ADVERTISEMENT

ಮೂಡುಬಿದಿರೆ | 6ರಿಂದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:38 IST
Last Updated 4 ಮಾರ್ಚ್ 2026, 6:38 IST
ಮೂಡುಬಿದಿರೆ ಕೊಡಂಗಲ್ಲಿನ ಉಚ್ಚಂಗಿ ಮಾರಿಯಮಮ್ಮ ದೇವಸ್ಥಾನ
ಮೂಡುಬಿದಿರೆ ಕೊಡಂಗಲ್ಲಿನ ಉಚ್ಚಂಗಿ ಮಾರಿಯಮಮ್ಮ ದೇವಸ್ಥಾನ   

ಮೂಡುಬಿದಿರೆ: ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್ 6ರಿಂದ 8ರವರೆಗೆ ಅಷ್ಟೋತ್ತರ ಶತ ಬ್ರಹ್ಮಕಲಶೋತ್ಸವ ಶ್ರೀದೇವಿಯ ದರ್ಶನ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಇಲ್ಲಿ ಮಂಗಳವಾರ ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್, 6ರಂದು ಸಂಜೆ 4ಕ್ಕೆ ಸ್ವರಾಜ್ಯ ಮೈದಾನದಿಂದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದವರೆಗೆ ವೈಭವದ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು.

7ರಂದು ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 6ಕ್ಕೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇಜು ಅಧ್ಯಕ್ಷತೆ ವಹಿಸುವರು. ವಿವಿಧ ದೇವಸ್ಥಾನ‌ಗಳ ಧರ್ಮದರ್ಶಿಗಳು ಭಾಗವಹಿಸುವರು. ರಾತ್ರಿ 7ರಿಂದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.

ADVERTISEMENT

8ರಂದು ಬೆಳಿಗ್ಗೆ 11.36ಕ್ಕೆ ಬ್ರಹ್ಮಕಲಶಾಭಿಷೇಕ ಬಳಿಕ ದೇವಿ ದರ್ಶನ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಉದ್ಘಾಟಿಸುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಬೃಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ ಆರ್. ಪೂಜಾರಿ ಭಾಗವಹಿಸುವರು. ಮಧ್ಯಾಹ್ನ 2.30ರಿಂದ ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿಯಿಂದ ‘ಯಕ್ಷ ಗಾನ ಹಾಸ್ಯ ವೈಭವ’, ರಾತ್ರಿ 10ರಿಂದ ಪಿಂಗಾರ ಕಲಾವಿದರು ಬೆದ್ರ ತಂಡದಿಂದ ‘ಓಂಕಾರ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದ ಪ್ರಾಂಗಣಕ್ಕೆ ಹಾಸುಕಲ್ಲು, ಪುರಸಭೆ ಅನುದಾನದಿಂದ ಚಾವಣಿ, ದಾನಿಗಳ ನೆರವಿನಿಂದ ತೀರ್ಥಬಾವಿ, ಸ್ವಾಗತ ಗೋಪುರ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಹೆಗ್ಡೆ, ಸೀತಾರಾಮ ಆಚಾರ್ಯ, ಉಪಾಧ್ಯಕ್ಷ ಕೊರಗಪ್ಪ, ಪ್ರಮುಖರಾದ ಸಂತೋಷ್ ಶೆಟ್ಟಿ, ಅಮರ್ ಕೋಟೆ, ಸತೀಶ್ ಕೋಟ್ಯಾನ್, ಆಡಳಿತ ಮಂಂಡಳಿ ಅಧ್ಯಕ್ಷ ದೇಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.