
ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಸೀಡ್ಸ್ ಡಿಲೈಟ್ (12 ಗ್ರಾಂ, ₹10) ಮತ್ತು ನಂದಿನಿ ಗುವಾ ಚಿಲ್ಲಿ ಲಸ್ಸಿ (160 ಮಿ.ಲೀ, ₹15) ಉತ್ಪನ್ನವನ್ನು ಇದೇ 16ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ತಿಳಿಸಿದರು.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯುವ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಈ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಹೊಸ ಉತ್ಪನ್ನ ಗ್ರಾಹಕರಿಗೆ ಪರಿಚಯಿಸಲು ಉಭಯ ಜಿಲ್ಲೆಗಳ ಎಲ್ಲ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುವುದು. ಗ್ರಾಹಕರು ಈ ಹೊಸ ಉತ್ಪನ್ನ ಖರೀದಿಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.
ನಂದಿನಿ ಸೀಡ್ಸ್ ಡಿಲೈಟ್‌ನ್ನು ಉತ್ತಮ ಗುಣಮಟ್ಟದ ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, ನಂದಿನಿ ಹಾಲು, ನಂದಿನಿ ತುಪ್ಪ, ನಂದಿನಿ ಖೋವಾ ಬಳಸಿ ತಯಾರಿಸಲಾಗಿದೆ. ಇದರ ಸೇವನೆಯಿಂದ ಹೃದಯದ ಆರೋಗ್ಯ, ತೂಕ ನಿರ್ವಹಣೆ, ಉತ್ತಮ ಜೀರ್ಣಕ್ರಿಯೆ, ಎಚ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಕಾರಿಯಾಗಲಿದೆ ₹10 ಎಂದರು.
ನಂದಿನಿ ಗುವಾ ಚಿಲ್ಲಿ ಲಸ್ಸಿಯನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ಹಣ್ಣಿನ ರಸ, ನಂದಿನಿ ಮೊಸರು ಬಳಸಿ ತಯಾರಿಸಲಾಗಿದೆ. ಇದು ಮೂಳೆಗಳ ಬಲವರ್ಧನೆ, ಹೃದಯ/ತ್ವಚೆಯ ಆರೋಗ್ಯ ವೃದ್ಧಿ, ಉತ್ತಮ ಜೀರ್ಣಕ್ರಿಯೆ, ರಕ್ತದೊತ್ತಡ ಕಡಿಮೆ ಮಾಡಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.
ಕಳೆದ ವರ್ಷ 90 ಸಾವಿರ ಲೀಟರ್ ಇದ್ದ ಹಾಲಿನ ಸಂಗ್ರಹ ಈ ವರ್ಷ 1 ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ., ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ಚಂದ್ರಶೇಖರ, ಮಮತಾ ಶೆಟ್ಟಿ, ಸುಧಾಕರ ಶೆಟ್ಟಿ, ನಂದನ್ ರೈ, ಡೈರಿ ವ್ಯವಸ್ಥಾಪಕ ಗುರುಪ್ರಸಾದ್ ಇತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.