ADVERTISEMENT

ಪ್ರಾಣತೆತ್ತ ರೈತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಿ: ಯು.ಟಿ.ಖಾದರ್

ಶಾಸಕ ಯು.ಟಿ. ಖಾದರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 12:02 IST
Last Updated 19 ನವೆಂಬರ್ 2021, 12:02 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ರೈತರ ಹೋರಾಟಕ್ಕೆ ಮಂಡಿಯೂರಿದ ಕೇಂದ್ರ ಸರ್ಕಾರ, ಕೃಷಿ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆದಿದೆ. ಇದು ರೈತರು ಹಾಗೂ ವಿರೋಧ ಪಕ್ಷಗಳ ಹೋರಾಟಕ್ಕೆ ದೊರೆತ ಜಯವಾಗಿದೆ. ಒಂದು ವರ್ಷ ನಡೆದ ಹೋರಾಟದಲ್ಲಿ ಪ್ರಾಣತೆತ್ತ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೋರಾಟ ಟೀಕಿಸಿ ಅವಮಾನಿಸಿದ ಬಿಜೆಪಿ ಪ್ರಮುಖರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು. ಸರ್ವಾಧಿಕಾರಿಯಂತೆ ವರ್ತಿಸಿದ ಕೇಂದ್ರ ಸರ್ಕಾರ ಕೊನೆಗೂ ಜನಾಂದೋಲನಕ್ಕೆ ಮಣಿದಿದೆ. ರೈತರ ಹೋರಾಟ ಪ್ರಜಾಪ್ರಭುತ್ವಕ್ಕೆ ದೊರೆತ ಯಶಸ್ಸಾಗಿದೆ ಎಂದರು.

ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸರ್ಕಾರ ಮಸೂದೆಯನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಈ ಹಿಂದೆ ಚುನಾವಣೆ ವೇಳೆ ಇಂಧನದ ಮೇಲಿನ ತೆರಿಗೆ ಇಳಿಸುವ ಮೂಲಕ ತನಗೆ ಚುನಾವಣೆಯೇ ಮುಖ್ಯ
ಎಂಬುದನ್ನು ಬಿಜೆಪಿ ಸರ್ಕಾರ ಸಾಬೀತುಪಡಿಸಿದೆ. ಇನ್ನಾದರೂ ರೈತ ವಿರೋಧಿ, ಜನವಿರೋಧಿ ನೀತಿಯನ್ನು ಕೈಬಿಡದಿದ್ದರೆ ಜನರು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ADVERTISEMENT

ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಲುಕ್ಮಾನ್ ಬಂಟ್ವಾಳ್, ನವೀನ್ ಡಿಸೋಜ, ಸಂತೋಷ್ ಕುಮಾರ್, ವಿಶ್ವಾಸ್‌ಕುಮಾರ್‌ದಾಸ್, ನೀರಜ್‌ಪಾಲ್, ಪದ್ಮನಾಭ ನರಿಂಗಾನ, ಮಹಮ್ಮದ್ ಮೋನು, ನಝೀರ್ ಬಜಾಲ್ ಇದ್ದರು.

‘ಇಂಧನ ಬೆಲೆ ಏರಿಕೆ ವಿರುದ್ಧ ಹೋರಾಟ’

ರೈತ ವಿರೋಧಿ ಮಸೂದೆ ವಿರುದ್ಧದ ಹೋರಾಟಕ್ಕೆ ಜಯ ದೊರೆತಿದೆ. ಇಂಧನ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧವೂ ಜನರು ಸಹನೆ ಕಳೆದುಕೊಂಡಿದ್ದಾರೆ. ಇದರ ವಿರುದ್ಧ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಸಾಥ್ ನೀಡುತ್ತದೆ. ಬ್ರಿಟಿಷರ ವಿರುದ್ಧ ಜನಾಂದೋಲನ ನಡೆಸಿ, ಅವರನ್ನು ಓಡಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧವೂ ಇದೇ ಮಾದರಿಯ ಹೋರಾಟವನ್ನು ಜನರು ನಡೆಸುವ ಕಾಲ ಬಂದಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.