ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಇಡೀ ಬಿಟ್ಟು ಬಿಟ್ಟು ಸುರದ ಧಾರಾಕಾರ ಮಳೆ ಸೋಮವಾರವು ಮುಂದುವರಿದಿದೆ. ಮುಂಗಾರಿನ ಮೊದಲ ಮಳೆಯ ಅಬ್ಬರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ನಲುಗಿದೆ.
ನಗರದಲ್ಲಿ ಅನೇಕ ಕಡೆ ತಗ್ಗು ಪ್ರದೇಶ ಮನೆಗಳ ಒಳಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮುಖ್ಯರಸ್ತೆಗಳಲ್ಲೇ ನೀರು ಹರಿದಿದ್ದು, ಅವು ಹಳ್ಳಗಳಂತೆ ಕಂಡುಬಂದವು.
ಮನೆಗಳು ಜಲಾವೃತ:ಭಾರಿ ಮಳೆಯಿಂದಾಗಿ ತಗ್ಗು ನಗರದ ತಗ್ಗು ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರುನುಗ್ಗಿದ್ದರಿಂದ ನಿವಾಸಿಗಳು ಸಮಸ್ಯೆ ಎದುರಿಸಿದರು. ಭಗವತಿ ನಗರ, ಕೊಡಿಯಾಲ್‌ಬೈಲ್, ರಥಬೀದಿ, ಕೊಟ್ಟಾರ, ಮಾಲೆಮಾರ್, ಜಪ್ಪಿನಮೊಗರು, ಅಳಪೆ, ಮರವೂರು ಸೇರಿದಂತೆ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ನಿವಾಸಿಗಳು ಮನೆಗೆ ನುಗ್ಗಿದ ನೀರನ್ನು ಹೊರಹಾಕಿ ಸ್ವಚ್ಛಗೊಳಿಸಿ ನಿಟ್ಟುಸಿರು ಬಿಡುವಾಗ ಮತ್ತೆ ಭಾರಿ ಮಳೆಯಾಗುತ್ತಿತ್ತು. ಪೀಠೋಪಕರಣಗಳು, ವಿದ್ಯುತ್ ಪರಿಕರಗಳು ಹಾನಿಗೊಳಗಾದವು.
‘ರಾಜಕಾಲುವೆ ಅರ್ಧದಲ್ಲಿ ನಿಲ್ಲುತ್ತದೆ. ಅಗಲ ಕಡಿಮೆ ಇದೆ. ಕಸ ತುಂಬಿ ಒಳಗೆ ಬರುತ್ತದೆ. ಪ್ರತಿವರ್ಷವೂ ನಮಗೆ ಇದೇ ಗೋಳು. ಈ ಸಲ ಮಳೆ ಶುರುವಾದ ಬಳಿಕ ಮೂರನೇ ಸಲ ಈ ರೀತಿ ಸಮಸ್ಯೆಯಾಗಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಜಲಾವ್ರತ ಪ್ರದೇಶಗಳಿಗೆ ಭೇಟಿ ನೀಡಿ, ನೀರು ಸರಾಗವಾಗಿ ಹರಿಯುವುದಕ್ಕೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಂಪ್‌ವೆಲ್ ಮತ್ತೆ ಜಲಾವ್ರತ: ನಗರದ ಪಂಪ್‌ವೆಲ್ ಜಂಕ್ಷನ್ ಸೋಮವಾರ ಮತ್ತೆ ಜಲಾವೃತವಾಯಿತು. ಅತ್ಯಂತ ವಾಹನ ದಟ್ಟಣೆಯಿಂದ ಕೂಡಿರುವ ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ), ಕೊಟ್ಟಾರ, ಕೆ.ಎಸ್ ರಾವ್ ರಸ್ತೆಗಳಲ್ಲೂ ಒಂದು ಅಡಿಯವರೆಗೆ ನೀರು ನಿಂತಿತ್ತು.
ಸಂಚಾರ ದಟ್ಟಣೆ: ಮಳೆಯಿಂದಾಗಿ, ಪಂಪ್‌ವೆಲ್,ಕಂಕನಾಡಿಯ ಕರಾವಳಿ ಜಂಕ್ಷನ್, ಬೆಂದೂರ್‌ವೆಲ್ ಜಂಕ್ಷನ್, ಬಲ್ಮಠ ಜಂಕ್ಷನ್‌ಗಳಲ್ಲಿ ದಿನವಿಡೀ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಯಿತು. ಪಂಪ್‌ವೆಲ್‌ನಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದ್ದರಿಂದ ಕಂಕನಾಡಿ, ಬಲ್ಮಠದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಲ್ಮಠದಿಂದ ಪಂಪ್‌ವೆಲ್ ಜಂಕ್ಷನ್‌ವರೆಗೆ ಸಾಗಲು ವಾಹನಗಳಿಗ ಅರ್ಧ ತಾಸಿಗೂ ಹೆಚ್ಚು ಸಮಯ ಹಿಡಿಯಿತು. ಕೆಲವ ಮುಗಿಸಿ ಸಂಜೆ ಮನೆಗೆ ಮರಳುವವರು ಹೈರಾಣಾದರು.
ಆನೆಗುಂದಿಯಲ್ಲಿಕಾಲುಸಂಕವೊಂದು ಭಾರಿ ಮಳೆಯಿಂದಾಗಿ ಕುಸಿದಿದೆ. ಲೇಡಿಹಿಲ್‌ನಲ್ಲಿ ಆಭರಿ ಮರವೊಂದು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ತಕ್ಷಣವೇ ಮರವನ್ನು ಪಾಲಿಕೆ ಮತ್ತು ವಿಕೋಪ ನಿರ್ವಹಣೆಯ ತಂಡದವರು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರವೂರಿನಲ್ಲಿ ಈ ಹಿಂದೆ ಗದ್ದೆಗಳಿದ್ದು, ಮಳೆ ನೀರು ಫಲ್ಗುಣಿ ನದಿಗೆ ನೇರವಾಗಿ ಸೇರುತ್ತಿತ್ತು. ಕೆಂಜಾರಿನಲ್ಲಿ ಕರಾವಳಿ ರಕ್ಷಣಾ ಪಡೆಗೆ ಮಂಜೂರಾದ ಜಾಗದ ಪಕ್ಕ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದಾಗಿ ಮಳೆ ನೀರು ನೇರವಾಗಿ ನದಿಗೆ ಸೇರಲು ಅಡ್ಡಿ ಉಂಟಾಗಿದ್ದು, ಮರವೂರಿನ ಮನೆಗಳೆರಡು ಜಲಾವೃತವಾಗುತ್ತಿವೆ. ಒಂದು ಮನೆ ಕುಸಿಯುವ ಸ್ಥಿತಿ ತಲುಪಿದೆ.
ನಗರದ ಮಳೆನೀರು ಹರಿಯುವ ಎಲ್ಲ ತೋಡುಗಳ ಹೂಳನ್ನು ಒಂದು ವಾರ ಮೊದಲೇ ತೆರವುಗೊಳಿಸಲಾಗಿತ್ತು. ಒಮ್ಮೆಲೆ ಭಾರಿ ಮಳೆಯಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆರವಿಚಂದ್ರ ನಾಯಕ್ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ
ಬೆಳ್ಳಾರೆ: 20 ಸೆಂ.ಮೀ ಮಳೆ
ಸೋಮವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲೇ ಗರಿಷ್ಠ ಪ್ರಮಾಣದ ಮಳೆ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ (20.05 ಸೆಂ.ಮೀ.) ದಾಖಲಾಗಿದೆ. ಉಳಿದಂತೆ ಬಂಟ್ವಾಳ ತಾಲ್ಲೂಕಿನ ಸರಪಾಡಿ ಮತ್ತು ಪುತ್ತೂರು ತಾಲ್ಲೂಕಿನ ಬೆಳಂದೂರಿನಲ್ಲಿ ತಲಾ19 ಸೆಂ.ಮೀ ಅಲಂಕಾರಿನಲ್ಲಿ 17.85 ಸೆಂ.ಮೀ ರಾಮಕುಂಜದಲ್ಲಿ 17.25 ಸೆಂ.ಮೀ ಬಡಗನ್ನೂರಿನಲ್ಲಿ 16.75 ಸೆಂ.ಮೀ ಬಂಟ್ವಾಳ ತಾಲ್ಲೂಕಿನ ಪುಣಚದಲ್ಲಿ 16.60 ಸೆಂ.ಮೀ ಸುಳ್ಯ ತಾಲ್ಲೂಕಿನ ಗುತ್ತಿಗಾರಿನಲ್ಲಿ 16.55 ಸೆಂ.ಮೀ ಪುತ್ತೂರು ತಾಲ್ಲೂಕಿನ ಅರಿಯಡ್ಕದಲ್ಲಿ 16.4 ಸೆಂ.ಮೀ ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರಿನಲ್ಲಿ 16.3 ಸೆಂ.ಮೀ ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆಯಲ್ಲಿ 16.15 ಸೆಂ.ಮೀ ಬಂಟ್ವಾಳ ತಾಲ್ಲೂಕಿನ ಕೇಪುವಿನಲ್ಲಿ 15.85 ಸೆಂ.ಮೀ ಬೆಳ್ತಂಗಡಿ ತಾಲ್ಲೂಕಿನ ಬಾರ್ಯದಲ್ಲಿ 15.5 ಸೆಂ.ಮೀ. ಮಂಗಳೂರು ತಾಲ್ಲೂಕಿನ ಪಡುಮಾರ್ನಾಡು ಮತ್ತು ಮೂಡುಬಿದಿರೆ ತಾಲ್ಲೂಕಿನ ಶಿರ್ತಾಡಿಯಲ್ಲಿ ತಲಾ 15.15 ಸೆಂ.ಮೀ ಮಳೆ ದಾಖಲಾಗಿದೆ.
ಶಾಲೆ ಪಿ.ಯು. ಕಾಲೇಜುಗಳಿಗೆ ಇಂದು ನಾಳೆ ರಜೆ
ಇದೇ 27 ಮತ್ತು 28ರಂದು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸಿಬಿಎಸ್‌ಇ ಶಾಲೆಗಳಿಗೆ ಪದವಿ ಪೂರ್ವ ಕಾಲೇಜುಗಳಿಗೆ ಎರಡು ದಿನ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆ. ಮೀನುಗಾರಿಕೆಗಾಗಿ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಪ್ರವಾಸಿಗರು ನದಿ ತೀರ ಕಡಲ ಕಿನಾರೆಗಳಿಗೆ ಹಾಗೂ ಚಾರಣದ ಪ್ರದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿದ್ದಾರೆ. ಸಹಾಯಕ್ಕಾಗಿ ನಿಯಂತ್ರಣ ಕೊಠಡಿಯನ್ನು (0824–2442590) ಅಥವಾ ಸಹಾಯವಾಣಿಯನ್ನು (1077) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.