ಪುತ್ತೂರು: ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದಚಿತ್ರ ತಡೆದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಭಟಿಸದ ಜಿಲ್ಲೆಯ ಬಿಜೆಪಿ ನಾಯಕರಿಗೆ ನಾರಾಯಣ ಗುರುಗಳ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದೇನೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದಾರೆ. ನನ್ನ ಆರೋಪವನ್ನು ಸಾಬೀತು ಮಾಡಿದಲ್ಲಿ ರಾಜಕೀಯ ಸನ್ಯಾಸ ತೆಗೆದುಕೊಳ್ಳುವೆ’ ಅವರು ಸವಾಲು ಹಾಕಿದರು.
ನಾನು ಜನಾರ್ದನ ಪೂಜಾರಿ ಅವರ ನಾಯಕತ್ವವನ್ನು ಗೌರವಿಸಿಕೊಂಡೇ ನಾನು ಅವರ ಈ ಹೇಳಿಕೆಯನ್ನು ಖಂಡಿಸಿದ್ದೆ. ಪೂಜಾರಿಯವರದ್ದು ನಾರಾಯಣ ಗುರು ಸಿದ್ಧಾಂತವೇ, ಸಾವರ್ಕರ್ ಸಿದ್ಧಾಂತವೇ ಎಂದು ಪ್ರಶ್ನಿಸಿದ್ದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ನಾರಾಯಣ ಗುರು ಸಿದ್ಧಾಂತ ಮತ್ತು ಬಿಜೆಪಿ ಸಿದ್ಧಾಂತಕ್ಕೆ ಸಾಮ್ಯತೆ ಇದೆ ಎಂದು ಆ ನಾಯಕರು ಹೇಳಿದ್ದಾರೆ. ನಾರಾಯಣ ಗುರುಗಳದ್ದು ಸರ್ವಧರ್ಮ ಸಮನ್ವಯದ ಸಿದ್ಧಾಂತ. ಆದರೆ ಬಿಜೆಪಿಯದ್ದು ಮನುಸಿದ್ಧಾಂತದ ಕೋಮುವಾದಿ ತತ್ವವಾಗಿದೆ. ಗುರುಗಳು ಬರುವ ಮೊದಲು ಕೇರಳ ಹೇಗಿತ್ತು, ಬಳಿಕ ಹೇಗಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಾರಾಯಣ ಗುರು ಸಿದ್ಧಾಂತ ಕೇರಳದಲ್ಲಿ ಗಟ್ಟಿಯಾಗಿ ಇರುವುದರಿಂದಲೇ ಅಲ್ಲಿ ಬಿಜೆಪಿಗೆ ನೆಲೆ ಸಿಕ್ಕಿಲ್ಲ ಎಂದರು.
ಜನಾರ್ದನ ಪೂಜಾರಿ ಅವರ ಮೇಲೆ ಅತಿಹೆಚ್ಚು ಅಪಪ್ರಚಾರ ಮಾಡಿದವರು ಬಿಜೆಪಿಯವರು. ಹಿಂದೆ ಪುತ್ತೂರಿನ ಪಡೀಲಿನಲ್ಲಿ ಪೂಜಾರಿ ಅವರ ಮೇಲೆ ನಡೆದ ದಾಳಿಯಲ್ಲಿ ಬಿಜೆಪಿ ಕುಮ್ಮಕ್ಕಿತ್ತು. ಪೂಜಾರಿ ಅವರು ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಕೆಲ ಹೇಳಿಕೆಗಳ ಹಿಂದೆ ಹರಿಕೃಷ್ಣ ಬಂಟ್ವಾಳ್ ಮತ್ತು ಇತರ ಬಿಜೆಪಿ ನಾಯಕರ ಪಾತ್ರವಿದೆ ಸುಪಾರಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಮೌರೀಸ್ ಮಸ್ಕರೇನಸ್, ಸುರೇಶ್ ಪೂಜಾರಿ, ಬಾತಿಷಾ ಅಳಕೆ ಮಜಲು, ವಿಕ್ಟರ್ ಪಾಯಸ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.