
ಮಂಗಳೂರು: ‘ಬಿಹಾರ ಚುನಾವಣೆಯಲ್ಲಿ ಬೇರೆ ಬೇರೆ ಆಮಿಷಗಳ ಮೂಲಕ ಜನರ ದಾರಿ ತಪ್ಪಿಸಿದ್ದರಿಂದ ಎನ್‌ಡಿಎಗೆ ಯಶಸ್ಸು ಸಿಕ್ಕಿದೆ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಿಹಾರ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಆ ರಾಜ್ಯದ ಮಹಿಳೆಯರ ಖಾತೆಗೆ ತಲಾ ₹ 10 ಸಾವಿರ ಹಣ ಹಾಕಿ, ಮತ ಕೇಳಿದರೂ ಕೇಂದ್ರ ಚುನಾವಣೆ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹ ವಿಚಾರದಲ್ಲೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಎಲ್ಲ ಸರ್ಕಾರಗಳು ಇದೇ ಮಾದರಿಯನ್ನು ಅನುಸರಿಸಲಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜನರಿಗೆ ಆಶ್ವಾಸನೆ ನೀಡಿದ್ದರೆ, ಎನ್‌ಡಿಎ ಸರ್ಕಾರದ ದುಡ್ಡನ್ನು ಚುನಾವಣೆಗೆ ಬಳಸಿ ಆಮಿಷ ಒಡ್ಡಿತ್ತು. ಬಿಹಾರದ ಜಿಡಿಪಿಯ ಶೇ 2.7ರಷ್ಟು ಹಣವನ್ನು ಜನರಿಗೆ ಹಂಚಿತ್ತು’ ಎಂದರು.
‘ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಚುನಾವಣೆಗಳಿಗೆ ವ್ಯತ್ಯಾಸವಿದೆ. ಅಲ್ಲಿ ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಮತ ವಿಭಜನೆ ಮಾಡುತ್ತಾರೆ. ಈ ತಂತ್ರವು ದಕ್ಷಿಣ ಭಾರತದಲ್ಲಿ ನಡೆಯದು. ಕರ್ನಾಟಕದಲ್ಲಿ ಬಿಜೆಪಿಗೆ ಈ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಇದುವರೆಗೆ ಸಾಧ್ಯವಾಗಿಲ್ಲ. ಬಿಜೆಪಿ ಇಲ್ಲಿ ಯಾವತ್ತೂ ಗೆದ್ದಿಲ್ಲ’ ಎಂದರು.