ADVERTISEMENT

ಕೇಂದ್ರ ಸಚಿವರಿಗೆ ಕರಿ ಬಾವುಟ ಹಾರಿಸುತ್ತೇವೆ: ಐವನ್‌

ಎಂಎನ್‌ಆರ್‌ಇಜಿ– ಮಹಾತ್ಮಗಾಂಧಿ ಹೆಸರು ಕೈಬಿಟ್ಟಿದ್ದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:36 IST
Last Updated 24 ಡಿಸೆಂಬರ್ 2025, 6:36 IST
ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಪರಿಹಾರ ಧನ ಪಡೆದ ಫಲಾನುಭವಿಗಳಿಗೆ ಐವನ್ ಡಿಸೋಜ ಅವರು ಮಂಗಳೂರಿನಲ್ಲಿ ಮಂಗಳವಾರ ಮಂಜೂರಾತಿ ಪತ್ರ ವಿತರಿಸಿದರು
ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಪರಿಹಾರ ಧನ ಪಡೆದ ಫಲಾನುಭವಿಗಳಿಗೆ ಐವನ್ ಡಿಸೋಜ ಅವರು ಮಂಗಳೂರಿನಲ್ಲಿ ಮಂಗಳವಾರ ಮಂಜೂರಾತಿ ಪತ್ರ ವಿತರಿಸಿದರು   

ಮಂಗಳೂರು: ‘ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಎಂಎನ್‌ಆರ್‌ಇಜಿ) ಯೋಜನೆಯ ಹೆಸರು ಬದಲಾಯಿಸಿ ಮಹಾತ್ಮ ಗಾಂಧೀಜಿಗೆ ಅಪಮಾನ ಮಾಡಿದೆ. ಮಹಾತ್ಮ ಗಾಂಧಿ ಹೆಸರನ್ನು ಮರುಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ, ಕೇಂದ್ರ ಸಚಿವರು ರಾಜ್ಯಕ್ಕೆ, ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ, ಅವರಿಗೆ ಕರಿ ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ' ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಮಹಾತ್ಮ ಗಾಂಧೀಜಿಗೆ  ಅವಮಾನ ಮಾಡುವುದನ್ನು ಸಹಿಸಲಾಗದು. ಅವರ ಹೆಸರನ್ನು ಕೈಬಿಟ್ಟಿರುವುದರ ಹಿಂದೆ ಬಿಜೆಪಿಯ ಸ್ವಾರ್ಥದ ಮತ್ತು ದ್ವೇಷದ ರಾಜಕಾರಣ ಅಡಗಿದೆ‌’ ಎಂದರು.

‘ಕೇಂದ್ರ ಸರ್ಕಾರವು ಎಂಎನ್‌ಆರ್‌ಇಜಿ ಹೆಸರನ್ನು ಬದಲಾವಣೆ ಮಾಡಿದ್ದರೂ, ರಾಜ್ಯದಲ್ಲಿ ಆ ಯೋಜನೆಯನ್ನು ಹಳೆಯ ಹೆಸರಿನಲ್ಲೇ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇನೆ’ ಎಂದರು. 

ADVERTISEMENT

‘ಉದ್ಯೋಗ ಖಾತರಿ ಯೋಜನೆಯಡಿ ಶೇ 90ರಷ್ಟು ಪಾಲನ್ನು ಕೇಂದ್ರವೇ ಭರಿಸುತ್ತಿತ್ತು. ಅದನ್ನು ಶೇ 60ಕ್ಕೆ ಇಳಿಸುವ ಮುನ್ನ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿಲ್ಲ. ಬಡವರ  ಹೊಟ್ಟೆಗೆ ಚೂರಿ ಹಾಕುವಂತಹ ಕೆಲಸ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ದಿ.ಆಸ್ಕರ್ ಫರ್ನಾಂಡಿಸ್‌ ಮೊದಲಾದ ನಾಯಕರ ವಿರುದ್ಧ ಷಡ್ಯಂತ್ರ ರೂಪಿಸಿತ್ತು. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯವೇ ಹೇಳಿದೆ’ ಎಂದರು.  

‘ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 8 ಫಲಾನುಭವಿಗಳಿಗೆ ಒಟ್ಟು ₹ 4,41,118 ಮಂಜೂರಾಗಿದೆ ಎಂದು ಅವರು ತಿಳಿಸಿದರು. 

ಪಕ್ಷದ ಮುಖಂಡರಾದ ಶಶಿಧರ ಹೆಗ್ಡೆ, ಭಾಸ್ಕರ ರಾವ್‌, ಇಮ್ರಾನ್‌ ಎ.ಆರ್‌., ನೀತು ಡಿಸೋಜ, ಚಂದ್ರಹಾಸ ಪೂಜಾರಿ ಸತೀಶ್‌ ಪೆಂಗಲ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.