ADVERTISEMENT

ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಉದ್ಘಾಟನೆ 

ಬದಲಾದ ಸಮಯಕ್ಕೆ ಹೊಸ ಶಿಕ್ಷಣ ನೀತಿ ಸೂಕ್ತ; ಡಾ. ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 7:54 IST
Last Updated 30 ಆಗಸ್ಟ್ 2021, 7:54 IST
   

ಮಂಗಳೂರು: ‘ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ. ‌ಅದಕ್ಕಾಗಿ ಸಮಗ್ರವಾಗಿರುವ ಹೊಸ ಶಿಕ್ಷಣ ನೀತಿಯು ಬದಲಾದ ಸಮಯಕ್ಕೆ ಸೂಕ್ತವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎ‌ನ್. ಆಶ್ವತ್ಥ ನಾರಾಯಣ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಮೂಡುಬಿದಿರೆಯಲ್ಲಿ ವಿಶ್ವವಿದ್ಯಾಲಯದ ಘಟಕ ಕಾಲೇಜು ಉದ್ಘಾಟಿಸಿ ಅವರು‌ ಮಾತನಾಡಿದರು.

ಶಿಕ್ಷಣಕ್ಕೆ ಕೊಡಬೇಕಾದ ಆದ್ಯತೆ‌ ಸಿಗದೇ ಇರುವುದರಿಂದ ಜಾಗತಿಕವಾಗಿ ನಾವು ಹಿಂದುಳಿಯುವಂತಾಗಿದೆ. ಸೂಕ್ತಕಾಲದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳದೇ ಇರುವುದರಿಂದ ಸಮಾಜಕ್ಕೆ ನಷ್ಟವಾಗಿದೆ ಎಂದರು.

ADVERTISEMENT

34 ವರ್ಷಗಳ‌ ನಂತರ ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ. 3 ಲಕ್ಷಕ್ಕಿಂತ ಹೆಚ್ಚು ಸಲಹೆ ಸ್ವೀಕರಿಸಿ, ಈ ನೀತಿಯನ್ನು ಜಾರಿಗೊಳಿಸಲಾಗಿದೆ. ಒಂದು ‌ವರ್ಷದ ನಂತರ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶಿಕ್ಷಣ ನೀತಿ ಅನುಷ್ಠಾನಕ್ಕೆ ಡಿಸೆಂಬರ್ ನಲ್ಲಿ ಸಚಿವ ಸಂಪುಟದ ಒಪ್ಪಿಗೆ ನೀಡಲಾಯಿತು. ಅನುಷ್ಠಾನ, ಜಾಗೃತಿ, ಸಹಾಯವಾಣಿ ಸೇರಿದಂತೆ ಅಗತ್ಯ ಸಹಕಾರವನ್ನು‌ ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

10 ಸಾವಿರ ಪ್ರಾಧ್ಯಾಪಕರಿಗೆ ವರ್ಷದಲ್ಲಿ ತರಬೇತಿ‌ ನೀಡಲಾಗುತ್ತಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಕಲಿಕೆ, ಮೌಲ್ಯಮಾಪನ, ಪಠ್ಯಕ್ರಮ ಬಹಳಷ್ಟು ಸುಧಾರಣೆ ಆಗಬೇಕು.‌ ಸಮಾಜದ ಸಂಪನ್ಮೂಲವನ್ನು ಇದಕ್ಕೆ ವಿನಿಯೋಗಿಸಬೇಕು. ಅಂದಾಗ 10 ಪಟ್ಟು ಸಮಾಜಕ್ಕೆ ತಿರುಗಿ ಬರುತ್ತದೆ ಎಂದರು.

ಮಕ್ಕಳನ್ನು ಆಟದ ಮೈದಾನದಲ್ಲಿ ನೋಡಲು ಸಿಗುತ್ತಿಲ್ಲ. ಸಾಮಾಜಿಕ ಹಾಗೂ ಮಾನಸಿಕ, ದೈಹಿಕ ಸಾಮರ್ಥ್ಯ ಇರುವುದಿಲ್ಲ. ಪರಿಪೂರ್ಣ ವ್ಯಕ್ತಿತ್ವ‌ಇಲ್ಲದ ವ್ಯಕ್ತಿಗಳನ್ನು ಬೆಳೆಸುವುದರಿಂದ ಏನೂ ಸಾಧನೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಸೆಮಿಸ್ಟರ್ ನಲ್ಲಿ ಮಾತ್ರ ಮೌಲ್ಯಮಾಪನ ನಡೆಯುತ್ತಿತ್ತು. ಈಗ ಪ್ರತಿ ತರಗತಿಯಲ್ಲೂ, ಪ್ರತಿ ವಿದ್ಯಾರ್ಥಿಯ ಮೌಲ್ಯಮಾಪನ ಮಾಡುವ ಮೂಲಕ ಜಾಗತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿ‌ ಕೇಂದ್ರಿತ ಹೊಸ ಶಿಕ್ಷಣ ನೀತಿಯ ಮೂಲಕ‌ ಶೈಕ್ಷಣಿಕ, ಆಡಳಿತದಲ್ಲಿ ಸುಧಾರಣೆ ಆಗಲಿದೆ ಎಂದರು.

ಶಿಕ್ಷಣ ಸಂಸ್ಥೆಗಳಿಗೆ‌ಸ್ವಾಯತ್ತತೆ: ಪ್ರತಿ ಸಂಸ್ಥೆಯು ಪದವಿ ನೀಡುವ ಸ್ವಾಯತ್ತತೆ ನೀಡಲು‌ ಚಿಂತಿಸಲಾಗಿದೆ. ಐಐಟಿಯ ರೀತಿಯಲ್ಲಿಯೇ ಪ್ರತಿ ಸಂಸ್ಥೆಯೂ ಸ್ವಾಯತತ್ತೆ ಪಡೆಯಬೇಕು. ಇದರಿಂದ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಸಮಾಜದ ಏಳ್ಗೆ ಸಾಧ್ಯವಾಗಲಿದೆ ಎಂದರು.

ಕುಲಪತಿ‌ ಡಾ.ಪಿ.ಎಸ್.ಯಡಪಡಿತ್ತಾಯ‌ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಎಲ್. ಹೆಗ್ಡೆ ಶುಭಾಶಂಸನೆ ಮಾಡಿದರು. ಶಾಸಕರಾದ ಉಮಾನಾಥ ಕೋಟ್ಯಾನ್, ಲಾಲಜಿ ಮೆಂಡನ್, ವಿಧಾನ ಪರಿಷತ್ ಮಾಜಿ‌ಸದಸ್ಯ‌ ಕ್ಯಾ.ಗಣೇಶ್ ಕಾರ್ಣಿಕ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ‌ ಪ್ರದೀಪ್ ಪಿ., ಕುಲಸಚಿವರಾದ ಪ್ರೊ.ಕಿಶೋರ್ ಕುಮಾರ್ ಸಿ.ಕೆ., ಡಾ.ಪಿ.ಎಲ್.‌ಧರ್ಮ, ಹಣಕಾಸು ಅಧಿಕಾರಿ ಡಾ.ಬಿ. ನಾರಾಯಣ ವೇದಿಕೆಯಲ್ಲಿದ್ದರು.

–––––––
'ಶಿಕ್ಷಣ ಕ್ಷೇತ್ರ ಲಾಭದಿಂದ ಹೊರತು'
ಶಿಕ್ಷಣ ಕ್ಷೇತ್ರ ಲಾಭದಿಂದ ಹೊರತಾಗಿದೆ. ಹಾಗಾಗಿ ಖಾಸಗಿ, ಸರ್ಕಾರಿ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡಲು ಆದ್ಯತೆ ನೀಡಬೇಕೆ ಹೊರತು ಲಾಭಕ್ಕಲ್ಲ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದರು.
ಸಂಸ್ಥೆಗಳು ಸಬಲವಾಗಿದ್ದಾಗ ಮಾತ್ರ, ಉತ್ತಮ ಶಿಕ್ಷಣ ಸಿಗಲು ಸಾಧ್ಯ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ‌ ಅಗತ್ಯವಾಗಿದೆ ಎಂದರು.

––––
ಸ್ವಾತಂತ್ರ್ಯದ ಶತಮಾನೋತ್ಸವ‌ದ ಸಂದರ್ಭದಲ್ಲಿ ಭಾರತ ವಿಶ್ವಗುರು ಆಗಬೇಕು. ಹೊಸ ಶಿಕ್ಷಣ ನೀತಿಯ ಮೂಲಕ ಇದು ಸಾಧ್ಯವಾಗಲಿದೆ.
ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.