ADVERTISEMENT

ಧರ್ಮಸ್ಥಳ | ಸಾಕ್ಷ್ಯ ರಕ್ಷಣೆ ಒದಗಿಸಲು ಸಾಕ್ಷಿದಾರ ಅಲಭ್ಯ: ಪೊಲೀಸ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 0:30 IST
Last Updated 17 ಜುಲೈ 2025, 0:30 IST
<div class="paragraphs"><p>ಪೊಲೀಸ್ – ಪ್ರಾತಿನಿಧಿಕ ಚಿತ್ರ</p></div>

ಪೊಲೀಸ್ – ಪ್ರಾತಿನಿಧಿಕ ಚಿತ್ರ

   

ಮಂಗಳೂರು: ‘ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ವಿಲೇವಾರಿ ಮಾಡಿರುವ ಕುರಿತು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ದೂರಿನ (ಸಂಖ್ಯೆ 39/2025 ) ಸಾಕ್ಷಿದಾರ ವ್ಯಕ್ತಿಯ ಇರುವಿಕೆ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

‘ಹಾಗಾಗಿ ಅಂತಹ ಸಾಕ್ಷಿದಾರನಿಗೆ ಸಾಕ್ಷ್ಯ ರಕ್ಷಣೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸಕ್ಷಮ ಪ್ರಾಧಿಕಾರಕಕ್ಕೆ ವರದಿ ಸಲ್ಲಿಸಲಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

‘ಸಾಕ್ಷಿದಾರರ ರಕ್ಷಣೆಗೆ ಸಂಬಂಧಿಸಿದ ನಿಯಮ 7ರ ಅಡಿಯಲ್ಲಿ ಸಾಕ್ಷಿದಾರನ ಒಪ್ಪಿಗೆ ಮತ್ತು ಸಹಕಾರವಿದ್ದಲ್ಲಿ ಮಾತ್ರ ತೆಗೆದುಕೊಳ್ಳಬಹುದಾದ ಹಲವು ಕ್ರಮಗಳಿವೆ. ಈ ಬಗ್ಗೆ ಜುಲೈ 10ರಂದು ಸಾಕ್ಷಿದಾರನ ಪರವಾದ ವಕೀಲರಿಗೆ ಇಮೇಲ್ ಮೂಲಕ ತಿಳಿಸಲಾಗಿದೆ. ಆದರೆ ಈವರೆಗೆ ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ಪೊಲೀಸರೊಂದಿಗೆ ಹಂಚಿಕೊಂಡಿಲ್ಲ. ಪ್ರಕರಣದ ಬಗ್ಗೆ ವಕೀಲರೊಂದಿಗೆ ಎಲ್ಲಾ ಸಂವಹನಗಳು ಇಮೇಲ್ ಮೂಲಕ ಮಾತ್ರ ನಡೆಯುತ್ತಿವೆ. ಸಾಕ್ಷಿದಾರನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲದಿದ್ದಾಗ, ಅಂತಹ ಸಾಕ್ಷಿದಾರನಿಗೆ ಸಾಕ್ಷಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಡಿವೈಎಸ್‌ಪಿಯವರು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುತ್ತಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಪ್ರಕರಣದ ತನಿಖೆಯ ಮುಂದಿನ ಹಂತಗಳಲ್ಲೂ ಸಾಕ್ಷಿದಾರನು ಲಭ್ಯವಿಲ್ಲದಿದ್ದರೆ,  ಅವರ ಬಗ್ಗೆ ಪರಿಶೀಲಿಸಲು ಪೊಲೀಸರಿಗೆ ಯಾವುದೇ ಮಾಹಿತಿಗಳು ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಸಾಕ್ಷಿಯ ಗುರುತು ರಕ್ಷಣೆಗಾಗಿ ಮನವಿ ಸಲ್ಲಿಕೆಯಾದ ಸಂದರ್ಭದಲ್ಲಿ, ಸಾಕ್ಷಿದಾರ ವ್ಯಕ್ತಿಯ ಪರವಾದ ವಕೀಲರು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನ ನಡೆಸುವಾಗ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಈ ಬಗ್ಗೆ ವಕೀಲರನ್ನು ವಿಚಾರಣೆ ನಡೆಸಲಾಗಿದೆ. ಸಾಕ್ಷಿ ದೂರುದಾರರ ಕೋರಿಕೆಯ ಮೇರೆಗೆ ಈ ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ವಕೀಲರು ಉತ್ತರ ಕಳುಹಿಸಿದ್ದಾರೆ. ಆದರೆ, ಈ ಪತ್ರಿಕಾ ಪ್ರಕಟಣೆ ಹಾಗೂ ಇತರ ಸಂವಹನಗಳ ಮೂಲಕ ನೀಡಿರುವ ಮಾಹಿತಿಗಳಿಂದಾಗಿ ಸಾಕ್ಷಿ ಗುರುತಿನ ರಕ್ಷಣೆ ಸಾಧ್ಯವಾಗಿಲ್ಲ. ಈ ಅರ್ಜಿಯ ಹೆಚ್ಚಿನ ವಿಚಾರಣೆಯು ಬಾಕಿ ಇದೆ’ ಎಂದು ಅವರು ತಿಳಿಸಿದ್ದಾರೆ.

‘ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ, ಈ ಅಪರಾದ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಈ ಬಗ್ಗೆ ಪಾಪಪ್ರಜ್ಞೆ ಕಾಡುತ್ತಿದೆ.  ನನಗೆ ಹಾಗೂ ನನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ನಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದವಿದ್ದೇನೆ’ ಎಂದು ದೂರುದಾರ ವ್ಯಕ್ತಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ 3ರಂದು ದೂರು ನೀಡಿದ್ದರು. ಈ ಬಗ್ಗೆ ಜುಲೈ 4ರಂದು ಪ್ರಕರಣ ದಾಖಲಾಗಿತ್ತು. 

ಜುಲೈ 11ರಂದು ಮುಸುಕುಹಾಕಿಕೊಂಡಿದ್ದ ಸಾಕ್ಷಿ ದೂರುದಾರ ಬಿಗಿ ಪೊಲೀಸ್‌ ಭದ್ರತೆಯಲ್ಲಿ ವಕೀಲರೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ‘ಬೆಳ್ತಂಗಡಿ ನ್ಯಾಯಾಲಯ ದೂರುದಾರರ ದೂರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 183ರ ಅಡಿಯಲ್ಲಿ ದಾಖಲಿಸಿಕೊಂಡಿದೆ. ದೂರುದಾರರಿಗೆ ಸಾಕ್ಷಿ ರಕ್ಷಣಾ ಯೋಜನೆ 2018ರ ಅಡಿಯಲ್ಲಿ ಪೊಲೀಸರು ನಮಗೆ ರಕ್ಷಣೆ ಒದಗಿಸಿದ್ದರು ಎಂದು ದೂರುದಾಕ್ಷಿದಾರರ ಪರ ವಕೀಲರು ತಿಳಿಸಿದ್ದರು.

ಅನನ್ಯ ಭಟ್ ತಾಯಿಯಿಂದ ದೂರು

‘ಅನನ್ಯ ಭಟ್‌ ಎಂಬ ಹೆಸರಿನ ವೈದ್ಯಕೀಯ ವಿದ್ಯಾರ್ಥಿನಿಯು 2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಈ ಯುವತಿಯ ತಾಯಿ ದೂರು ಅರ್ಜಿ ನೀಡಿದ್ದಾರೆ. ಅದರ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಸುಜಾತ ಭಟ್‌ ಅವರು ಮಂಗಳವಾರ ಸಂಜೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು. 

ದೂರು ಸಲ್ಲಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಸುಜಾತ ಭಟ್‌, ‘ನನ್ನ ಪುತ್ರಿ ಮಣಿಪಾಲದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಳು. ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಬಂದಾಗ ಅಲ್ಲಿಂದ ಅವಳು ನಾಪತ್ತೆಯಾಗಿದ್ದಾಳೆ. ನಾನು ಕೋಲ್ಕತ್ತದಲ್ಲಿ ಸಿಬಿಐ ಕಚೇರಿಯಲ್ಲಿ ಸ್ಟೆನೋ ಆಗಿದ್ದೆ. ಅಲ್ಲಿಂದ ನಾನು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದರೆ ಅವರು ಸ್ವೀಕರಿಸಲಿಲ್ಲ. ನಂತರ ನಾನು ಧರ್ಮಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಅವಾಚ್ಯವಾಗಿ ನನ್ನನ್ನು ನಿಂದಿಸಲಾಯಿತು. ನನ್ನ ಮೇಲೆ ಹಲ್ಲೆ ನಡೆಯಿತು. ಯಾರು ಹೊಡೆದಿದ್ದಾರೆ ಗೊತ್ತಿಲ್ಲ. ಕೆಲ ದಿನ ಕೋಮಾಕ್ಕೆ ಹೋಗಿದ್ದೆ. ಭಯದಿಂದ ನಾನು ಸುಮ್ಮನಿದ್ದೆ. ಶವ ಹೂಳಿದ್ದಾಗಿ ವ್ಯಕ್ತಿಯೊಬ್ಬರು ಹೇಳಿಕೊಂಡು ಮುಂದೆ ಬಂದಿದ್ದಾರೆ. ನನ್ನ ಮಗಳ ಅಸ್ಥಿ ಸಿಕ್ಕರೆ ಅದನ್ನು ಸಂಸ್ಕಾರ ಮಾಡಿ ಅವಳ ಆತ್ಮಕ್ಕೆ ಶಾಂತಿ ಕೊಡಿಸಬೇಕು ಎಂಬ ಕಾರಣಕ್ಕೆ ಈಗ ದೂರು ನೀಡಿದ್ದೇನೆ’ ಎಂದರು.

‘ತನಿಖಾಧಿಕಾರಿ ನಿರ್ಧರಿಸಿದಾಗ ಹೂತ ಜಾಗ ಅಗೆಯುತ್ತೇವೆ’

‘ಹೂತ ಜಾಗ ಅಗೆಯುವ ಪ್ರಕ್ರಿಯೆಯು ಮುಗಿಯುತ್ತಿದ್ದಂತೆಯೇ ಸಾಕ್ಷಿ ದೂರುದಾರನು ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಕ್ತಿಗಳಿಂದ ಗುಪ್ತ ಮಾಹಿತಿ ದೊರಕಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. 

ಈ ಪ್ರಕರಣದ ಕುರಿತು ಬುಧವಾರ ಎರಡನೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು, ‘ಸೂಕ್ತ ತನಿಖಾ ಪ್ರಕ್ರಿಯೆಯನ್ನು ಅನುಸರಿಸದೇ ಹೂತ ಜಾಗ ಅಗೆಯುವ ಪ್ರಕ್ರಿಯೆಯನ್ನು ನಡೆಸಲು ಆತುರ ತೋರುತ್ತಿರುವಂತೆ ಸುದ್ದಿ ಹರಿದಾಡುತ್ತಿದೆ. ಈ ವಿಷಯವನ್ನು ಸಾಕ್ಷಿದಾರರ ಪರವಾದ ವಕೀಲರಿಗೂ ತಿಳಿಸಲಾಗಿದೆ. ಈ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಶವಗಳನ್ನು ಹೂಳಲಾಗಿದೆ ಎನ್ನಲಾದ ಜಾಗವನ್ನು ಅಗೆಯುವ ಪ್ರಕ್ರಿಯೆಯನ್ನು ಯಾವ ಹಂತದಲ್ಲಿ ಕೈಗೊಳ್ಳುವುದು ಸೂಕ್ತವೆಂದು ತನಿಖಾಧಿಕಾರಿ ನಿರ್ಧರಿಸುತ್ತಾರೋ ಆಗಲೇ ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸಿಕೊಂಡು  ಜಾಗವನ್ನು ಅಗೆಯುವ ಪ್ರಕ್ರಿಯೆಯನ್ನು ನಡೆಸಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಈ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ಬಂದಿದೆ. ಸಾಕ್ಷಿ ದೂರುದಾರ  ಅಥವಾ ಅವರ ಪರವಾದ ವಕೀಲರು ಈ ವಿಷಯವನ್ನು ಪ್ರಕರಣದ ತನಿಖಾಧಿಕಾರಿ ಗಮನಕ್ಕೆ ತಂದಿಲ್ಲ. ಈ ಮಾಹಿತಿಯನ್ನು ಪರಿಶೀಲಿಸಬೇಕಾಗಿರುತ್ತದೆ’ ಎಂದು  ಅವರು ತಿಳಿಸಿದ್ದಾರೆ.

ಸತ್ತವರಿಗೂ ಧರ್ಮಸ್ಥಳಕ್ಕೂ ಸಂಬಂಧ ಕಲ್ಪಿಸುವ ಕೆಲಸ ನಡೆಯುತ್ತಿದೆ. ಧರ್ಮಸ್ಥಳವನ್ನೇ ಗುರಿ ಮಾಡಿಕೊಂಡಿರುವುದು ಸಂಚಿನ ಒಂದು ಭಾಗ. ಈ ಬಗ್ಗೆ ಸಮಗ್ರ ತನಿಖೆಯಾಗಲಿ
ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.