ADVERTISEMENT

ಮಂಗಳೂರು: ‘ನಮ್ಮ ಕಾರ್ಗೊ’ಗೆ ಜನರ ನಿರಾಸಕ್ತಿ

ಆರೋಗ್ಯ ಇಲಾಖೆ ಸೇವೆಯಲ್ಲಿ ಸಾರಿಗೆ ಇಲಾಖೆ ವಾಹನ

ಸಂಧ್ಯಾ ಹೆಗಡೆ
Published 29 ಜನವರಿ 2025, 5:31 IST
Last Updated 29 ಜನವರಿ 2025, 5:31 IST
‘ನಮ್ಮ ಕಾರ್ಗೊ’ ಟ್ರಕ್‌
‘ನಮ್ಮ ಕಾರ್ಗೊ’ ಟ್ರಕ್‌   

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವರ್ಷದ ಹಿಂದೆ ಪ್ರಾರಂಭಿಸಿರುವ ‘ನಮ್ಮ ಕಾರ್ಗೊ’ ಸರಕು ಸಾಗಣೆ ಟ್ರಕ್ ಸೇವೆಗೆ ಜನರು ನಿರಾಸಕ್ತಿ ತೋರಿದ್ದಾರೆ. ಒಂದು ವರ್ಷದಲ್ಲಿ ನಮ್ಮ ಕಾರ್ಗೊ ಸೇವೆಯಿಂದ ನಿಗಮಕ್ಕೆ ದೊರೆತಿದ್ದು ₹6.84 ಲಕ್ಷ ಆದಾಯ ಮಾತ್ರ.

ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ 2023ನೇ ಇಸವಿ ಡಿಸೆಂಬರ್‌ನಲ್ಲಿ ಸಾರಿಗೆ ನಿಗಮವು ನಮ್ಮ ಕಾರ್ಗೊ ಸೇವೆ ಪ್ರಾರಂಭಿಸಿತ್ತು. ಒಟ್ಟು 20 ಟ್ರಕ್‌ಗಳನ್ನು ಕಾರ್ಗೊ ಸೇವೆಗೆ ಒದಗಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಮಂಗಳೂರು ಹಾಗೂ ಪುತ್ತೂರು ವಿಭಾಗಕ್ಕೆ ತಲಾ ಒಂದು ಸಾಗಣೆ ಟ್ರಕ್ ದೊರೆತಿತ್ತು.

ಸಾರ್ವಜನಿಕರಿಂದ ಬೇಡಿಕೆ ಬರದ ಕಾರಣ ಪುತ್ತೂರು ವಿಭಾಗಕ್ಕೆ ದೊರೆತಿದ್ದ ಟ್ರಕ್ ಅನ್ನು ಜುಲೈನಲ್ಲಿ ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ನಾಲ್ಕು ತಿಂಗಳು ಕಾರ್ಯಾಚರಿಸಿದ ಈ ಟ್ರಕ್ ಅಕ್ಟೋಬರ್‌ನಲ್ಲಿ ಮತ್ತೆ ಧಾರವಾಡಕ್ಕೆ ವರ್ಗಾವಣೆಗೊಂಡಿದೆ.

ADVERTISEMENT

ಪ್ರಸ್ತುತ ಮಂಗಳೂರು ವಿಭಾಗದಲ್ಲಿ ಒಂದು ಸರಕು ಸಾಗಣೆ ಟ್ರಕ್ ಇದೆ. ಸಾರ್ವಜನಿಕರಿಂದ ಬೇಡಿಕೆ ಬರದ ಕಾರಣಕ್ಕೆ ಇದನ್ನು ಸರ್ಕಾರಿ ಸೇವೆಗೆ ಒದಗಿಸಲಾಗಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಈ ಟ್ರಕ್ ಅನ್ನು ಬಾಡಿಗೆ ಪಡೆದಿದ್ದು, ವೆನ್ಲಾಕ್ ಆಸ್ಪತ್ರೆಗೆ ಬಳಕೆಯಾಗುತ್ತಿದೆ. ಒಂದು ವರ್ಷದಲ್ಲಿ ನಮ್ಮ ಕಾರ್ಗೊ ಟ್ರಕ್ 177 ದಿನಗಳಷ್ಟು ಮಾತ್ರ ಸಂಚಾರ ನಡೆಸಿದೆ. ಸರಕು ಸಾಗಣೆ ಸೇವೆ ಪರಿಚಯಿಸಿದ ಶುರುವಿನಲ್ಲಿ ಮುಡಿಪುವಿನ ಡೆಕ್ಕನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಎರಡು ದಿನ ಬಾಡಿಗೆ ಪಡೆದಿತ್ತು. ನಂತರ ಕೆಲವು ದಿನ ನಿಗಮದ ಆಂತರಿಕ ಚಟುವಟಿಕೆಗಳಿಗೆ ಟ್ರಕ್ ಬಳಕೆಯಾಗಿದ್ದು ಬಿಟ್ಟರೆ, ಹೆಚ್ಚಿನ ದಿನ ಖಾಲಿ ನಿಂತಿತ್ತು ಎಂದು ಮೂಲಗಳು ತಿಳಿಸಿವೆ.

ಕಾರ್ಗೊ ಟ್ರಕ್ ಹೆಚ್ಚು ಸುರಕ್ಷಿತವಾಗಿದ್ದು, ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿವೆ. ಒಂದು ಕಿ.ಮೀ.ನಿಂದ 100 ಕಿ.ಮೀ. ವರೆಗಿನ ಸೇವೆಗೆ ಕನಿಷ್ಠ ದರ ₹5,000 ಇದೆ. ಈ ಸೇವೆಯ ಗರಿಷ್ಠ ಅವಧಿ 12 ಗಂಟೆ ಆಗಿದ್ದು, ಕನಿಷ್ಠ ಸಾಗಣೆ ದೂರ 100 ಕಿ.ಮೀ. ಆಗಿದೆ. ಪ್ರತಿ ಕಿ.ಮೀ.ಗೆ ₹50 ದರ ಇದೆ. 1ರಿಂದ 200 ಕಿ.ಮೀ. ವರೆಗೆ ಸರಕು ಸಾಗಣೆಗೆ ಪ್ರತಿ ಕಿ.ಮೀ. ₹40 ಮತ್ತು ಕನಿಷ್ಠ ಸಂಚಾರ ದೂರ 200 ಕಿ.ಮೀ. ಈ ಸಂಚಾರದ ಪ್ರಯಾಣದ ಅವಧಿ 24 ಗಂಟೆ (ಹೊರಟ ಸಮಯದಿಂದ 24 ಗಂಟೆ ಅವಧಿ) ಆಗಿದ್ದು, ಕನಿಷ್ಠ ಬಾಡಿಗೆ ₹8,000 ಆಗಿದೆ. 200 ಕಿ.ಮೀ.ಗಿಂತ ಹೆಚ್ಚಿನ ದೂರದ ಸರಕು ಸಾಗಣೆ ಸೇವೆಗೆ ಕನಿಷ್ಠ ಬಾಡಿಗೆ ದರ ₹8,000 ಆಗಿದ್ದು, ಬಾಡಿಗೆ ಪ್ರತಿ ಕಿ.ಮೀ. ₹35 ಇದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ನಮ್ಮ ಕಾರ್ಗೊ ಸೇವೆ ಬಗ್ಗೆ ಪ್ರಚಾರ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ. ಆದರೆ ಜನರಿಂದ ಬೇಡಿಕೆ ಬರದ ಕಾರಣ ಸರ್ಕಾರದ ಬೇರೆ ಇಲಾಖೆಗೆ ಬಾಡಿಗೆ ನೀಡಲಾಗಿದೆ.
ರಾಜೇಶ್ ಶೆಟ್ಟಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಗಳೂರು ವಿಭಾಗ

ನಿಯಮವೇ ತೊಡಕು?

ಏಪ್ರಿಲ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕರ್ತವ್ಯಕ್ಕೆ ಏಪ್ರಿಲ್ ಮತ್ತು ಜೂನ್ ತಿಂಗಳುಗಳಲ್ಲಿ ಕೆಲವು ದಿನ ಚುನಾವಣಾ ಕರ್ತವ್ಯಕ್ಕೆ ಈ ವಾಹನ ಬಳಕೆಯಾಗಿದೆ. ನಮ್ಮ ಕಾರ್ಗೊಗೆ ಕನಿಷ್ಠ ದರ ₹5000 ಇದೆ. ಕಡಿಮೆ ಅಂತರದ ಸರಕು ಸಾಗಣೆಗೆ ಈ ದರ ದುಬಾರಿಯಾಗುತ್ತದೆ ಎಂದು ಕೆಲವರು ಆಕ್ಷೇಪಿಸುತ್ತಾರೆ. ಅದಕ್ಕಾಗಿ ಬಾಡಿಗೆ ಕೇಳಿ ನಂತರ ಬೇಡವೆಂದು ನಿರಾಕರಿಸಿದವರು ಇದ್ದಾರೆ. ದೂರದ ಪ್ರದೇಶಗಳಿಗೆ ಮನೆ ಸಾಮಗ್ರಿ ಕೊಂಡೊಯ್ಯಲು ಟ್ರಕ್ ಸಾಗಣೆ ಸಾಮರ್ಥ್ಯ ಕಡಿಮೆ ಇದೆ ಎಂದು ನಿರಾಕರಿಸಿದವರೂ ಇದ್ದಾರೆ. ಬೇರೆ ಬೇರೆ ಪ್ಯಾಕಿಂಗ್ ಏಜೆನ್ಸಿಗಳ ಜೊತೆಯೂ ಮಾತುಕತೆ ನಡೆಸಲಾಗಿತ್ತು. ಆದರೆ ಸಕಾರಾತ್ಮಕ ಸ್ಪಂದನ ದೊರೆತಿಲ್ಲ  ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.