ADVERTISEMENT

ಹೈಡ್ರೊಜನ್ ಸಲ್ಫೈಡ್ ಅನಿಲ ಸೋರಿಕೆ– ಉನ್ನತ ಮಟ್ಟದ ತನಿಖೆ

ಸೋರಿಕೆ ಸ್ಥಗಿತ– ಎಂಆರ್‌ಪಿಎಲ್, ಸುರಕ್ಷತಾ ಕ್ರಮ ಪಾಲಿಸಲು ಜಿಲ್ಲಾಡಳಿತ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 7:45 IST
Last Updated 14 ಜುಲೈ 2025, 7:45 IST
ದೀಪ್ ಚಂದ್ರ ಭಾರತೀಯ
ದೀಪ್ ಚಂದ್ರ ಭಾರತೀಯ   

ಮಂಗಳೂರು: ಸುರತ್ಕಲ್‌ ಸಮೀಪದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ (ಎಂಆರ್‌ಪಿಎಲ್) ಕಚ್ಛಾ ತೈಲ ಸಂಸ್ಕರಣ ಘಟಕದಲ್ಲಿ ವಿಷಾನಿಲ (ಹೈಡ್ರೋಜನ್ ಸಲ್ಫೈಡ್‌) ಸೋರಿಕೆ ಆಸುಪಾಸಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ತೈಲ ಸೋರಿಕೆ ಬಗ್ಗೆ ತನಿಖೆ ನಡೆಸಲು ಎಂಆರ್‌ಪಿಎಲ್ ಉನ್ನತ ಪಟ್ಟದ ಸಮಿತಿಯನ್ನು ರಚಿಸಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡವು  ಸ್ಥಳಕ್ಕೆ ಧಾವಿಸಿತು. ಈ ಘಟಕದಲ್ಲಿ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳ ಬಗ್ಗೆ ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮ ಪ್ರಸಾದ್ ಕಾಮತ್‌ ಜೊತೆಗೆ ಚರ್ಚಿಸಿತು. ದುರ್ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಸೂಚನೆ ನೀಡಿದೆ. ಮೃತರ ಕುಟುಂಬಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡುವಂತೆಯೂ ಸೂಚಿಸಿದೆ. ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ, ಸುರತ್ಕಲ್ ಉಪತಹಶೀಲ್ದಾರ್ ನವೀನ್ ಕುಮಾರ್ ಜೊತೆಯಲ್ಲಿದ್ದರು.

‘ತೈಲ ಸಾಗಣೆ ‍ ಪ್ರದೇಶದಲ್ಲಿರುವ ತೊಟ್ಟಿಯೊಂದರಲ್ಲಿ ತೈಲದ ಮಟ್ಟದಲ್ಲಿ ಲೋಪ ಕಾಣಿಸಿಕೊಂಡಿತ್ತು. ಅದನ್ನು ಪರಿಶೀಲಿಸಲು ತೆರಳಿದ್ದ ಕಂಪನಿಯ ಸಹಾಯಕ ಕಾರ್ಯಾಚರಣೆ ಅಧಿಕಾರಿಗಳಾಗಿದ್ದ ಪ್ರಯಾಗರಾಜ್‌ನ ದೀಪ‌ಚಂದ್ರ ಭಾರ್ತೀಯಾ (33) ಹಾಗೂ ಕೇರಳದ ಬಿಜಿಲ್‌ ಪ್ರಸಾದ್‌ ಪಿ. (33) ಮೃತಪಟ್ಟಿದ್ದಾರೆ. ಈ ಪ್ರಕರಣದ ವಿಸ್ತೃತ ತನಿಖೆ ನಡೆಸಲು ಗ್ರೂಪ್ ಜನರಲ್ ಮ್ಯಾನೇಜರ್‌ಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಎಂಆರ್‌ಪಿಎಲ್ ರಚಿಸಿದೆ. ಶಾಸನಬದ್ಧ ಪ್ರಾಧಿಕಾರಗಳಿಗೆ ಈ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇವೆ’ ಎಂದು ಎಂಆರ್‌ಪಿಎಲ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 

ADVERTISEMENT

‘ಎಆರ್‌ಪಿಎಲ್‌ನ ಅಗ್ನಿ ಮತ್ತು ಸುರಕ್ಷತಾ ತಂಡದವರು ವಿಷಾನಿಲ ಸೋರಿಕೆಯನ್ನು ಸಂಪೂರ್ಣ ಹತೋಟಿಗೆ ತಂದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

‘ತೈಲ ಸಂಸ್ಕರಣಾ ಘಟಕದ ತೊಟ್ಟಿಯೊಂದರ ಬಳಿ ಕಂಪನಿಯ ಸೀನಿಯರ್‌ ಆಪರೇಟರ್‌ಗಳಿಬ್ಬರು ಪ್ರಜ್ಞಾಹೀನ‌ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದರು‌. ಅವರನ್ನು ತಕ್ಷಣವೇ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಮುಖ ಗವಸು‌ ಧರಿಸಿಯೇ ಕೆಲಸ ಮಾಡಿದ್ದರು. ಮೃತರ ಬಂಧುಗಳ ಹೇಳಿಕೆ‌ ಆಧರಿಸಿ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಮುಂದಿನ‌ ತನಿಖೆ ನಡೆಸಲಾಗುವುದು‘ ಎಂದು ಪೊಲೀಸರು ತಿಳಿಸಿದ್ದಾರೆ. 

ಬಿಜಿಲ್ ಪ್ರಸಾದ್ ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.