ಮಂಗಳೂರು: ನಗರದ ಕಂಕನಾಡಿ ಮಸೀದಿ ಬಳಿಯ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿರುವ ಪೊಲೀಸರ ಕ್ರಮವನ್ನು ಕಾಂಗ್ರೆಸ್‌ನ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕವು ಖಂಡಿಸಿದೆ.
‘ಪೊಲೀಸರ ತಾರತಮ್ಯ ನೀತಿಯು ಅತಿರೇಕದ ಪರಮಾವಧಿ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ’ ಎಂದು ಅಲ್ಪಸಂಖ್ಯಾತರ ಘಟಕದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ನೇತೃತ್ವದ ನಿಯೋಗವು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಬುಧವಾರ ಭೇಟಿ ಮಾಡಿ ಈ ಪ್ರಕರಣವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿತು.
‘ಜಿಲ್ಲೆಯ ಇತಿಹಾಸದಲ್ಲೇ ಇದುವರೆಗೆ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆದಾಗಲೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಉದಾಹರಣೆ ಇಲ್ಲ. ಮಸೀದಿಗೆ ತಾಗಿದ ರಸ್ತೆಯಲ್ಲಿ ಕೇವಲ 3 ನಿಮಿಷ ನಮಾಜ್ ಮಾಡಿದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಮು ಕ್ರಿಮಿಗಳ ಒತ್ತಡಕ್ಕೆ ಮಣಿದು ಪೊಲೀಸರು ಮಾಡಿದ ಕೃತ್ಯದಿಂದಾಗಿ ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ’ ಎಂದು ನಿಯೋಗದಲ್ಲಿದ್ದವರು ತಿಳಿಸಿದರು.
ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಕಣಚೂರು ಮೋನು, ಎಂ.ಎಸ್.ಮಹಮ್ಮದ್, ಕೆ.ಅಶ್ರಫ್, ಪಾಲಿಕೆ ಸದಸ್ಯರಾದ ಲತೀಫ್ ಕಂದಕ್, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್, ಕಾಂಗ್ರೆಸ್‌ನ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳಾದ ಹಬೀಬುಲ್ಲಾ ಕಣ್ಣೂರು, ಮಹಮ್ಮದ್ ಬಪ್ಪಳಿಗೆ, ಸಿರಾಜ್ ಬಜಪೆ, ಅಶ್ರಫ್ ಬೆಂಗ್ರೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ಮುಸ್ತಫಾ ಪಾವೂರ್, ವಹಾಬ್ ಕುದ್ರೋಳಿ, ಎ.ಆರ್.ಇಮ್ರಾನ್, ಸಲೀಂ ಪಾಂಡೇಶ್ವರ, ನಿಸಾರ್ ಬಜಪೆ, ಮುನೀರ್, ರಫೀಕ್ ಕಣ್ಣೂರು, ಶರೀಫ್ ವಳಾಲು, ಆಸೀಫ್ ಬಜಾಲ್, ಫಯಾಜ್ ಅಮ್ಮೆಮ್ಮಾರ್ ನಿಯೋಗದಲ್ಲಿದ್ದರು.
‘ಈ ಬಗ್ಗೆ ವಿಧಾನ ಸಭಾಧ್ಯಕ್ಷರು, ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ತಕ್ಷಣವೇ ಪ್ರಕರಣವನ್ನು ವಾಪಸ್ ಪಡೆಯುವುದಾಗಿ ಕಮಿಷನರ್ ಅನುಪಮ್ ಅಗರ್ವಾಲ್ ಭರವಸೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.