ಕ್ರಮಕ್ಕೆ ಸ್ಥಳೀಯರ ಒತ್ತಾಯ

ಸಂಧ್ಯಾ ಹೆಗಡೆ
Published 2 ಮೇ 2025, 5:23 IST
Last Updated 2 ಮೇ 2025, 5:23 IST
ಬಿಜೈ ಮುಖ್ಯ ರಸ್ತೆಗೆ ಸೇರುವ ಕಿರು ರಸ್ತೆಯ ಬದಿಯಲ್ಲಿ ಬ್ಯಾನರ್ ಕೆಳಗೆ ಬಿದ್ದಿರುವ ಕಸದ ಮೂಟೆಗಳು
ಬಿಜೈ ಮುಖ್ಯ ರಸ್ತೆಗೆ ಸೇರುವ ಕಿರು ರಸ್ತೆಯ ಬದಿಯಲ್ಲಿ ಬ್ಯಾನರ್ ಕೆಳಗೆ ಬಿದ್ದಿರುವ ಕಸದ ಮೂಟೆಗಳು   

ಮಂಗಳೂರು: ದೊಡ್ಡ ಅಪಾರ್ಟ್‌ಮೆಂಟ್‌ಗಳು, ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಸಂಸ್ಥೆ ಹೊಂದಿರುವ ಕೊಡಿಯಾಲ್‌ಬೈಲ್ ವಾರ್ಡ್‌, ಮಂಗಳೂರು ನಗರದ ಹೃದಯ ಭಾಗದಲ್ಲಿ ಇದೆ. ಉಕ್ಕಿ ಹರಿಯುವ ಒಳಚರಂಡಿ, ಅಲ್ಲಲ್ಲಿ ಇಣುಕುವ ಬ್ಲ್ಯಾಕ್ ಸ್ಪಾಟ್‌ಗಳು ವಾರ್ಡ್‌ಗೆ ಕಪ್ಪುಚುಕ್ಕೆಯಾಗಿವೆ.

ನಗರ ಬೆಳೆದಂತೆ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಜನವಸತಿಯ ಪ್ರಮಾಣವೂ ಹೆಚ್ಚಿದೆ. ವಾರ್ಡ್‌ನ ಸಾಕಷ್ಟು ಪಿಜಿಗಳು ಕಾರ್ಯನಿರ್ವಹಿಸುತ್ತಿವೆ. ಅಪಾರ್ಟ್‌ಮೆಂಟ್‌ಗಳ ತ್ಯಾಜ್ಯ ನೀರು ಹರಿದು ಹೋಗಲು ಯುಜಿಡಿಗೆ ಸಂಪರ್ಕ ಕಲ್ಪಿಸಲಾಗಿದ್ದರೂ, ಆಗಾಗ ಒಳಚರಂಡಿ ನೀರು ಉಕ್ಕಿ ಹರಿಯುತ್ತದೆ. ಮುಖ್ಯ ರಸ್ತೆಯಲ್ಲಿ ಪೈಪ್‌ ಬದಲಿಸಲಾಗಿದ್ದರೂ, ಕೆಲವು ಒಳರಸ್ತೆಗಳಲ್ಲಿ ಹಳೆಯ ಪೈಪ್‌ಲೈನ್‌ಗಳೇ ಉಳಿದಿವೆ ಎನ್ನುತ್ತಾರೆ ಸ್ಥಳೀಯರು.

ಭಾರತಿನಗರದ ಬಲಿಪತೋಟದ ರಾಜಕಾಲುವೆಗೆ ಕೆಲವು ಮನೆ, ಅಪಾರ್ಟ್‌ಮೆಂಟ್‌ಗಳ ಹೊಲಸು ನೀರು ಸೇರುತ್ತಿದ್ದು, ಸದಾ ದುರ್ವಾಸನೆ ಬೀರುತ್ತದೆ. ಅಲ್ಲದೆ, ಸುತ್ತಲಿನ ಚರಂಡಿಗಳಿಂದ ಕಾಲುವೆಗೆ ಸೇರುವ ಕಸ ನೀರಿನ ಹರಿವಿಗೆ ಅಡ್ಡಿಯಾಗಿದೆ. ಇದರಿಂದಾಗಿ, ತಗ್ಗು ಪ್ರದೇಶವಾಗಿರುವ ಭಾರತಿನಗರದಲ್ಲಿ ಧಾರಾಕಾರ ಮಳೆಯಾದರೆ, ಮನೆಗಳಿಗೆ ನೀರು ನುಗ್ಗುತ್ತದೆ. ಕಾಲುವೆ ಸಮೀಪ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನವಿದೆ. ಜೋರು ಮಳೆ ಬಂದರೆ, ದೈವಸ್ಥಾನಕ್ಕೆ ಕಲುಷಿತ ನೀರು ಆವರಿಸಿಕೊಳ್ಳುತ್ತದೆ ಎನ್ನುತ್ತಾರೆ ನಿವಾಸಿಗಳು.

ADVERTISEMENT

ಬ್ಯಾನರ್ ಕೆಳಗೇ ಕಸದ ಮೂಟೆ: ಕರಂಗಲ್ಪಾಡಿ, ಕೊಡಿಯಾಲ್‌ ಗುತ್ತು ಕಡೆಯಿಂದ ಬಂದು ಬಿಜೈ ಮುಖ್ಯ ರಸ್ತೆಗೆ ಸೇರುವ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ‘ಸದರಿ ಪ್ರದೇಶದಲ್ಲಿ ಕಸ ಹಾಕಬೇಡಿ’ ಕಸ ಹಾಕುವವರ ವಿರುದ್ಧ ಪಾಲಿಕೆಗೆ ದೂರು ಸಲ್ಲಿಸಿ ಎಂದು ಮೊಬೈಲ್ ಫೋನ್ ನಂಬರ್ ಸಹಿತ ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್ ಕೆಳಗೆ ನಿತ್ಯವೂ ಕಸದ ರಾಶಿ ಬಿದ್ದಿರುತ್ತದೆ.

‘ದೊಡ್ಡ ಕಾರಿನಲ್ಲಿ ಹೋಗುವವರೂ ಕಸ ತಂದು ಎಸೆದು ಹೋಗುತ್ತಾರೆ. ಹಲವಾರು ಪಿಜಿಗಳಲ್ಲಿರುವ ವಿದ್ಯಾರ್ಥಿಗಳು, ಸ್ಥಳೀಯರು ಕೆಲವರು ಈ ಸ್ಥಳದಲ್ಲಿ ಅಕ್ರಮವಾಗಿ ಕಸ ಎಸೆಯುತ್ತಾರೆ. ಕಸ ಸಂಗ್ರಹಕ್ಕೆ ಪಾಲಿಕೆ ವಾಹನ ನಿತ್ಯ ಬಂದರೂ ಅದಕ್ಕೆ ಕಸ ನೀಡದವರನ್ನು ಗುರುತಿಸಿ, ಕ್ರಮ ಕೈಗೊಳ್ಳಬೇಕು. ಇದನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂಬುದು ಸ್ಥಳೀಯ ಆಗ್ರಹ.

ರಾಮಕೃಷ್ಣ ಮಠದ ಸಹಕಾರದಲ್ಲಿ ಸಂಸ್ಥೆಗಳ ಸಿಎಸ್‌ಆರ್ ಅನುದಾನ, ಸಾರ್ವಜನಿಕರ ನೆರವಿನೊಂದಿಗೆ ಪಾಲಿಕೆ ಆರ್ಥಿಕ ಸಹಾಯವಿಲ್ಲದೆ ವಾರ್ಡ್‌ನಲ್ಲಿ ಸಣ್ಣ ಪಾರ್ಕ್‌ಗಳನ್ನು ನಿರ್ಮಿಸಲಾಗಿತ್ತು. ಇವು ಈಗ ನಿರ್ವಹಣೆ ಇಲ್ಲದೆ ಸೊರಗಿವೆ. ವಿವೇಕಾನಂದ ಪಾರ್ಕ್‌ಗೆ ಬಣ್ಣ ಬಳಿಯಲು ಅನುದಾನದ ಬಿಲ್ ಆಗಿದ್ದರೂ, ಕೆಲಸ ನಡೆದಿಲ್ಲ. ಚರಂಡಿ ಕಾಮಗಾರಿ ಶೇ 60ರಷ್ಟು ಬಾಕಿ ಇದೆ ಎನ್ನುತ್ತಾರೆ ಪಾಲಿಕೆಯ ಮಾಜಿ ಸದಸ್ಯ ಪ್ರಕಾಶ್ ಸಾಲ್ಯಾನ್.

ತೋಡು ಮಾಡುವಾಗ ರಂಧ್ರ ಮುಚ್ಚಿರುವ ಕಾರಣ ಮಳೆಗಾಲದಲ್ಲಿ ನೀರು ತೋಡಿಗೆ ಸೇರದೆ ರಸ್ತೆಯ ಮೇಲೆ ನೀರು ಹರಿಯುತ್ತದೆ. ಈ ಸಮಸ್ಯೆ ಪರಿಹರಿಸಬೇಕು.
ನಿರ್ಮಲಾ ನೇಮಿರಾಜ್ ಸ್ಥಳೀಯ ನಿವಾಸಿ

ವಾರ್ಡ್‌ ವಿಹಾರ

ವಾರ್ಡ್‌: ಕೊಡಿಯಾಲ್‌ಬೈಲ್ (30) ಜನಸಂಖ್ಯೆ:7346  (2011ರ ಜನಗಣತಿ ಪ್ರಕಾರ) ಪುರುಷರು:3563 ಮಹಿಳೆಯರು:3783 ಪಾಲಿಕೆಯ ನಿಕಟ ಪೂರ್ವ ಸದಸ್ಯರು: ಸುಧೀರ್ ಶೆಟ್ಟಿ ಕಣ್ಣೂರು ವಾರ್ಡ್‌ ವಿಶೇಷ ಕೊಡಿಯಾಲ್‌ಬೈಲ್ ವಾರ್ಡ್‌ ವ್ಯಾಪ್ತಿಯಲ್ಲಿ ಬಿಜೈ ಚರ್ಚ್ ಸೇರಿಕೊಂಡಿದೆ. ಲೂರ್ಡ್ಸ್‌ ಸ್ಕೂಲ್ ಕೆನರಾ ಕಾಲೇಜು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಇದೇ ವಾರ್ಡ್‌ನಲ್ಲಿವೆ. ಎರಡು ಪುಟ್ಟ ಪಾರ್ಕ್‌ಗಳು ವಾರ್ಡ್‌ನ ಜನರಿಗೆ ಹಸಿರಿನ ಖುಷಿ ನೀಡುತ್ತವೆ.

ಬೇಡಿಕೆಗಳು ಪಾದಚಾರಿ ಮಾರ್ಗ ನಿರ್ಮಾಣ ಆಗಬೇಕು ಕಾಲುವೆ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಬ್ಲ್ಯಾಕ್‌ ಸ್ಪಾಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು

‘ಯುಜಿಡಿ ಸಮಸ್ಯೆಗೆ ಪರಿಹಾರ’

6ನೇ ಕ್ರಾಸ್‌ನಲ್ಲಿರುವ ವೆಟ್‌ವೆಲ್‌ಗೆ ಕೊಳಚೆನೀರು ಸಮರ್ಪಕವಾಗಿ ಹೋಗದ ಪರಿಣಾಮ ಕೊಡಿಯಾಲ್‌ಗುತ್ತು ಭಾಗದ ತೋಡಿನಲ್ಲಿ ಹರಿಯುತ್ತಿತ್ತು. ಅಮೃತ್ ಯೋಜನೆಯಡಿ ಕೊಡಿಯಾಲ್‌ ಬೈಲ್ ವಾರ್ಡ್ ಮತ್ತು ಈ ಮೂಲಕ ಹಾದುಹೋಗುವ ಅಕ್ಕಪಕ್ಕದ ವಾರ್ಡ್‌ಗಳನ್ನೂ ಸೇರಿಸಿಕೊಂಡು ಎಲ್ಲ ಕಡೆ ಹೊಸ ಪೈಪ್‌ಲೈನ್ ಹಾಕಿ ಸಮಸ್ಯೆ ನಿವಾರಿಸಲಾಗಿದೆ. ಚಂದ್ರಿಕಾ ಬಡಾವಣೆಯ ನಾಗನಕಟ್ಟೆ ಸಮೀಪದ ಸಮಸ್ಯೆಗೂ ಪರಿಹಾರ ದೊರೆತಿದೆ. ಪಾಲೇಮಾರ್ ಮನೆ ಸಮೀಪ ಒಂದು ತುಂಡು ಭಾಗ ಮಾತ್ರ ಜಾಗದ ಕೊರತೆಯಿಂದ ಉಳಿಕೆಯಾಗಿದೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯ ಸುಧೀರ್ ಶೆಟ್ಟಿ ಹೇಳಿದರು.  ಮೇಯರ್ ಆಗಿದ್ದ ಸಂದರ್ಭದಲ್ಲಿ ಬಲಿಪತೋಟದ ಕಾಲುವೆ ಸಮಸ್ಯೆಗೆ ಸಂಬಂಧಿಸಿ ₹12 ಕೋಟಿ ಅನುದಾನ ಇಟ್ಟಿದ್ದು ಇಬ್ಬರಿಗೆ ಟೆಂಡರ್ ಆಗಿದೆ. ಕಾಮಗಾರಿ ಪೂರ್ಣಗೊಂಡರೆ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ವೆಟ್‌ವೆಲ್‌ನ ಪಂಪ್ ಹಳೆಯದಾಗಿದ್ದು ಅದನ್ನು ಬದಲಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ₹14 ಕೋಟಿ ಮೀಸಲಿಡಲಾಗಿದೆ. ಪಂಪ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಯುಜಿಡಿ ಪೈಪ್‌ ಬದಲಾಯಿಸುವಾಗ ರಸ್ತೆ ಅಗೆಯಬೇಕಾದ ಸಂದರ್ಭ ಬಂತು. ಆದರೆ ಈಗ ಎಲ್ಲವೂ ಸರಿಯಾಗಿವೆ. ಎಲ್ಲ ರಸ್ತೆಗಳೂ ಡಾಂಬರ್ ಕಾಂಕ್ರಿಟೀಕರಣಗೊಂಡಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.