ADVERTISEMENT

ಕೊಲೆ ಯತ್ನ ಸುಳ್ಳು ಸುದ್ದಿ: ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 13:04 IST
Last Updated 9 ಆಗಸ್ಟ್ 2022, 13:04 IST
ಎನ್. ಶಶಿಕುಮಾರ್
ಎನ್. ಶಶಿಕುಮಾರ್   

ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಕೊಲೆ ಯತ್ನ ನಡೆಸಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವ್ಯಕ್ತಿಯೊಬ್ಬರು ಕಂಕನಾಡಿ ಠಾಣೆಗೆ ಬಂದು ತನಗೆ ಇಂಟರ್‌ನೆಟ್ ಮೂಲಕ ಬೆದರಿಕೆ ಕರೆ ಬಂದಿರುವುದಾಗಿ ಹಾಗೂ ಕೆಲವರು ಬೈಕ್‍ನಲ್ಲಿ ತನ್ನನ್ನು ಹಿಂಬಾಲಿಸುತ್ತಿರುವುದಾಗಿ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಇಂಟರ್‌ನೆಟ್‌ ಮೂಲಕ ಆ ವ್ಯಕ್ತಿಗೆ ಮೂರ್ನಾಲ್ಕು ಬಾರಿ ಬಂದಿರುವುದು ನಿಜ. ಕರೆಯಲ್ಲಿ ಅವಾಚ್ಯ ಪದಗಳಿಂದ ನಿಂದನೆ ಮಾಡಿರುವುದಾಗಿ ಆ ವ್ಯಕ್ತಿ ತಿಳಿಸಿದ್ದು, ಕರೆಯ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದರು.

ಆದರೆ, ದೂರಿನಲ್ಲಿ ತಿಳಿಸಿರುವಂತೆ ಆ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದಿರುವ ವಾಹನಗಳನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದ್ದು, ಅವು ಫುಡ್ ಡೆಲಿವರಿ ವಾಹನಗಳಾಗಿವೆ. ಈ ಬಗ್ಗೆ ದೂರುದಾರರಿಗೂ ಮನವರಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಕುರಿತಂತೆ ಕೊಲೆ ಯತ್ನ ನಡೆದಿದೆ, ಬೈಕ್‍ಗಳಲ್ಲಿ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿಕೊಂಡು ವಾಹನ ಅಡ್ಡ ಹಾಕಿದ್ದ, ವ್ಯಕ್ತಿ ತಪ್ಪಿಸಿಕೊಂಡು ಮನೆ ತಲುಪಿಸಿದ್ದಾರೆ ಎಂದು ಸುದ್ದಿ ಹರಡಿತ್ತು. ಇಂತಹ ಘಟನೆ ನಡೆದಿಲ್ಲ ಎಂದು ತಿಳಿಸಿದರು.

ADVERTISEMENT

‘ಇಂತಹ ಸುದ್ದಿಗಳನ್ನು ಯಾವುದೇ ಆಧಾರವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಬಾರದು. ಸೋಮವಾರ ವ್ಯಕ್ತಿಯಿಂದ ದೂರು ಬಂದಾಗ ನಾನೇ ಸ್ವತಃ ಕಂಕನಾಡಿ ಠಾಣೆಗೆ ಭೇಟಿ ನೀಡಿ, ವ್ಯಕ್ತಿ ಜತೆ ಮಾತನಾಡಿದ್ದೇನೆ. ಅರ್ಧ ಗಂಟೆಯಲ್ಲಿ ಎಲ್ಲವನ್ನೂ ಪರಿಶೀಲಿಸಿ, ಸ್ಪಷ್ಟನೆ ನೀಡಲಾಗಿದೆ. ಕರೆ ಬಂದ ಸ್ವಲ್ಪ ಹೊತ್ತಿನಲ್ಲಿ ಹೊರಗೆ ಹೋಗುವಾಗ ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ದೂರುದಾರ ವ್ಯಕ್ತಿಗೆ ಬಂದಿತ್ತು. ಹೀಗೆ ಅನ್ನಿಸಿದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುದ್ದಿಗಳನ್ನು ಹರಿಯಬಿಟ್ಟಾಗ ಶಾಂತಿ–ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ’ ಎಂದು ಹೇಳಿದರು.

ಈ ಹಿಂದೆ ಉಳ್ಳಾಲದಲ್ಲಿ ಕೂಡ ಮಚ್ಚು–ಲಾಂಗು ಬಳಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿರುವುದಾಗಿ ಸುದ್ದಿ ಹರಡಿ, ಗೊಂದಲ ಸೃಷ್ಟಿಯಾಗಿತ್ತು. ಇದು ಸುಳ್ಳು ಮಾಹಿತಿ ಎಂದು ಗೊತ್ತಾದಾಗ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಕಮಿಷನರ್ ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.