ADVERTISEMENT

ಮೂತ್ರಕೋಶ ಸಮಸ್ಯೆ– ಹೊಸ ಆವಿಷ್ಕಾರಕ್ಕೆ ಒತ್ತು ನೀಡಿ; ಎನ್‌.ಆರ್‌.ನಾರಾಯಣಮೂರ್ತಿ

ಡಾ.ಎಚ್‌.ಸುದರ್ಶನ ಬಲ್ಲಾಳ್ ದತ್ತಿ ಉಪನ್ಯಾಸ: ಎನ್‌.ಆರ್‌.ನಾರಾಯಣಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:15 IST
Last Updated 11 ಡಿಸೆಂಬರ್ 2025, 4:15 IST
ಮಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಎಚ್.ಸುದರ್ಶನ್ ಬಲ್ಲಾಳ್ ಹಾಗೂ  ಎನ್‌. ಆರ್‌. ನಾರಾಯಣ ಮೂರ್ತಿ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು: ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಡಾ.ಎಚ್.ಸುದರ್ಶನ್ ಬಲ್ಲಾಳ್ ಹಾಗೂ  ಎನ್‌. ಆರ್‌. ನಾರಾಯಣ ಮೂರ್ತಿ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: 'ಭಾರತದಲ್ಲಿ ಮೂತ್ರಕೋಶ ಕಾಯಿಲೆ ಗಣನೀಯವಾಗು ಹೆಚ್ಚಳವಾಗುತ್ತಿದ್ದು, ಇದನ್ನು ನಿಭಾಯಿಸಲು ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರಕ್ಕೆ ಒತ್ತು ನೀಡಬೇಕು. ಅಗ್ಗದ ಚಿಕಿತ್ಸೆಯು ಎಲ್ಲ ಕಡೆ ಲಭ್ಯವಾಗಬೇಕು. ಮೂತ್ರಕೋಶ ದಾನದ ಜಾಗೃತಿ ಮೂಡಿಸಲು ರಾಷ್ಟ್ರಮಟ್ಟದ ಅಭಿಯಾನ ನಡೆಯಬೇಕು’ ಎಂದು ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಹೇಳಿದರು.  

ಕಸ್ತೂರಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಮೂತ್ರಕೋಶ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಎಚ್‌.ಸುದರ್ಶನ ಬಲ್ಲಾಳ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮೂತ್ರಕೋಶ ಕಾಯಿಲೆಗೆ ಮಹಾನಗರಗಳಲ್ಲಿ ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವ ಆಸ್ಪತ್ರೆಗಳಿವೆ. ವಿಪರ್ಯಾಸವೆಂದರೆ ಗ್ರಾಮೀಣ ಪ್ರದೇಶದಲ್ಲಿ ದುರ್ಬಲ ವರ್ಗದ ಜನರಿಗೆ ಈಗಲೂ ಮೂತ್ರಕೋಶಕ್ಕೆ ಸಂಬಂಧಿಸಿದ ಮೂಲಭೂತ ಸೇವೆಗಳೂ ಲಭಿಸುತ್ತಿಲ್ಲ. ದೀರ್ಘಾವಧಿ ಬಾಧಿಸುವ ಮೂತ್ರಕೋಶ ಕಾಯಿಲೆಯು, ಗ್ರಾಮೀಣ ಭಾರತದಲ್ಲಂತೂ ಉಲ್ಬಣಗೊಂಡ ಬಳಿಕವೇ ಪತ್ತೆಯಾಗುತ್ತಿದೆ. ಇದು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳಿಗೂ ಕಾರಣವಾಗುತ್ತಿದೆ’ ಎಂದರು.

ADVERTISEMENT

‘ದೀರ್ಘಕಾಲ ಬಾಧಿಸುವ ಮೂತ್ರಕೋಶ ಸಮಸ್ಯೆ  ಲಕ್ಷಾಂತರ ಜನರನ್ನು ಬಾಧಿಸುತ್ತಿದೆ.  ತಮಗೂ ಈ ಸಮಸ್ಯೆ ಇದೆ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಸರ್ಕಾರ ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಆರಂಭಿಸಿದೆ. ಆದರೆ ಗ್ರಾಮೀಣ  ಜನರು ವಾರದಲ್ಲಿ ಮೂರು ದಿನ  ಡಯಾಲಿಸಿಸ್ಗೆ ಒಳಗಾಗಲು ಗಂಟೆಗಟ್ಟಲೆ ಪ್ರಯಾಣಿಸಬೇಕಾಗಿದೆ. ಮನೆಯಲ್ಲೇ ಡಯಾಲಿಸಿಸ್ ಮಾಡಿಕೊಳ್ಳುವಂತಹ ತಂತ್ರಜ್ಞಾನ ಅಭಿವೃದ್ಧೀಪಡಿಸಬೇಕು’ ಎಂದರು.

‘ಸಾವಿರಾರು ರೋಗಿಗಳು ಮೂತ್ರಕೋಶ ದಾನಿಗಳಿಗಾಗಿ ಕಾಯುತ್ತಿದ್ದಾರೆ. ಬೇಡಿಕೆ ಹಾಗೂ ಪೂರೈಕೆ ನಡುವೆ ಭಾರಿ ಅಂತರ ಇದೆ.  ಜಾಗೃತಿ ಕೊರತೆ, ಮೂಲಸೌಕರ್ಯ ಕೊರತೆಯೂ ಇದಕ್ಕೆ ಕಾರಣ. ಮೂತ್ರಪಿಂಡ ವೈಫಲ್ಯ ಚಿಕಿತ್ಸೆ ವೆಚ್ಚ ಭರಿಸುವ ಶಕ್ತಿ ಅನೇಕರಿಗೆ ಇಲ್ಲ. ಜಿಲ್ಲಾ ಮಟ್ಟದಲ್ಲಿ ಅಂಗಾಂಗ ಕಸಿ ಕೇಂದ್ರಗಳನ್ನು ತೆರಯಬೇಕು.  ಮೂತ್ರಕೋಶ ದಾನಿಗಳ ಮಾಹಿತಿಯನ್ನು ಆನ್ಲೈನ್ ವೇದಿಕೆಗಳಲ್ಲಿ ಹಂಚಿಕೊಂಡು, ಈ ಚಿಕಿತ್ಸೆ ಗ್ರಾಮೀಣ ಜನರಿಗೂ ಲಭಿಸುವಂತಾಗಬೇಕು’ ಎಂದರು.  

‘ಮೂತ್ರಕೋಶ ಸಂಬಂಧಿ ಕಾಯಿಲೆಯ ಚಿಕಿತ್ಸೆಯ ಸುಧಾರಣೆಯಲ್ಲಿ ಡಾ.ಬಲ್ಲಾಳ್ ಅವರಂತಹರ ಕೊಡುಗೆ ಮಹತ್ವದ್ದು. ಅವರು ಸವಾಲುಗಳ ಜೊತೆ ಹೊಂದಾಣಿಕೆ ಮಾಡಲಿಲ್ಲ. ಆರಂಭಿಕ ಹಂತದಲ್ಲೇ ಈ ಸಮಸ್ಯೆ ಪತ್ತೆಗೆ ಕ್ರಮ ವಹಿಸಿದರು. ರೋಗಿಗಳಿಗೆ ಅಂಗಾಂಗ ದಾನ ಉತ್ತೇಜಿಸಿದರು’ ಎಂದರು. 

ಮಾಹೆಯ ಸಹಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. 

ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಪ್ರೈವೇಟ್ ಲಿಮಿಟೆಡ್‌ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್‌ ಪ್ರಸ್ತಾವಿಕವಾಗಿ ಮಾತನಾಡಿದರು. 

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್‌ ಡಾ.ಎಂ.ಡಿ.ವೆಂಕಟೇಶ್‌, ಸಹಕುಲಪತಿ ಡಾ.ಶರತ್‌ ಕೆ.ರಾವ್‌, ಡಾ.ದಿಲೀಪ್ ಜಿ.ನಾಯಕ್‌, ಸಿಒಒ ಡಾ.ಆನಂದ ವೇಣುಗೋಪಾಲ್‌, ಕೆಎಂಸಿ ಡೀನ್ ಡಾ.ಉನ್ನಿಕೃಷ್ಣನ್‌ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಸುನಿಲ್ ಕಾರಂತ್‌  ಮತ್ತಿತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.