
ಮಂಗಳೂರು: ‘ವಿಮಾನ ನಿಲ್ದಾಣದಲ್ಲಿ ಅಲ್ಲಲ್ಲಿ ಮತ್ತು ವಿಮಾನದ ಒಳಗಡೆ ಸ್ಫೋಟಕಗಳನ್ನು ಇರಿಸಲಾಗಿದೆ. ಅವುಗಳನ್ನು ಸ್ಫೋಟಿಸಿ ಜೀವ ಹಾನಿ ಮಾಡುತ್ತೇವೆ’ ಎಂಬುದಾಗಿ ಬಜಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇ–ಮೇಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಸಂದೇಶ ಕಳುಹಿಸಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಏಪ್ರಿಲ್ 29ರಂದು ಬೆಳಿಗ್ಗೆ 9.37ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇ–ಮೇಲ್‌ಗೆ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಭದ್ರತಾ ಅಧಿಕಾರಿ ಮೋನಿಶಾ ಕೆ.ಜಿ. ಅವರು ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 507ರನ್ವಯ (ಬೆದರಿಕೆ ಸಂದೇಶ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಇಲ್ಲಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
‘ಈ ಕುರಿತು ತನಿಖೆ ನಡೆಸಿದಾಗ ಅಪರಿಚಿತ ವ್ಯಕ್ತಿಯು ಮಂಗಳೂರು ವಿಮಾನ ನಿಲ್ದಾಣದ ಜೊತೆಗೆ ದೇಶದ ಸುಮಾರು 25ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಕಂಡುಬಂದಿದೆ. ಆರೋಪಿಯನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ಅಪರಿಚಿತ ವ್ಯಕ್ತಿಯು ವಿಮಾನ ನಿಲ್ದಾಣಗಳ ಇ–ಮೇಲ್‌ಗಳು ಹಾಗೂ ವಿಮಾನನಿಲ್ದಾಣಗಳ ಭದ್ರತಾ ಏಜೆನ್ಸಿಯಾಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಸಂಬಂಧಿಸಿದ ಇ–ಮೇಲ್‌ಗಳೂ ಸೇರಿ 90ಕ್ಕೂ ಹೆಚ್ಚು ಇ–ಮೇಲ್ ವಿಳಾಸಗಳಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ’ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
‘ವಿಮಾನ ನಿಲ್ದಾಣದಲ್ಲಿ ಅಲ್ಲಲ್ಲಿ ಯಾರಿಗೂ ಕಾಣಿಸದಂತೆ ಬಾಂಬ್‌ಗಳನ್ನು ಇರಿಸಿದ್ದೇನೆ. ಕೆಲ ವಿಮಾನಗಳಲ್ಲಿ ಮೂರು ಕಡೆ ಸ್ಫೋಟಕಗಳನ್ನು ಇಟ್ಟಿದ್ದೇನೆ. ಕೆಲವೇ ಗಂಟೆಗಳಲ್ಲಿ ಅವುಗಳನ್ನು ಸ್ಫೋಟಿಸಲಿದ್ದೇನೆ. ಎಲ್ಲೆಡೆ ರಕ್ತಪಾತವಾಗುವಂತೆ ಖಂಡಿತ ಮಾಡುತ್ತೇನೆ. ಎಷ್ಟು ಸಾಧ್ಯವೋ ಅಷ್ಟು ಜನರ ಪ್ರಾಣ ತೆಗೆಯುತ್ತೇನೆ. ‘ಟೆರರೈಸರ್ಸ್111’ ಬಳಗವು ಈ ಮಾರಣಹೋಮದ ಹಿಂದೆ ಇದೆ’ ಎಂಬ ಒಕ್ಕಣೆ ಇ– ಮೇಲ್‌ನಲ್ಲಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.