ಮಂಗಳೂರು: ಹಣಕಾಸು, ಅನುದಾನದ ಕೊರತೆ ಮುಂದಿಟ್ಟುಕೊಂಡು ಕೊಣಾಜೆ, ಬನ್ನಡ್ಕ, ನೆಲ್ಯಾಡಿ ಸಹಿತ ನಾಲ್ಕು ಪದವಿ ಕಾಲೇಜುಗಳನ್ನು ಮುಚ್ಚಲು ಹೊರಟಿರುವುದು ಖಂಡನೀಯ. ಬಡವರ ಮಕ್ಕಳುಪದವಿ ಶಿಕ್ಷಣ ಪಡೆಯಬೇಕಾದರೆ ಸರ್ಕಾರಿ ಶಾಲಾ, ಕಾಲೇಜುಗಳು ಬಲಗೊಳ್ಳಬೇಕು ಎಂದು ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಹೇಳಿದರು.
ಮಂಗಳೂರು ವಿವಿ ಘಟಕ ಪದವಿ ಕಾಲೇಜುಗಳ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೊಣಾಜೆ ಸಹಿತ ಮಂಗಳೂರು ವಿವಿ ಘಟಕ ಕಾಲೇಜುಗಳಾದ ಬನ್ನಡ್ಕ, ನೆಲ್ಯಾಡಿ, ಮಂಗಳೂರು ಸಂಧ್ಯಾ ಕಾಲೇಜುಗಳನ್ನು ಉಳಿಸಲು, ಬಲಪಡಿಸಲು ಒತ್ತಾಯಿಸಿ ಮಂಗಳೂರು ವಿ.ವಿ ಕ್ಯಾಂಪಸ್‌ನಲ್ಲಿ ಸೋಮವಾರ ನಡೆದ ಸಾಮೂಹಿಕ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿವಿಯ ಆರ್ಥಿಕ ಮುಗ್ಗಟ್ಟಿಗೆ ಅಡಳಿತದ ಭ್ರಷ್ಟಾಚಾರ, ಜನಪ್ರತಿನಿಧಿಗಳೇ ಕಾರಣ. ಈಗ ಪರಿಸ್ಥಿತಿ ಕೈ ಮೀರಿದ್ದು ವಿವಿ ಘಟಕ ಕಾಲೇಜುಗಳನ್ನು ರಾಜ್ಯ ಸರ್ಕಾರವೇ ತನ್ನ ಅಧೀನಕ್ಕೆ ಪಡೆದು ನಡೆಸಲಿ. ಬಹುತೇಕ ಶಾಸಕರು ಖಾಸಗಿ ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಅವರು ನಡೆಸುವ ಖಾಸಗಿ ಕಾಲೇಜುಗಳ ಲಾಬಿಯ ದಾಳಿಗೆ ಸರ್ಕಾರಿ ಶಾಲಾ, ಕಾಲೇಜುಗಳು ಬಲಿಯಾಗುತ್ತಿವೆ’ ಎಂದು ಆರೋಪಿಸಿದರು.
ಸಾಮಾಜಿಕ ಕಾರ್ಯಕರ್ತರಾದ ನಝೀರ್ ಉಳ್ಳಾಲ, ಕಾರ್ಮಿಕ ಮುಖಂಡ ಬಿ.ಶೇಖರ್ ಮಾತನಾಡಿ, ಸರ್ಕಾರಿ ಕಾಲೇಜು ಉಳಿಯಲೇ ಬೇಕು. ಇಲ್ಲದೆ ಇದ್ದರೆ ಅವುಗಳ ಉಳಿಗಾಗಿ ಸಮಾನ ಮನಸ್ಕರು ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಪ್ರಮುಖರಾದ ಅಸುಂತ ಡಿಸೋಜ, ಪ್ರಮಿಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ನವೀನ್ ಕೊಂಚಾಡಿ, ಫಾರೂಕ್, ಅಬ್ದುಲ್ ಖಾದರ್, ಶೇಖರ್ ಕುತ್ತಾರ್, ಜನಾರ್ದನ ಕುತ್ತಾರ್, ಶಾಹುಲ್ ಹಮೀದ್, ಅಶ್ರಫ್ ಹರೇಕಳ, ರಫೀಕ್ ಹರೇಕಳ, ತಯ್ಯೂಬ್ ಬೆಂಗರೆ, ಪುನೀತ್ ಉರ್ವಸ್ಟೋರ್, ಜಗದೀಶ್ ಬಜಾಲ್, ಅಲ್ತಾಫ್ ದೇರಳಕಟ್ಟೆ, ರಜಾಕ್ ಮೊಂಟೆಪದವು, ರಜಾಕ್ ಮುಡಿಪು, ಭರತ್ ಕುತ್ತಾರ್, ವಿಲಾಸಿನಿ ತೊಕ್ಕೊಟ್ಟು, ಆಶಾ ಬೋಳೂರು, ಭರತ್ ಕುತ್ತಾರ್ ಭಾಗವಹಿಸಿದ್ದರು.
ಹೋರಾಟ ಸಮಿತಿ ಸಂಚಾಲಕ ರಿಜ್ವಾನ್ ಹರೇಕಳ ಸ್ವಾಗತಿಸಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕುಲಸಚಿವ ರಾಜು ಮೊಗವೀರ ಧರಣಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಮಂಗಳೂರು ವಿವಿಯ ಆರ್ಥಿಕ ಸಮಸ್ಯೆ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಕಾಲೇಜುಗಳು, ಉಪನ್ಯಾಸಕರಿಗೆ ವೇತನ ಪಾವತಿಸಲು ಆಗದಿರುವ ಸಮಸ್ಯೆ ವಿವರಿಸಿದರು. ಘಟಕ ಪದವಿ ಕಾಲೇಜುಗಳನ್ನು ಸರ್ಕಾರದ ಅಧೀನಕ್ಕೆ ಪಡೆದು ನಡೆಸಬೇಕು ಎಂಬುದು ವಿವಿಯ ನಿಲುವಾಗಿದ್ದು, ಅದನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.