ADVERTISEMENT

ನೆಲ್ಯಾಡಿ (ಉಪ್ಪಿನಂಗಡಿ): ಅಪಾಯದ ತಾಣ ಲಾವತ್ತಡ್ಕ ತಿರುವು

ರಾಷ್ಟ್ರೀಯ ಹೆದ್ದಾರಿ; ಬಂಡೆ ತಪ್ಪಿಸಲು ನೇರ ರಸ್ತೆಯಲ್ಲೇ ತಿರುವು ನಿರ್ಮಾಣ

ಸಿದ್ದಿಕ್ ನೀರಾಜೆ
Published 5 ಫೆಬ್ರುವರಿ 2026, 5:57 IST
Last Updated 5 ಫೆಬ್ರುವರಿ 2026, 5:57 IST
<div class="paragraphs"><p><strong>ಲಾವತ್ತಡ್ಕ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾವತ್ತಡ್ಕದಲ್ಲಿ ಚತುಷ್ಪಥ ರಸ್ತೆ ಅವೈಜ್ಞಾನಿಕವಾಗಿ ಹಠತ್ತಾನೆ ತಿರುವು ಪಡೆದುಕೊಂಡಿದೆ.</strong></p></div>

ಲಾವತ್ತಡ್ಕ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾವತ್ತಡ್ಕದಲ್ಲಿ ಚತುಷ್ಪಥ ರಸ್ತೆ ಅವೈಜ್ಞಾನಿಕವಾಗಿ ಹಠತ್ತಾನೆ ತಿರುವು ಪಡೆದುಕೊಂಡಿದೆ.

   

ನೆಲ್ಯಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶಿರಾಡಿಯ ಅಡ್ಡ ಹೊಳೆಯಿಂದ ಬಿ.ಸಿ.ರೋಡ್ ವರೆಗಿನ 63 ಕಿ.ಮೀ ಉದ್ದದ ಚತುಷ್ಪಥ ಕಾಮಗಾರಿ ಅನು ಷ್ಠಾನದ ವೇಳೆ, ಅನೇಕ ಕಡೆ ತಿರುವುಗಳನ್ನು ತೆರವುಗೊಳಿಸಿ ನೇರ ಮಾರ್ಗ ನಿರ್ಮಿಸಲಾಗಿದೆ. ಆದರೆ, ಉದನೆ ಸಮೀಪದ ಲಾವತ್ತಡ್ಕ ಎಂಬಲ್ಲಿನ ತಿರುವು ಮಾತ್ರ ‘ಯು– ಟರ್ನ್‌’ ರೀತಿ ಇದೆ. ಇದು ಹೆದ್ದಾರಿಯ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಇಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದೆ ಎಂದು ವಾಹನ ಚಾಲಕರು ಆರೋಪಿಸುತ್ತಿದ್ದಾರೆ.

ಉದನೆ ಪೇಟೆ ಕಡೆಯಿಂದ ಸಾಗಿ ಬರುವ ರಸ್ತೆ ಲಾವತ್ತಡ್ಕದಲ್ಲಿ ಹಠಾತ್ ತಿರುವು ಪಡೆದುಕೊಳ್ಳುತ್ತದೆ.  ತುಸು ದೂರದಲ್ಲೇ ಮತ್ತೆ ತಿರುವು ಪಡೆದುಕೊಳ್ಳುತ್ತದೆ. ಮೊದಲ ತಿರುವಿನ ಬಳಿ ಕೆಲ ವಾಹನಗಳು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆಯುತ್ತಿವೆ. ಇನ್ನೂ ಮುಂದೆ ಸಾಗಿದಾಗ ಮತ್ತೆ ತಡೆಗೋಡೆಗೆ ಡಿಕ್ಕಿ ಹೊಡೆಯುವ ಸ್ಥಿತಿ ಇದೆ. ಕಾಮಗಾರಿ ಪೂರ್ಣಗೊಂಡು ಆರು ತಿಂಗಳುಗಳಾಗಿದ್ದು, ಈ ಅವಧಿಯಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ನೇರ ರಸ್ತೆಯನ್ನೇ ತಿರುಗಿಸಿದರು: ಸಮಗ್ರ ಯೋಜನಾ ವರದಿಯಲ್ಲಿ ಲಾವತ್ತಡ್ಕ ಪೇಟೆಯಿಂದ ರಸ್ತೆ ನೇರವಾಗಿ ಹಾದುಹೋಗಿತ್ತು. ಆದರೆ, ಕಾಮಗಾರಿಯ ಗುತ್ತಿಗೆದಾರರು ಬದಲಾದರು. ರಸ್ತೆ ನೇರವಾಗಿ ಸಾಗುವ ಕಡೆ ಭಾರಿ ಗಾತ್ರದ ಬಂಡೆ ಕಲ್ಲುಗಳಿವೆ ಎಂಬ ಕಾರಣಕ್ಕೆ  ತಿರುವುಗಳಿಂದ ಕೂಡಿದ ರಸ್ತೆ ನಿರ್ಮಿಸಿರುವುದೇ ಇಲ್ಲಿ ಅಪಘಾತ ಸಂಭವಿಸಲು ಕಾರಣ ಎಂಬುದು ಗ್ರಾಮಸ್ಥರ ಆರೋಪ.

‘ಇಲ್ಲಿ ರಸ್ತೆಯನ್ನು ತೀರಾ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ರಸ್ತೆ ಸಮತಟ್ಟಾಗಿಲ್ಲ. ಇಳಿಜಾರಿನಲ್ಲಿ  ವೇಗವಾಗಿ ಬರುವ ವಾಹನಗಳಿಗೆ ಏಕಾಏಕಿ ತಿರುವು ಸಿಗುತ್ತದೆ.  ವಾಹನ ನಿಯಂತ್ರಣಕ್ಕೆ ಸಿಗುತ್ತಿಲ್ಲ, ಹೀಗಾಗಿ ಇಲ್ಲಿ ಅಪಘಾತ ತಪ್ಪಿಸುವುದು ಕಷ್ಟ’ ಎಂದು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ರಮೇಶ್ ಕುಮಾರ್ ತಿಳಿಸಿದರು.

‘ಆರು ತಿಂಗಳಲ್ಲಿ 22ಕ್ಕೂ ಹೆಚ್ಚು ಅಪಘಾತ’

‘ಲಾವತ್ತಡ್ಕ ಕಡೆಯಿಂದ ಸಾಗುವ ರಸ್ತೆ ತೀರಾ ಇಳಿಜಾರಿನಿಂದ ಕೂಡಿದೆ.  ವೇಗವಾಗಿ ಸಾಗಿಬರುವ ವಾಹನಗಳಿಗೆ ಇಲ್ಲಿ ಹಠಾತ್ ತಿರುವು ಎದುರಾಗುತ್ತದೆ. ಚಾಲಕನ ನಿಯಂತ್ರಣಕ್ಕೆ ಸಿಗದೆ ವಾಹನ ಒಂದೋ ಪಲ್ಟಿಯಾಗುತ್ತಿದೆ ಅಥವಾ ತಡೆಗೋಡೆಗೆ ಡಿಕ್ಕಿ ಹೊಡೆಯುತ್ತಿದೆ. 6 ತಿಂಗಳಲ್ಲಿ 22ಕ್ಕೂ  ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸಿವೆ’ ಎಂದು ಜೋಸ್ ತಿಳಿಸಿದರು.