ADVERTISEMENT

ಪಾಲಿಕೆ ಕಚೇರಿಗಳು ಬಂದ್‌– ಕಸ ವಿಲೇ ಸ್ಥಗಿತ

7ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ನೌಕರರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:59 IST
Last Updated 11 ಜುಲೈ 2025, 4:59 IST
ಮಂಗಳೂರು ಮಹಾನಗರ ಪಾಲಿಕೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾಲ್‌ಭಾಗ್‌ನ ಪಾಲಿಕೆ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು :ಪ್ರಜಾವಾಣಿ ಚಿತ್ರ
ಮಂಗಳೂರು ಮಹಾನಗರ ಪಾಲಿಕೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾಲ್‌ಭಾಗ್‌ನ ಪಾಲಿಕೆ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು :ಪ್ರಜಾವಾಣಿ ಚಿತ್ರ   

ಮಂಗಳೂರು: ಪಾಲಿಕೆ ಕೇಂದ್ರ ಕಚೇರಿ, ಸುರತ್ಕಲ್‌, ಕದ್ರಿ ವಲಯ ಕಚೇರಿಗಳು, ವಾರ್ಡ್‌ ಕಚೇರಿಗಳು ಗುರುವಾರ ಕಾರ್ಯಾಚರಿಸಲಿಲ್ಲ. ನಗರದೆಲ್ಲೆಡೆ ಕಸ ವಿಲೇವಾರಿ ಸಂಪೂರ್ಣ ಸ್ಥಗಿತಗೊಂಡಿತು.

ಸರ್ಕಾರಿ ನೌಕರರಿಗೆ ನೀಡಲಾಗಿರುವ 7ನೇ ವೇತನ ಆಯೋಗದ ಶಿಫಾರಸುಗಳನ್ನು ತಮಗೂ ಅನ್ವಯಿಸಬೇಕು ಎಂದು ಒತ್ತಾಯಿಸಿ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಪಾಲಿಕೆ ಕೇಂದ್ರ ಕಚೇರಿಗೆ ಕೆಲ ಕಾಲ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಹಾಗೂ ಬುಧವಾರ ಕೈಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದ ಪಾಲಿಕೆ ಸಿಬ್ಬಂದಿ ಗುರುವಾರ  ಸಾಮೂಹಿಕವಾಗಿ ರಜೆ ಹಾಕಿದರು. ಹಾಗಾಗಿ ಪಾಲಿಕೆಯ ಕೆಲಸ ಕಾರ್ಯಗಳು ಸ್ಥಗಿತಗೊಂಡವು. ಎಲ್ಲ ಕಾಯಂ ಸಿಬ್ಬಂದಿಯೂ ಕೆಲಸಕ್ಕೆ ಗೈರಾಗಿ ಧರಣಿ ನಡೆಸಿದ್ದರಿಂದ ಪಾಲಿಕೆ ಕೇಂದ್ರ ಕಚೇರಿಯ ವಿವಿಧ ವಿಭಾಗಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.  

ADVERTISEMENT

ಕಾಯಂ ನೌಕರರ ಪ್ರತಿಭಟನೆಯಿಂದಾಗಿ, ಹೊರಗುತ್ತಿಗೆ ಆಧಾರದ ನೌಕರರೂ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಕರ್ತವ್ಯ ನಿರ್ವಹಿಸಲು ಕೆಲ ನೌಕರರು ಮುಂದಾದರೂ ಅದಕ್ಕೆ ಪ್ರತಿಭಟನಕಾರರು ಅವಕಾಶ ನೀಡಲಿಲ್ಲ. ಪ್ರತಿಭಟನೆ ನಿರತ ಸಿಬ್ಬಂದಿ ಪಾಲಿಕೆ ಕೇಂದ್ರ ಕಚೇರಿ ಬಾಗಿಲಲ್ಲೇ ಕುಳಿತು ಘೋಷಣೆ ಕೂಗಿದರು. ಕೆಲಸದ ಸಲುವಾಗಿ ಪಾಲಿಕೆ ಕಚೇರಿಗೆ ಬಂದ ಸಾರ್ವಜನಿಕರು ಬರಿಗೈಯಲ್ಲಿ ಮರಳಬೇಕಾಯಿತು.

ಕಸ ವಿಲೇವಾರಿ ಸ್ಥಗಿತ: ಪಾಲಿಕೆ ನೌಕರರ ಹೋರಾಟಕ್ಕೆ ಪೌರಕಾರ್ಮಿಕರೂ ಬೆಂಬಲ ಸೂಚಿಸಿ ಕರ್ತವ್ಯ ನಿರ್ವಹಣೆ ಸ್ಥಗಿತಗೊಳಿಸಿದರು. ಹಾಗಾಗಿ ನಗರದಲ್ಲಿ ಕಸ ವಿಲೇವಾರಿ ನಡೆಯಲಿಲ್ಲ. ಕೆಲವು  ವಸತಿ ಪ್ರದೇಶಗಳಲ್ಲಿ ಕಸದ ಚೀಲಗಳು ಹಾಗೆಯೇ ಬಿದ್ದಿದ್ದವು.

‘ನಮ್ಮ ಪ್ರತಿಭಟನೆ ಅನಿರ್ದಿಷ್ಟಾವಧಿವರೆಗೆ ಮುಂದುವರಿಯಲಿದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪಿದ ಬಳಿಕವಷ್ಟೇ ಕರ್ತವ್ಯಕ್ಕೆ ಮರಳುತ್ತೇವೆ. ಸಂಘದ ರಾಜ್ಯ ಮಟ್ಟದ ಮುಖಂಡರ ಸೂಚನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಸ್‌.ಕೆ.  ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುರುವಾರ ನಗರದಲ್ಲಿ ಎಲ್ಲೂ ಕಸ ವಿಲೇವಾರಿ ಆಗಿಲ್ಲ. ಪಾಲಿಕೆ ಕಚೇರಿಗಳೂ ಕಾರ್ಯ ನಿರ್ವಹಿಸಿಲ್ಲ. ನಮ್ಮ ಹೋರಾಟದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೇವೆ. ಸಾರ್ವಜನಿಕರಿಗೆ ಅನನೂಕೂಲವಾಗಿದ್ದರೆ, ಅದಕ್ಕೆ ಸರ್ಕಾರವೇ ಹೊಣೆ’ ಎಂದು ಅವರು ತಿಳಿಸಿದರು.

ಸಂಘಟನೆಯ ಅಧ್ಯಕ್ಷ ಬಾಲು, ಉಪಾಧ್ಯಕ್ಷ ದೇವೇಂದ್ರಪ್ಪ ಪರಾರಿ,  ಕಾರ್ಯದರ್ಶಿಗಳಾದ ಜಗದೀಶ ಪಿ. ಶ್ರೀನಿವಾಸ ಗಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

- ‘ಕಸ ನಿರ್ವಹಣೆಗೆ ಹೊರಗುತ್ತಿಗೆ ಕಾರ್ಮಿಕರ ಬಳಕೆ

’ ‘ಪಾಲಿಕೆ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪೌರಕಾರ್ಮಿಕರು ಕೆಲಸಕ್ಕೆ ಗೈರಾದ ಕಾರಣ ನಗರದಲ್ಲಿ ಕಸ ವಿಲೇವಾರಿ ವ್ಯತ್ಯಯವಾಗಿದೆ. ಶುಕ್ರವಾರ ಎಲ್ಲ ಹೊರಗುತ್ತಿಗೆ ಪೌರ ಕಾರ್ಮಿಕರು ಕಸ ವಿಲೇವಾರಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದೇವೆ. ಇದಕ್ಕೆ ಅವರೂ ಒಪ್ಪಿದ್ದಾರೆ.  ಕಸ ವಿಲೇವಾರಿ ಎಂದಿನಂತೆಯೇ ನಡೆಯಲಿದೆ’ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕುಡಿಯುವ ನೀರು ಪೂರೈ ಹಾಗೂ ಒಳಚರಂಡಿ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ವಹಣೆಗೆ ಯಾವುದೇ ಸಮಸ್ಯೆ ಆಗಿಲ್ಲ. ಈ ಅಗತ್ಯ ಸೇವೆಗಳನ್ನು ನಿರ್ವಹಿಸುವ ಸಿಬ್ಬಂದಿ ಕರ್ತವ್ಯ ಮುಂದುವರಿಸಿದ್ದಾರೆ’ ಎಂದರು. ‘ಕೆಲವು ನೌಕರರು ಕರ್ತವ್ಯ ನಿರ್ವಹಿಸಲು ಸಿದ್ಧರಿದ್ದರೂ ಪ್ರತಿಭಟನಾ ಕಾರರು ಅದಕ್ಕೆ ಅವಕಾಶ ನೀಡಿಲ್ಲ’ ಎಂದರು. 

ಪಾಲಿಕೆ ನೌಕರರ ಬೇಡಿಕೆಗಳು

ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಕರಡು ಅಧಿಸೂಚನೆ ಪ್ರಕಟಿಸಬೇಕು ಕೆಜಿಐಡಿ ಮತ್ತು ಜಿಪಿಎಫ್ ಸೌಲಭ್ಯ ಪಾಲಿಕೆ ನೌಕರರಿಗೂ ಸಿಗಬೇಕು ಜ್ಯೋತಿ/ಆರೋಗ್ಯ ಸಂಜೀವಿನಿ ಯೋಜನೆ ಪಾಲಿಕೆ ಸಿಬ್ಬಂದಿಗೂ ಅನ್ವಯವಾಗಬೇಕು ಪ್ರತಿ ವರ್ಷ ಕ್ರೀಡಾ ಕಾರ್ಯಕ್ರಮ ಆಯೋಜಿಸಬೇಕು ವಿವಿಧ ವೃಂದಗಳ ಹುದ್ದೆಗಳಿಗೆ ವೃಂದವಾರು ಬಡ್ತಿ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.