ADVERTISEMENT

ಫರಂಗಿಪೇಟೆ: ಮದುವೆಗೆ ನಿರಾಕರಿಸಿದ ಯುವತಿಗೆ ಇರಿದು ಯುವಕ ಆತ್ಮಹತ್ಯೆ

8 ವರ್ಷಗಳ ಪರಸ್ಪರ ಪ್ರೇಮಿಸಿದ್ದ ಜೋಡಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 13:38 IST
Last Updated 7 ಜುಲೈ 2025, 13:38 IST
   

ಬಂಟ್ವಾಳ (ದಕ್ಷಿಣ ಕನ್ನಡ): ಫರಂಗಿಪೇಟೆಯ ಯುವತಿಯನ್ನುಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ, ತನ್ನಿಂದ ಬೇರೆಯಾಗಲು ನಿರ್ಧರಿಸಿದ ಯುವತಿಗೆ ಸೋಮವಾರ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಂಟ್ವಾಳ ತಾಲ್ಲೂಕಿನ ಕೋಡ್ಮಣ್ ಗ್ರಾಮ ನಿವಾಸಿ ಸುಧೀರ್ (30) ಯುವತಿಯ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡ ಆರೋಪಿ.

‘ಸುಧೀರ್‌ ಹಾಗೂ ಫರಂಗಿಪೇಟೆಯ ಯುವತಿ ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ತಿಂಗಳುಗಳಿಂದ ಅವರಿಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಆದರೂ ಸುಧೀರ್ ಆಕೆಗೆ ಫೋನ್ ಮಾಡುತ್ತಿದ್ದ. ಆಕೆ ಹೋದಲೆಲ್ಲ ಆಕೆಯನ್ನೂ ಹಿಂಬಾಲಿಸುತ್ತಿದ್ದ. ಸೋಮವಾರ ಬೆಳಿಗ್ಗೆ ಫರಂಗಿಪೇಟೆಯ ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದಿದ್ದ ಆತ ಮದುವೆಯಾಗುವಂತೆ ಯುವತಿಯನ್ನು ಒತ್ತಾಯಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಅವರಿಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಾದ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಿಂದ ಯುವತಿಗೆ ಚುಚ್ಚಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಆಕೆ ಸ್ವಲ್ಪ ದೂರದಲ್ಲೇ ಕುಸಿದು ಬಿದ್ದಿದ್ದಳು. ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಆರೋಪಿಯು ಅಲ್ಲಿಂದ ತೆರಳಿ ಆ ಯುವತಿಯ ಬಾಡಿಗೆಗಿದ್ದ ಮನೆಗೆ ತೆರಳಿ, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.