ADVERTISEMENT

ಮಂಗಳೂರು ಜಿಲ್ಲೆಯಾಗಿಸಲು ಧ್ವನಿ ಎತ್ತುವೆ: ಶಾಸಕ ಉಮಾನಾಥ ಕೋಟ್ಯಾನ್

ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 3:16 IST
Last Updated 2 ಮಾರ್ಚ್ 2026, 3:16 IST
<div class="paragraphs"><p>ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು</p></div>

ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ಮೂಲ್ಕಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು

   

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯಾಗಿ ಮರು ನಾಮಕರಣ ಮಾಡಲು ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಮೂಲ್ಕಿ ತಾಲ್ಲೂಕಿನ ಕಟೀಲಿನ ನಂದಿನಿ ನದಿ ಮಧ್ಯದ ಕುದ್ರುವಿನಲ್ಲಿ ಮೂರನೇ ಮೂಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ಸರ್ಕಾರಿ ಶಾಲೆ ಮುಚ್ಚಲು ಸರ್ಕಾರದ ನೀತಿ ಹಾಗೂ ಅಧಿಕಾರಿಗಳೇ ಮೂಲ ಕಾರಣ. ದೈನಂದಿನವಾಗಿ ಕನ್ನಡ ಭಾಷೆಯ ಬಳಕೆಯಾದಂತೆ, ಅದನ್ನು ಉಳಿಸಿ ಬೆಳೆಸಲು ಸಾಹಿತ್ಯಾಸಕ್ತರಿಗೆ ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡೋಣ ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು, ಸಾಹಿತ್ಯ ಮತ್ತೊಂದು ಸೃಷ್ಟಿಗೆ ಸಾಕ್ಷಿಯಾಗಬೇಕು. ಬದುಕಿನ ಅನುಭವವೇ ಸಾಹಿತ್ಯ. ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸದೆ ಇರುವ ಮನಃಸ್ಥಿತಿಯೇ ಕನ್ನಡ ಶಾಲೆ ಮುಚ್ಚಲು ಕಾರಣ. ಸಾಹಿತ್ಯದ ಪರಿಭಾಷೆ ವಿಸ್ತರಿಸಬೇಕು. ಒಳಗಣ್ಣನಿಂದ ನೋಡಲು ಕಲಿಯಿರಿ, ಹೊರಗಣ್ಣಿನಿಂದ ನೋಡಬೇಡಿ. ತುಳುನಾಡನ್ನು ಬದುಕಿಸುವ ಪಾಡ್ದನಗಳ ದಾಖಲೀಕರಣ ಮಾಡಬೇಕು ಎಂದರು.

ಉದ್ಘಾಟನೆಗೂ ಮೊದಲು ಕಟೀಲು ರಥಬೀದಿಯಿಂದ ನಡೆದ ಕನ್ನಡ ಭುವನೇಶ್ವರಿಯ ಮೆರವಣಿಗೆಯನ್ನು ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.

40ಕ್ಕೂ ಹೆಚ್ಚು ಚಿತ್ರ ಕಲಾವಿದರು ನಂದಿನಿ ನದಿ ಹಾಗೂ ಕಟೀಲು ಕ್ಷೇತ್ರದ ಕುರಿತಾಗಿ ಚಿತ್ರಗಳನ್ನು ರಚಿಸಿದರು. ಪರಿಸರ ಪ್ರವಾಸೋದ್ಯಮ ಮಂಡಳಿಯ ಶಾಲೆಟ್ ಪಿಂಟೊ ಚಾಲನೆ ನೀಡಿದರು. ಮೂಲ್ಕಿ ತಾಲ್ಲೂಕಿನ 20 ಕವಿಗಳಿಂದ ಕವಿಗೋಷ್ಠಿ, ಕಥಾಗೋಷ್ಠಿ, ಮಕ್ಕಳ ಕಥೆಗಳ ಓದು ನಡೆಯಿತು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಸ್ಥಳಿಯ ವಿಷಯಗಳ ಬಗ್ಗೆ ಚರ್ಚೆ, ಸಂವಾದಗಳ ಪಟ್ಟಾಂಗಕಟ್ಟೆಯನ್ನು ದಯಾನಂದ ಕಟೀಲ್ ಉದ್ಘಾಟಿಸಿದರು. ಹಿರಿಯ ಸಾಹಿತಿಗಳ ನೆನಪು ಕಾರ್ಯಕ್ರಮ ನಡೆಯಿತು. ಐದು ಕೃತಿಗಳ ಬಿಡುಗಡೆಗೊಳಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್, ನಿಕಟಪೂರ್ವ ಸಮ್ಮೇಳಾನಾಧ್ಯಕ್ಷ ಶ್ರೀಧರ ಡಿ.ಎಸ್., ಕಥೆಗಾರ ಹಂಝ ಮಲಾರ್, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಗುರುರಾಜ್ ಮಲ್ಲಿಗೆಯಂಗಡಿ, ತಾಲ್ಲೂಕು ಅಧ್ಯಕ್ಷ ಮಿಥುನ್ ಕೊಡೆತ್ತೂರು, ಅಜಾರು ನಾಗರಾಜರಾಯ, ಪ್ರದೀಪ್‌ಕುಮಾರ್ ಕಲ್ಕೂರ, ದೊಡ್ಡಯ್ಯ ಮೂಲ್ಯ, ಎರಿಕ್ ಪಾಯಸ್, ಸ್ವರಾಜ್ ಶೆಟ್ಟಿ ಭಾಗವಹಿಸಿದ್ದರು.

ಸಮ್ಮೇಳನಕ್ಕೆ ಬಂದವರಿಗೆಲ್ಲರಿಗೂ ಕನ್ನಡದ ಶಾಲು, ತರಕಾರಿ ಗಿಡ, ಪುಸ್ತಕ ನೀಡಲಾಯಿತು. ಪರಿಸರ ಪೂರಕ ವಸ್ತುಗಳು, ಖಾದಿ ಬಟ್ಟೆ, ಪುಸ್ತಕಗಳ ಮಾರಾಟ ವ್ಯವಸ್ಥೆ ನಡೆಯಿತು.

ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ನಡೆದ ಮೂಲ್ಕಿ ತಾಲ್ಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದರು ಪ್ರತಿಭೆ ಅನಾವರಣಗೊಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.