
ಮೂಡುಬಿದಿರೆ: ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆ ನಿವಾಸಿಗಳಾದ ಸುಮಿತ್ರಾ-ವಿಶ್ವನಾಥ್ ದಂಪತಿಯ ಶಿಥಿಲಗೊಂಡಿದ್ದ ಮನೆಯನ್ನು ಮರು ನಿರ್ಮಾಣ ಮಾಡಿಕೊಡುವ ಉದ್ದೇಶದಿಂದ ಯುವವಾಹಿನಿ ಮೂಡುಬಿದಿರೆ ಘಟಕದಿಂದ ಸುಮಾರು ₹6 ಲಕ್ಷ ವೆಚ್ಚದ ಯೋಜನೆ ರೂಪಿಸಿದ್ದು, ಗುರುವಾರ ಪಡುಮಾರ್ನಾಡು ಪಂಚಾಯಿತಿ ಅಧ್ಯಕ್ಷ ವಾಸುದೇವ ಭಟ್ ಶಿಲಾನ್ಯಾಸ ನೆರವೇರಿಸಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಯೋಜನೆಯ ರೂವಾರಿಯಾದ ಯುವವಾಹಿನಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್ ಮಾತನಾಡಿ, ಸುಮಿತ್ರಾ ಅವರು ಯುವವಾಹಿನಿಯ ಸಕ್ರಿಯ ಸದಸ್ಯೆಯಾಗಿದ್ದು, ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ತೊಡಗಿಸಿಕೊಂಡಿದ್ದಾರೆ. ಅವರ ಕಷ್ಟವನ್ನು ಅರಿತು ಸುಮಾರು 600 ಚದರ ಅಡಿ ವಿಸ್ತೀರ್ಣದ ಸುಮಾರು 6 ಲಕ್ಷ ವೆಚ್ಚದ ಮನೆಯನ್ನು ಮರುನಿರ್ಮಾಣ ಮಾಡಿಕೊಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾ.ಪಂ ಸದಸ್ಯ ರಮೇಶ್ ಶೆಟ್ಟಿ , ಹಿರಿಯರಾದ ಮೋಹನ್ ಕೋಟ್ಯಾನ್, ವಾಸುದೇವ ಭಟ್ ದೇಣಿಗೆಯನ್ನು ಘೋಷಿಸಿದರು. ಘಟಕದ ಗೌರವ ಸಲಹೆಗಾರ ಸುರೇಶ್ ಕೋಟ್ಯಾನ್ ಒಂದು ಲೋಡ್ ಜಲ್ಲಿ ನೀಡುವುದಾಗಿ ತಿಳಿಸಿದರು. ಸುಶಾಂತ್ ಕರ್ಕೇರ ಅವರು ಮನೆಗೆ ಸಂಪೂರ್ಣ ಟೈಲ್ಸ್ ಒದಗಿಸುವ ಭರವಸೆ ನೀಡಿದರು.
ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಶಾಂತ್ ಕರ್ಕೇರ, ಮೂಡುಬಿದಿರೆ ಘಟಕದ ಪ್ರಥಮ ಉಪಾಧ್ಯಕ್ಷ ವಿಧೇಶ್ ಎಂ., ಉಪಾಧ್ಯಕ್ಷ ಗಿರೀಶ್ ಕೋಟ್ಯಾನ್, ಸದಸ್ಯೆಯರಾದ ಜಯಶೀಲಾ ಪೂಜಾರಿ, ಶೋಭಾ ದಿನೇಶ್, ಮನೆಯ ಗುತ್ತಿಗೆದಾರ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಮೂಡುಬಿದಿರೆಯ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟ್ಟ ಪ್ರತಿಭೆಯ ಕುಟುಂಬದ ಸಂಕಷ್ಟವನ್ನು ಮನಗಂಡ ಯುವವಾಹಿನಿ, ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡುವ ಸಂಕಲ್ಪ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.