ADVERTISEMENT

‘ತೆರಿಗೆ ಸಂಗ್ರಹ ಚುರುಕುಗೊಳಿಸಲು ಕ್ರಮ’

ನಗರದ ಆಸ್ತಿ ಮರು ಮೌಲ್ಯಮಾಪನ ನಡೆಸಲು ಮಹಾನಗರ ಪಾಲಿಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 15:22 IST
Last Updated 29 ಜನವರಿ 2021, 15:22 IST
ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು
ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು   

ಮಂಗಳೂರು: ಸ್ವಯಂಘೋಷಿತ ಆಸ್ತಿ ತೆರಿಗೆ ಯೋಜನೆಯಡಿ ತೆರಿಗೆ ಸಂಗ್ರಹವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಾಗಿರುವ ಮಹಾನಗರ ಪಾಲಿಕೆ, ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮರು ಸರ್ವೆ ನಡೆಸಲು ನಿರ್ಧರಿಸಿದೆ.

ಶುಕ್ರವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಯುಕ್ತ ಅಕ್ಷಯ್ ಶ್ರೀಧರ್ ಈ ವಿಷಯ ತಿಳಿಸಿದರು. ‘ಪಾಲಿಕೆಯ ಪ್ರಮುಖ ಆದಾಯ ಮೂಲಗಳಲ್ಲಿ ಆಸ್ತಿ ತೆರಿಗೆಯೂ ಒಂದು. ಈವರೆಗೆ ₹ 56 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ’ ಎಂದರು.

ತಂತ್ರಜ್ಞಾನ ಬಳಸಿಕೊಂಡು ಆಸ್ತಿಗಳ ಮರು ಮೌಲ್ಯಮಾಪನ ನಡೆಸಲಾಗುತ್ತದೆ. ಪ್ರತಿ ಮನೆಗೆ ಪಾಲಿಕೆ ಪ್ರತಿನಿಧಿಗಳು ಭೇಟಿ ನೀಡಿ, ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಸುವರು. ಆಸ್ತಿಯ ಮಾಲೀಕರ ವಿವರ ಹಾಗೂ ಆಸ್ತಿಯ ಚಿತ್ರ ಸಂಗ್ರಹಿಸಲಿದ್ದಾರೆ. ಸ್ವಯಘೋಷಿತ ಆಸ್ತಿ ತೆರಿಗೆ ಯೋಜನೆಯಡಿ ಕೆಲ ಆಸ್ತಿಗಳ ಮಾಲೀಕರು ಮೌಲ್ಯಮಾಪನವನ್ನು ಸರಿಯಾಗಿ ಮಾಡುತ್ತಿಲ್ಲ. ಇದರಿಂದ ಪಾಲಿಕೆಯ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಸರ್ವೆ ಮುಗಿದ ತಕ್ಷಣ, ಘೋಷಿಸದ ಆಸ್ತಿಗಳ ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಆಸ್ತಿಗಳನ್ನು ಮನೆ, ಅಂಗಡಿ, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌ಗಳು, ಕೈಗಾರಿಕಾ ಘಟಕಗಳು, ಮಾಲ್‌ಗಳು, ಸಾರ್ವಜನಿಕ ಆಸ್ತಿ, ಛತ್ರಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಆಸ್ತಿ ಮಾಲೀಕರ ವಿವರದ ಜೊತೆಗೆ ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ, ವಿದ್ಯುತ್‌ ಮೀಟರ್ ಸಂಖ್ಯೆ, ನಳ ಸಂಪರ್ಕ, ಮನೆಯ ಮಹಡಿಗಳ ವಿವರ ಸಂಗ್ರಹಿಸಲಾಗುತ್ತದೆ. ಪ್ರಾಯೋಗಿಕವಾಗಿ ಒಂದು ವಾರ್ಡ್‌ನಲ್ಲಿ ಸಮೀಕ್ಷೆ ನಡೆಸಿ, ನಂತರ ಉಳಿದ ವಾರ್ಡ್‌ಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ವಿವರಿಸಿದರು.

ನಗರಕ್ಕೆ ನಿರಂತರ ನೀರು ಪೂರೈಕೆ ಮಾಡುವ ಜಲಸಿರಿ ಯೋಜನೆಯಡಿ ಪೈಪ್‌ಲೈನ್‌ ಅಳವಡಿಕೆಗಾಗಿ ಹಲವೆಡೆ ರಸ್ತೆಗಳನ್ನು ಅಗೆದು, ಹಾಗೆಯೇ ಬಿಡಲಾಗಿದೆ. ಇದರಿಂದ ಇಂಟರ್‌ಲಾಕ್ ಹಾಳಾಗಿದೆ. ಅಗೆದ ರಸ್ತೆ ದುರಸ್ತಿಗೊಳಿಸಿಲ್ಲ ಎಂದು ಪಾಲಿಕೆ ಸದಸ್ಯ ಶಂಶುದ್ದೀನ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್‌ ಶೆಟ್ಟಿ ಆಕ್ಷೇಪಿಸಿದರು.

‘ಕೂಡಲೇ ಜಲಸಿರಿ ಯೋಜನೆಯ ಕಾಮಗಾರಿಗಳಲ್ಲಿರುವ ತೊಂದರೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್ ದಿವಾಕರ ಪಾಂಡೇಶ್ವರ, ಎಂಜಿನಿಯರ್‌ಗಳಿಗೆ ಸೂಚಿಸಿದರು. ನದಿಗೆ ಕೈಗಾರಿಕಾ ತ್ಯಾಜ್ಯ ಬಿಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ, ಮಾಲಿನ್ಯ ನಿಯಂತ್ರಣ ಮಂಡಲಿಗೆ ವರದಿ ಸಲ್ಲಿಸಬೇಕು ಎಂದು ಮೇಯರ್ ಸೂಚಿಸಿದರು. ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು.

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧಾರ
ನಗರದ ಲೇಡಿಹಿಲ್ ಸರ್ಕಲ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಇಡುವ ಪ್ರಸ್ತಾವಕ್ಕೆ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ‘ಬ್ರಹ್ಮಶ್ರೀ ನಾರಾಯಣಗುರು’ ನಾಮಕರಣಕ್ಕೆ ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದವು. ಅವುಗಳನ್ನು ನಗರ ಯೋಜನಾ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ಸಮಿತಿಯು ಪ್ರಸ್ತಾವವನ್ನು ಪಾಲಿಕೆ ಸಾಮಾನ್ಯ ಸಭೆಗೆ ಮಂಡಿಸಿತ್ತು.

ಇದುವರೆಗೆ ಲೇಡಿಹಿಲ್ ಸರ್ಕಲ್‌ಗೆ ಅಧಿಕೃತವಾಗಿ ಯಾವುದೇ ಹೆಸರನ್ನು ಇಡಲಾಗಿಲ್ಲ. 2003ರಲ್ಲಿ ಈ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಹೆಸರಿಡಲು ಆಗಿನ ಮೇಯರ್‌ ಅನುಮೋದನೆ ನೀಡಿದ್ದರು. ಆದರೆ, ಅದನ್ನು ಪಾಲಿಕೆಯ ಸಾಮಾನ್ಯ ಸಭೆ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.