ಮಂಗಳೂರು: ನಗರದ ಮುಸ್ಲಿಂ ಮುಖಂಡ ಹಾಗೂ ಉದ್ಯಮಿ ಬಿ.ಎಂ.ಮುಮ್ತಾಜ್ ಅಲಿ ಅವರಿಗೆ ಬೆದರಿಕೆ ಒಡ್ಡಿ ಹಣ ಸುಲಿಗೆ ಮಾಡಿದ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಸಹಿತ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.
‘ಕಾಟಿಪಳ್ಳದ ಅಬ್ದುಲ್ ಸತ್ತಾರ್, ಕೃಷ್ಣಾಪುರ ಮಹಮ್ಮದ್ ಮುಸ್ತಫಾ ಹಾಗೂ ಸಜಿಪಮುನ್ನೂರಿನ ಶಾಫಿ ಬಂಧಿತರು. ಈ ಪ್ರಕರಣದಲ್ಲಿ ಈ ಮೊದಲೇ ಬಂಧಿಸಲಾಗಿದ್ದ ಕೃಷ್ಣಾಪುರದ ರೆಹಮತ್ ಹಾಗೂ ಆಕೆಯ ಪತಿ ಶೋಯಬ್ ಅವರನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ’ ಎಂದು ನಗರ ಪೊಲಿಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮುಮ್ತಾಜ್ ಅಲಿ ಅವರು ಭಾನುವಾರ ಮುಂಜಾನೆ ಕೂಳೂರು ಸೇತುವೆ ಮೇಲಿನಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹವು ಸೋಮವಾರ ಪತ್ತೆಯಾಗಿತ್ತು.
‘ಆರೋಪಿಗಳು ಅಲಿ ಅವರಿಗೆ 2024ರ ಜುಲೈನಿಂದ ಬೆದರಿಕೆ ಒಡ್ಡಿ ₹ 50 ಲಕ್ಷಕ್ಕಿಂತಲೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಮತ್ತಷ್ಟು ಹಣ ನೀಡದಿದ್ದರೆ, ರೆಹಮತ್ ಜೊತೆ ಅಕ್ರಮ ಸಂಬಂಧವಿದೆ ಎಂದು ಅಪಪ್ರಚಾರ ಮಾಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು’ ಎಂದು ಅಲಿ ಅವರ ತಮ್ಮ ಹೈದರ್ ಅಲಿ ಕಾವೂರು ಠಾಣೆಗೆ ದೂರು ನೀಡಿದ್ದರು.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 308 (2), 308 (5) (ಎರಡೂ ಸೆಕ್ಷನ್ ಸುಲಿಗೆಗೆ ಸಂಬಂಧಿಸಿದವು), ಸೆಕ್ಷನ್ 351 (2) (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 352 (ಉದ್ದೇಶಪೂರ್ವಕವಾಗಿ ಅಪಮಾನಿಸುವುದು) ಹಾಗೂ ಸೆಕ್ಷನ್ 190ರ (ಸಮಾನ ಉದ್ದೇಶದಿಂದ ನಡೆಸುವ ಸಂಘಟಿತ ಅಪರಾಧ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಅಬ್ದುಲ್ ಅತ್ತಾರ್ ಬಂಧನದ ಬಳಿಕ ಆತನನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷ ಉಚ್ಚಾಟನೆ ಮಾಡಲಾಗಿದೆ.
‘ಆತ ಯುವ ಕಾಂಗ್ರೆಸ್‌ನ ಸುರತ್ಕಲ್ ಘಟಕದ ಮಾಜಿ ಅಧ್ಯಕ್ಷ. ಸುರತ್ಕಲ್ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.